Toolkit: ಬಂಧಿತ ದಿಶಾ ರವಿಗೆ ಕಾನೂನು ನೆರವು ನೀಡಲು ಮುಂದಾದ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ

Greta Thunberg Toolkit Case: 21 ವರ್ಷ ವಯಸ್ಸಿನ ದಿಶಾ ರವಿ ಬಂಧನವಾಗಿದೆ. ಅವಳಿಗೆ ಸೂಕ್ತ ಕಾನೂನು ಸಹಾಯ ನೀಡಲು ನಾನು ಬಯಸುತ್ತೇನೆ ಎಂದು ರಾಬರ್ಟ್ ವಾದ್ರಾ ತಿಳಿಸಿದ್ದಾರೆ.

  • TV9 Web Team
  • Published On - 12:59 PM, 17 Feb 2021
Toolkit: ಬಂಧಿತ ದಿಶಾ ರವಿಗೆ ಕಾನೂನು ನೆರವು ನೀಡಲು ಮುಂದಾದ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ
ರಾಬರ್ಟ್ ವಾದ್ರಾ ಹಾಗೂ ದಿಶಾ ರವಿ

ದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ, ಉದ್ಯಮಿ ರಾಬರ್ಟ್ ವಾದ್ರಾ ಪರಿಸರ ಹೋರಾಟಗಾರ್ತಿ ದಿಶಾ ರವಿಗೆ (Disha Ravi) ಕಾನೂನು ಸಹಾಯ ಮಾಡುವ ಬಗ್ಗೆ ಚಿಂತಿಸಿರುವುದಾಗಿ ಮಂಗಳವಾರ (ಫೆ.16) ತಿಳಿಸಿದ್ದಾರೆ. ರೈತರ ಹೋರಾಟಕ್ಕೆ ಸಂಬಂಧ ಟೂಲ್​ಕಿಟ್ ಪ್ರಕರಣದಲ್ಲಿ, ಭಾನುವಾರ ದಿಶಾ ರವಿ ಬಂಧನವಾಗಿತ್ತು. ಸ್ವೀಡನ್ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್​ಬರ್ಗ್ ಜತೆ (Greta Thunberg) ಟೂಲ್​ಕಿಟ್ ಹಂಚಿಕೊಂಡಿರುವ ಆರೋಪದಲ್ಲಿ ದೆಹಲಿ ಪೊಲೀಸರು ದಿಶಾಳನ್ನು ಬಂಧಿಸಿದ್ದರು. Toolkit

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ರಾಬರ್ಟ್ ವಾದ್ರಾ, ‘ದೇಶದಲ್ಲಿ ಕೆಲವಾರು ಅಪವ್ಯಸನಗಳು ಉಂಟಾಗುತ್ತಿರುವುದನ್ನು ನಾನು ಗಮನಿಸುತ್ತಿದ್ದೇನೆ. ನಮ್ಮ ಕುಟುಂಬ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡಿದೆ. ಹಾಗಾಗಿ, ದೇಶಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲೂ ಅವರು ಭಾಗಿಯಾಗುತ್ತಾರೆ. ಈ ನಡುವೆ 21 ವರ್ಷ ವಯಸ್ಸಿನ ದಿಶಾ ರವಿ ಬಂಧನವಾಗಿದೆ. ಅವಳಿಗೆ ಸೂಕ್ತ ಕಾನೂನು ಸಹಾಯ ನೀಡಲು ನಾನು ಬಯಸುತ್ತೇನೆ’ ಎಂದು ANI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ದೇಶದಲ್ಲಿ ತಪ್ಪಾಗಿ ಉಪಚರಿಸಲ್ಪಡುವ ಜನರನ್ನು ನಾವು ಬೆಂಬಲಿಸುತ್ತೇವೆ. ಹಾಗೆಂದು ನಾವು ದೇಶದ್ರೋಹಿಗಳು ಅಥವಾ ದೇಶ ವಿರೋಧಿಗಳು ಅಲ್ಲ. ನಾನು ರೈತರಿಗೆ ಸಹಾಯ ಮಾಡಬಹುದು (Farmers Protest). ಅವರಿಗೆ ಆಹಾರ ಪದಾರ್ಥಗಳನ್ನು ಒದಗಿಸಬಹುದು. ನನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಸಹಕಾರ ನೀಡಬಹುದು. ಅದಕ್ಕಾಗಿ ನಾನು ದೇಶದ್ರೋಹಿ ಆಗಬೇಕಾಗಿಲ್ಲ ಎಂದು ರಾಬರ್ಟ್ ವಾದ್ರಾ ವಿವರಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದ ವಾದ್ರಾ, ಎಲ್ಲರನ್ನೂ ಆತ್ಮನಿರ್ಭರರಾಗಿ ಎಂದು ನೀವು ಹೇಳುತ್ತೀರಿ. ಒಬ್ಬವ್ಯಕ್ತಿಗೆ ಆತನ ವೈಯಕ್ತಿಕ ಅಭಿಪ್ರಾಯ, ಧ್ವನಿ ಇರುತ್ತದೆ ಎಂದು ಹೇಳಿದ್ದಾರೆ. ರೈತ ಹೋರಾಟಗಾರರು 80 ದಿನಗಳಿಗೂ ಹೆಚ್ಚು ಕಾಲ ದೆಹಲಿ ಗಡಿಭಾಗದಲ್ಲಿ ಚಳುವಳಿ ನಿರತರಾಗಿದ್ದಾರೆ. ಆದರೆ, ಅದನ್ನು ಭಾರತ-ಪಾಕಿಸ್ತಾನ ಗಡಿಯಂತೆ ಕಾಣಲಾಗುತ್ತಿದೆ ಎಂದು ವಾದ್ರಾ ಮೋದಿ ವಿರುದ್ಧ ಕುಟುಕಿದ್ದಾರೆ.

