ದೆಹಲಿ: ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (Amnesty International India Pvt Ltd) ಮತ್ತು ಇತರರಿಗೆ ಸೇರಿದ 17.66 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿಯನ್ನು ಜಾರಿ ನಿರ್ದೇಶನಾಲಯ (ED) ಜಪ್ತಿ ಮಾಡಿದೆ. ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ಉಲ್ಲಂಘನೆ ಆರೋಪ ಹೊತ್ತಿರುವ ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಬೆಂಗಳೂರು ಹಾಗೂ ದೆಹಲಿಯ ಕಚೇರಿ ಮೇಲೆ 2019ರ ನವೆಂಬರ್ನಲ್ಲಿ ಸಿಬಿಐ ದಾಳಿ ನಡೆಸಿತ್ತು. ಅದಕ್ಕೂ ಒಂದು ವರ್ಷ ಮೊದಲೇ ಅಂದರೆ 2018ರಲ್ಲೇ ಇ.ಡಿ.ಅಮ್ನೆಸ್ಟಿ ಇಂಡಿಯಾದ ಬೆಂಗಳೂರು ಕಚೇರಿಯಲ್ಲಿ ಪರಿಶೀಲನೆ ನಡೆಸಿತ್ತು.
ಅಂತಾರಾಷ್ಟ್ರೀಯ ಮಟ್ಟದ ಮಾನವ ಹಕ್ಕು ಸಂಸ್ಥೆಯಾಗಿರುವ ಇಂಗ್ಲೆಂಡ್ ಮೂಲದ ಅಮ್ನೆಸ್ಟಿ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಭಾರತದಲ್ಲಿ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪ ಎದುರಿಸುತ್ತಿದೆ. ಈ ಕಾಯ್ದೆಯನ್ನೂ ಮೀರಿ ವಿದೇಶಗಳಿಂದ ಹಣ ಪಡೆದಿದ್ದರಿಂದ ಸಿಬಿಐ, ಇ.ಡಿ.ದಾಳಿ ನಡೆಸಿವೆ. ಹಾಗೇ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆಗೆ ಭಾರತದಲ್ಲಿ ಕಾರ್ಯ ಮುಂದುವರಿಸಲು ಕೇಂದ್ರ ಗೃಹ ಇಲಾಖೆ ಅನುಮತಿ ನೀಡಿರಲಿಲ್ಲ. ಅಷ್ಟೇ ಅಲ್ಲ, ಅಮ್ನೆಸ್ಟಿ ಇಂಡಿಯಾದ ಬ್ಯಾಂಕ್ ಖಾತೆಗಳನ್ನು ಮುಟ್ಟುಹೋಲು ಹಾಕಿತ್ತು. ಇದರಿಂದಾಗಿ ಕಳೆದ ವರ್ಷ ಸೆಪ್ಟೆಂಬರ್ನಲ್ಲೇ ಅಮ್ನೆಸ್ಟಿ ಇಂಟರ್ನ್ಯಾಷನಲ್ ಭಾರತದಲ್ಲಿ ಕಾರ್ಯಸ್ಥಗಿತಗೊಳಿಸಿದೆ. ಇದರೊಂದಿಗೆ ಕೇಂದ್ರದ ನಡೆಯನ್ನು ತೀವ್ರವಾಗಿ ವಿರೋಧಿಸಿತ್ತು. ಭಾರತದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗಿದೆ, ದುರುದ್ದೇಶದಿಂದ ನಮ್ಮ ಕಂಪನಿ ವಿರುದ್ಧ ಕೇಂದ್ರ ಸೇಡು ತೀರಿಸಿಕೊಂಡಿದೆ ಎಂದೂ ಆರೋಪ ಮಾಡಿತ್ತು.
ಇದನ್ನೂ ಓದಿ: Kiran Bedi: ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಸ್ಥಾನದಿಂದ ಕಿರಣ್ ಬೇಡಿ ತೆರವು; ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಣೆ
2018ರಲ್ಲಿ ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಪ್ರವೇಟ್ ಲಿಮಿಟೆಡ್ನ ಬೆಂಗಳೂರು ಕಚೇರಿ ಮೇಲೆ ದಾಳಿ ನಡೆಸಿದ್ದ ಇ.ಡಿ., ಕಂಪನಿಯ ಬ್ಯಾಂಕ್ ಅಕೌಂಟ್ಗಳಲ್ಲಿದ್ದ ಸುಮಾರು 52 ಕೋಟಿ ರೂ.ಠೇವಣಿಯ ಮೇಲೆ ನಿರ್ಬಂಧ ಹೇರಿತ್ತು. ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾದ ಮುಖ್ಯಸ್ಥರು, ತಾವು ಯುಕೆಯಲ್ಲಿರುವ ಪ್ರಧಾನ ಕಚೇರಿಯಿಂದ ರಫ್ತು ಸೇವೆಗಾಗಿ ಹಣ ಪಡೆಯುತ್ತಿದ್ದೇವೆ ಎಂದು ಹೇಳಿಕೊಂಡಿದ್ದರೂ, ಅದಕ್ಕೆ ಯಾವುದೇ ದಾಖಲೆಗಳೇ ಇಲ್ಲ ಎಂದೂ ಇ.ಡಿ.ಮೂಲಗಳು ತಿಳಿಸಿವೆ.