ದೆಹಲಿ: ರೈತರ ಹೋರಾಟಕ್ಕೆ ಸಂಬಂಧಿಸಿದ ಟೂಲ್ಕಿಟ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪರಿಸರವಾದಿ ದಿಶಾ ರವಿ, ಈ ಪ್ರಕರಣದ ತನಿಖೆಯ ದಾಖಲೆಗಳನ್ನು ದೆಹಲಿ ಪೊಲೀಸರು ಮಾಧ್ಯಮಗಳಿಗೆ ಸೋರಿಕೆ ಮಾಡದಂತೆ ತಡೆಯಬೇಕು ಎಂದು ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿದಾರರ ಖಾಸಗಿ ಚಾಟ್ ಅಥವಾ ಸಂಭಾಷಣೆಗಳನ್ನು ಮೂರನೇ ವ್ಯಕ್ತಿಗೆ (ಮಾಧ್ಯಮದವರಿಗೆ) ಸೋರಿಕೆ ಮಾಡದಂತೆ ಪೊಲೀಸರಿಗೆ ಸೂಚನೆ ನೀಡಬೇಕು ಎಂದು ದಿಶಾ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ .
ಅದೇ ವೇಳೆ ತನ್ನ ಖಾಸಗಿ ಚಾಟ್ಗಳನ್ನು ಪ್ರಕಟ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕು ಎಂದು ಬೆಂಗಳೂರು ಮೂಲದ 22ರ ಹರೆಯದ ದಿಶಾ ರವಿ ಒತ್ತಾಯಿಸಿದ್ದಾರೆ. ಫೆಬ್ರವರಿ 3ರಂದು ಸ್ವೀಡನ್ ನ ಪರಿಸರವಾಗಿ ಗ್ರೇಟಾ ಥನ್ಬರ್ಗ್ ರೈತರ ಹೋರಾಟಕ್ಕೆ ಸಂಬಂಧಿಸಿದ ಟೂಲ್ಕಿಟ್ನ್ನು ಟ್ವೀಟ್ ಮಾಡಿದ್ದರು. ರೈತರ ಪ್ರತಿಭಟನೆ, ಗಣರಾಜ್ಯೋತ್ಸವದಂದು ಕೆಂಪು ಕೋಟೆಯಲ್ಲಿ ನಡೆದ ಅಹಿತಕರ ಘಟನೆಗಳು ಪೂರ್ವ ಯೋಜಿತವಾಗಿದ್ದು, ಅದಕ್ಕಾಗಿ ಟೂಲ್ಕಿಟ್ನಲ್ಲಿ ಯೋಜನೆ ರೂಪುಗೊಂಡಿತ್ತು ಎಂಬುದು ಪೊಲೀಸರ ವಾದವಾಗಿದೆ.
ಮಂಗಳವಾರ ದೆಹಲಿ ನ್ಯಾಯಾಲಯವು ದಿಶಾ ರವಿ ಅವರ ಎಫ್ಐಆರ್ ಮತ್ತು ಇತರ ದಾಖಲೆಗಳನ್ನು ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ನಿರ್ದೇಶಿಸಿತ್ತು. ಅಷ್ಟೇ ಅಲ್ಲದೆ ಅರೆಸ್ಟ್ ಮೆಮೊ ಮತ್ತು ಆಕೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲು ಅನುಮತಿ ನೀಡುವ ರಿಮಾಂಡ್ ಪೇಪರ್ನ ಪ್ರತಿಯನ್ನು ನೀಡುವಂತೆ ಸೂಚಿಸಿದೆ.