ಇದನ್ನೂ ಓದಿ: Disha Ravi: ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡದೆ ದಿಶಾ ರವಿಯನ್ನು ಅರೆಸ್ಟ್ ಮಾಡಿದ ದೆಹಲಿ ಪೊಲೀಸರು; ಮನೆಯ ಬಳಿ ಏನೇನೆಲ್ಲಾ ಆಯ್ತು?

ರೈತರ ಅಹವಾಲನ್ನು ನೀವು ಕೇಳಲು ಬಯಸುತ್ತಿಲ್ಲ. ಲಾಕ್​ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದೀರಿ. ಈಗ ನಿರುದ್ಯೋಗದ ಸಮಸ್ಯೆ ಎದುರಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೆ ಏರುತ್ತಿದೆ. ಈ ವಿಚಾರಗಳ ವಿರುದ್ಧ ಜನರು ಧ್ವನಿ ಎತ್ತುತ್ತಾರೆ. ಅಭಿಪ್ರಾಯ ತಿಳಿಸುತ್ತಾರೆ ಎಂದು ವಾದ್ರಾ ಹೇಳಿದ್ದಾರೆ.

ರೈತರ ಸಮಸ್ಯೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದೆ. ರೈತ ಕಾಯ್ದೆಗಳು ಸರಿ ಇಲ್ಲ ಎಂದು ಎಲ್ಲರೂ ಒಂದಾಗಿ ಹೇಳುತ್ತಿದ್ದಾರೆ. ರೈತರಿಗೆ ನಾವು ಕೃತಜ್ಞರಾಗಿರಬೇಕು. ಅವರಿಂದಾಗಿ ನಾವು ದಿನನಿತ್ಯ ಉತ್ತಮ ಆಹಾರ ಸ್ವೀಕರಿಸುತ್ತಿದ್ದೇವೆ. ಆದರೆ, ಈಗ ಆ ರೈತರು ಗಡಿಭಾಗದಲ್ಲಿ ಪ್ರತಿಭಟನೆ ನಡೆಸುವಂತಾಗಿದೆ ಎಂದು ತಿಳಿಸಿದ್ದಾರೆ.

ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿರುವವರನ್ನು ಸರ್ಕಾರ ದಮನಿಸುತ್ತಿದೆ. ಈ ಬಗ್ಗೆ ನಾನೊಬ್ಬನೇ ತಿಳಿಸುತ್ತಿಲ್ಲ. ನಾನು ಭೇಟಿಯಾದ ಎಲ್ಲರೂ ಸಾಮಾನ್ಯ ಇದೇ ಅಭಿಪ್ರಾಯ ಹೊಂದಿದ್ದಾರೆ. ಕಳೆದ 10 ವರ್ಷಗಳಿಂದ ನಾನು ಕೂಡ ಇದನ್ನೇ ಅನುಭವಿಸುತ್ತಿದ್ದೇನೆ. ಸರ್ಕಾರವು ಯುವಜನತೆಯ ಅಭಿಪ್ರಾಯ ಕೇಳಬೇಕು ಎಂದು ವಾದ್ರಾ ಅಭಿಪ್ರಾಯಪಟ್ಟಿದ್ದಾರೆ.

ನಾನು ಕೋರ್ಟ್, ಕಾನೂನು ಅಥವಾ ದೆಹಲಿ ಪೊಲೀಸರ ವಿರುದ್ಧ ಏನೂ ಮಾತನಾಡುವುದಿಲ್ಲ. ಆದರೆ ಸರ್ಕಾರ ಯಾರ ಧ್ವನಿಯನ್ನು ಕೂಡ ಕುಗ್ಗಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವರ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ ಎಂದಿದ್ದಾರೆ.

ವಿದೇಶಿ ಸೆಲೆಬ್ರಿಟಿಗಳ ಸಹಾಯದಿಂದ ಭಾರತ ಸರ್ಕಾರದ ವಿರುದ್ಧ ಮಾತನಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ, ‘ಅದು ತಪ್ಪು. ನಾವು ಭಾರತೀಯ ನಾಗರಿಕರು. ನಾವು ಭಾರತದ ಜನತೆಗಾಗಿ ಹೋರಾಡುತ್ತೇವೆ. ನನ್ನ ಕುಟುಂಬ ರಾಜಕೀಯ ವಿಧಾನದಲ್ಲಿ ಹೋರಾಟ ನಡೆಸಿದರೆ, ನಾನು ನನ್ನ ಸಾಮರ್ಥ್ಯದಲ್ಲಿ ಕೆಲಸ ಮಾಡುತ್ತೇನೆ. ನಾನು ದೇಶ ವಿರೋಧಿ ಅಲ್ಲ’ ಎಂದು ರಾಬರ್ಟ್ ವಾದ್ರಾ ಪುನರುಚ್ಚರಿಸಿದ್ದಾರೆ.

ಇದನ್ನೂ ಓದಿ: Disha Ravi | ಗ್ರೇಟಾ ಥನ್​ಬರ್ಗ್​ ಪೋಸ್ಟ್ ಮಾಡಿದ್ದ ಟೂಲ್​ಕಿಟ್​ನಲ್ಲಿ ಏನಿತ್ತು? ಅದನ್ನು ಹಂಚಿದ್ದ ದಿಶಾ ರವಿ ಯಾರು?

ರಾಬರ್ಟ್ ವಾದ್ರಾ ಮಾಡಿದ್ದ ಟ್ವೀಟ್