Greta Thunberg Toolkit Case: ವಕೀಲೆ ನಿಕಿತಾ ಜೇಕಬ್​ಗೆ ಬಾಂಬೆ ಹೈಕೋರ್ಟ್ ಜಾಮೀನು

Greta Thunberg Toolkit Case: ಮುಂಬೈ ಮೂಲದ ವಕೀಲೆ,  ಪರಿಸರವಾದಿ ನಿಕಿತಾ ಜೇಕಬ್ ಅವರಿಗೆ ಬಾಂಬೆ ಹೈಕೋರ್ಟ್ ಬುಧವಾರ ಮೂರು ವಾರಗಳ ಪ್ರಯಾಣ ಕಾಲದ ನಿರೀಕ್ಷಣಾ ಜಾಮೀನು ನೀಡಿದೆ.

Greta Thunberg Toolkit Case: ವಕೀಲೆ ನಿಕಿತಾ ಜೇಕಬ್​ಗೆ ಬಾಂಬೆ ಹೈಕೋರ್ಟ್ ಜಾಮೀನು
ನಿಕಿತಾ ಜೇಕಬ್

Updated on: Feb 17, 2021 | 2:09 PM

ಮುಂಬೈ: ಗ್ರೇಟಾ ಥನ್​ಬರ್ಗ್​ ಟ್ವೀಟ್ ಮಾಡಿದ್ದ ಟೂಲ್​ಕಿಟ್ ಸಿದ್ಧಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿದ್ದ ಮುಂಬೈ ಮೂಲದ ವಕೀಲೆ,  ಪರಿಸರವಾದಿ ನಿಕಿತಾ ಜೇಕಬ್ ಅವರಿಗೆ ಬಾಂಬೆ ಹೈಕೋರ್ಟ್ ಬುಧವಾರ ಮೂರು ವಾರಗಳ ಪ್ರಯಾಣ ಕಾಲದ ನಿರೀಕ್ಷಣಾ ಜಾಮೀನು (Transit Anticipatory Bail) ನೀಡಿದೆ. ಟೂಲ್​ಕಿಟ್ ಪ್ರಕರಣದಲ್ಲಿ ದೆಹಲಿಯ ತೀಸ್ ಹಜಾರಿ ನ್ಯಾಯಾಲಯ ನಿಕಿತಾ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು .

ಜಾಮೀನು ಮನವಿ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಡಿ.ನಾಯಕ್ ಅವರ ಏಕಸದಸ್ಯ ಪೀಠವು ಪೊಲೀಸ್ ಅಧಿಕಾರಿಗಳು ಆಕೆಯ ಮನೆಯಿಂದ ಲ್ಯಾಪ್​ಟಾಪ್, ಫೋನ್ ವಶಪಡಿಸಿಕೊಂಡು ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಹಾಗಾಗಿ ನಿಕಿತಾ ತನಿಖೆಗೆ ಲಭ್ಯವಿದ್ದಾರೆ ಎಂಬುದನ್ನು ಪರಿಗಣಿಸಿ ಜಾಮೀನು ನೀಡಲಾಗಿದೆ ಎಂದಿದೆ.  ಒಂದು ವೇಳೆ ನಿಕಿತಾ ಅವರು ಬಂಧನಕ್ಕೊಳಗಾದರೆ ₹25,000 ವೈಯಕ್ತಿಕ ಮುಚ್ಚಳಿಕೆ ಮತ್ತು ಅದೇ ಮೊತ್ತದ ಜಾಮೀನು ನೀಡಿದರೆ ಆಕೆಯನ್ನು ಬಿಡುಗಡೆ ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ.

ರೈತರ ಹೋರಾಟದ ಬಗ್ಗೆ ಗ್ರೇಟಾ ಥನ್ ಬರ್ಗ್ ಹಂಚಿಕೊಂಡ ಟೂಲ್ ಕಿಟ್ ಸಿದ್ಧಪಡಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಪರಿಸರವಾದಿ ದಿಶಾ ರವಿ, ನಿಕಿತಾ ಜೇಕಬ್, ಶಂತನು ಮುಲಕ್ ಅವರನ್ನು ಬಂಧಿಸಲಾಗಿತ್ತು. ರವಿ ಈಗಲೂ ಬಂಧನದಲ್ಲಿದ್ದು, ಮುಲಕ್ ಅವರಿಗ ಬಾಂಬೆ ಹೈಕೋರ್ಟ್​ನ ಔರಂಗಾಬಾದ್ ಪೀಠವು ಸೋಮವಾರ 10 ದಿನಗಳ ಪ್ರಯಾಣ ಕಾಲದ ನಿರೀಕ್ಷಣಾ ಜಾಮೀನು ನೀಡಿತ್ತು.

ಇದನ್ನೂ ಓದಿ: Greta Thunberg Toolkit case: ಟೂಲ್​ಕಿಟ್ ತಯಾರಿಸಿದ ಆರೋಪ; ಶಂತನು ಮುಲುಕ್​ಗೆ 10 ದಿನಗಳ ನಿರೀಕ್ಷಣಾ ಜಾಮೀನು ಮಂಜೂರು

ನಿಕಿತಾ ಜೇಕಬ್ ತಲೆಮರೆಸಿಕೊಂಡಿದ್ದಾರೆ ಎಂದು ತಪ್ಪಾದ ನೆಪ ಹೇಳಿ ದೆಹಲಿ ಪೊಲೀಸರು ಜಾಮೀನು ರಹಿತ ವಾರೆಂಟ್ ಕಳಿಸಿದ್ದಾರೆ ಎಂದು ಆಕೆಯ ಪರ ವಾದಿಸುತ್ತಿರುವ ನ್ಯಾಯವಾದಿ ಮಿಹಿರ್ ದೇಸಾಯಿ, ಅಭಿಷೇಕ್ ಯೆಂಡೆ ಮತ್ತು ಸಂಜುಕ್ತಾ ಡೇ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ದೆಹಲಿ ಸೈಬರ್ ಪೊಲೀಸರ ಪರ ವಾದಿಸುತ್ತಿರುವ ವಕೀಲ ಹಿತೇನ್ ವೆನೆಗಾಂವ್ಕರ್ , ಇಡೀ ದಿನ ಆಕೆಗಾಗಿ ಕಾದು ಆಕೆ ಸಿಗದೇ ಇದ್ದಾಗ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು ಎಂದಿದ್ದಾರೆ.

Published On - 1:55 pm, Wed, 17 February 21