ಬೆಚ್ಚಗಿನ ಬಟ್ಟೆ, ಮಾಸ್ಕ್ ಮತ್ತು ಪುಸ್ತಕಗಳನ್ನು ಆಕೆಗೆ ಪೂರೈಸಲು ನ್ಯಾಯಾಲಯ ಅನುಮತಿ ನೀಡಿದೆ. ದಿಶಾ ರವಿ ಅವರು ಪೊಲೀಸ್ ವಶದಲ್ಲಿದ್ದುಕೊಂಡೇ ಪ್ರತಿದಿನ ಕುಟುಂಬದೊಂದಿಗೆ 15 ನಿಮಿಷ ಫೋನ್ ಕರೆ ಮಾಡಿ ಮಾತನಾಡಲು ಮತ್ತು ವಕೀಲರ ಜತೆ 30 ನಿಮಿಷ ಮಾತನಾಡಲು ಚೀಫ್ ಮೆಟ್ರೊಪಾಲಿಟನ್ ಮೆಜಿಸ್ಟ್ರೇಟ್ ಪಂಕಜ್ ಶರ್ಮಾ ಅವರು ಅವಕಾಶ ಕಲ್ಪಿಸಿದ್ದಾರೆ.
ನಿಕಿತಾ ಜೇಕಬ್ ಮತ್ತು ಮುುಲುಕ್ಗೆ ಜಾಮೀನು
ಟೂಲ್ಕಿಟ್ ಸಿದ್ಧಪಡಿಸಿದ್ದಾರೆ ಎಂಬ ಆರೋಪದಲ್ಲಿ ಪೊಲೀಸರು ದಿಶಾ ರವಿ, ವಕೀಲೆ ಹಾಗೂ ಪರಿಸರವಾದಿ ನಿಕಿತಾ ಜೇಕಬ್ ಮತ್ತು ಶಾಂತನು ಮುಲಕ್ ಅವರನ್ನು ಪೊಲೀಸರು ಬಂಧಿಸಿದ್ದರು. ಈ ಪೈಕಿ ನಿಕಿತಾ ಮತ್ತು ಶಂತನು ಅವರಿಗೆ ಜಾಮೀನು ಸಿಕ್ಕಿದೆ.
ಗ್ರೇಟಾ ಥನ್ಬರ್ಗ್ ಟ್ವೀಟ್ ಮಾಡಿದ್ದ ಟೂಲ್ಕಿಟ್ ಸಿದ್ಧಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿದ್ದ ಮುಂಬೈ ಮೂಲದ ವಕೀಲೆ, ಪರಿಸರವಾದಿ ನಿಕಿತಾ ಜೇಕಬ್ ಅವರಿಗೆ ಬಾಂಬೆ ಹೈಕೋರ್ಟ್ ಬುಧವಾರ ಮೂರು ವಾರಗಳ ಪ್ರಯಾಣ ಕಾಲದ ನಿರೀಕ್ಷಣಾ ಜಾಮೀನು (Transit Anticipatory Bail) ನೀಡಿದೆ. ಜಾಮೀನು ಮನವಿ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಡಿ.ನಾಯಕ್ ಅವರ ಏಕಸದಸ್ಯ ಪೀಠವು ಪೊಲೀಸ್ ಅಧಿಕಾರಿಗಳು ಆಕೆಯ ಮನೆಯಿಂದ ಲ್ಯಾಪ್ಟಾಪ್, ಫೋನ್ ವಶಪಡಿಸಿಕೊಂಡು ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಹಾಗಾಗಿ ನಿಕಿತಾ ತನಿಖೆಗೆ ಲಭ್ಯವಿದ್ದಾರೆ ಎಂಬುದನ್ನು ಪರಿಗಣಿಸಿ ಜಾಮೀನು ನೀಡಲಾಗಿದೆ ಎಂದಿದೆ. ಒಂದು ವೇಳೆ ನಿಕಿತಾ ಅವರು ಬಂಧನಕ್ಕೊಳಗಾದರೆ ₹25,000 ವೈಯಕ್ತಿಕ ಮುಚ್ಚಳಿಕೆ ಮತ್ತು ಅದೇ ಮೊತ್ತದ ಜಾಮೀನು ನೀಡಿದರೆ ಆಕೆಯನ್ನು ಬಿಡುಗಡೆ ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ.
ಶಾಂತನು ಮುಲುಕ್ಗೆ ಬಾಂಬೆ ಹೈಕೋರ್ಟ್ನ ಔರಂಗಾಬಾದ್ ಪೀಠವು ಫೆಬ್ರವರಿ 16ರಂದು ಪ್ರಯಾಣ ಕಾಲದ ನಿರೀಕ್ಷಣಾ ಜಾಮೀನು (Transit Anticipatory Bail) ನೀಡಿತ್ತು.
ಏನಿದು ಟೂಲ್ ಕಿಟ್?
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿ ಟೂಲ್ಕಿಟ್ ಒಂದನ್ನು ಗ್ರೇಟಾ ಟ್ವಿಟ್ರ್ನಲ್ಲಿ ಹಂಚಿಕೊಂಡಿದ್ದರು. ಟೂಲ್ಕಿಟ್ ಎಂದರೆ, ಒಂದು ಪ್ರತಿಭಟನೆ ಅಥವಾ ಒಂದು ಕಾರ್ಯಕ್ರಮದ ಸಂಪೂರ್ಣ ರೂಪುರೇಷೆ. ಪ್ರತಿಭಟನೆ/ಕಾರ್ಯಕ್ರಮ ಹೇಗೆ ನಡೆಯಬೇಕು ಎನ್ನುವ ಮಾಹಿತಿ ಇದರಲ್ಲಿ ಇರುತ್ತದೆ. ಗ್ರೇಟಾ ಹಂಚಿಕೊಂಡಿದ್ದ ಟೂಲ್ಕಿಟ್ನಲ್ಲಿ, ಪ್ರತಿಭಟನೆಯಲ್ಲಿ ರೈತರು ಭಾಗವಹಿಸಬೇಕು, ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿ ಎದುರು ಪ್ರತಿಭಟನೆ ಮಾಡಬೇಕು, ಸ್ಥಳೀಯ ಸರ್ಕಾರಿ ಕಚೇರಿ ಅಥವಾ ಅದಾನಿ-ಅಂಬಾನಿಯಂಥ ದೊಡ್ಡ ದೊಡ್ಡ ಉದ್ಯಮಿಗಳ ಕಚೇರಿ ಎದುರು ಪ್ರತಿಭಟನೆ ಮಾಡಬೇಕು, ಗಣರಾಜ್ಯೋತ್ಸವ ದಿನದಂದು ರೈತರು ಟ್ರ್ಯಾಕ್ಟರ್ ಜಾಥಾದಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳಬೇಕು ಎನ್ನುವುದಕ್ಕೆ ಸ್ಫೂರ್ತಿದಾಯಕವಾಗಿತ್ತು ಈ ಟೂಲ್ಕಿಟ್. ಆದರೆ, ಈ ಪ್ರತಿಭಟನೆ ಹಿಂಸಾಚಾರದೊಂದಿಗೆ ಅಂತ್ಯವಾಗಿತ್ತು. ಗ್ರೇಟಾ ಹಂಚಿಕೊಂಡ ಟೂಲ್ಕಿಟ್ ಹಿಂದೆ ದಿಶಾ ರವಿ, ಶಂತನು ಮುಲಕ್ ಕೈವಾಡವಿದೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದರು.
ಇದನ್ನೂ ಓದಿ: Toolkit | ಲೇಖಕಿ ಗೆಯ್ಲ್ ಕಿಂಬಾಲ್ ನಡೆಸಿದ್ದ ದಿಶಾ ರವಿ ಸಂದರ್ಶನ YouTube ನಿಂದ ಮಾಯ! ಅಷ್ಟಕ್ಕೂ ದಿಶಾ ಏನು ಹೇಳಿದ್ದರು?
Published On - 1:27 pm, Thu, 18 February 21