ಮೇವು ಕೊಯ್ಯಲು ಹೋದ ಇಬ್ಬರು ಅಪ್ರಾಪ್ತೆಯರು ಸಾವು..ಇನ್ನೊಬ್ಬಾಕೆ ಸ್ಥಿತಿ ಗಂಭೀರ; ಪಾಲಕರ ಗೋಳಾಟ
ಕೆಟ್ಟ ಘಟನೆಗಳಿಂದಾಗಿ ಉನ್ನಾವೋ (Unnao) ಮುನ್ನೆಲೆಗೆ ಬಂದಿದ್ದು ಇದೇ ಮೊದಲಲ್ಲ. ಈ ಹಿಂದೆ 2017ರಲ್ಲಿ ಯುವತಿಯೋರ್ವಳನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿ, ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ಗೆ 2019ರಲ್ಲಿ ಜೀವಾವಧಿ ಶಿಕ್ಷೆಯಾಗಿದೆ.
ಉನ್ನಾವೋ: ಉತ್ತರಪ್ರದೇಶದ ಉನ್ನಾವೋ (Unnao) ಮತ್ತೆಮತ್ತೆ ಕೆಟ್ಟ ಕಾರಣಕ್ಕೇ ಸುದ್ದಿಯಾಗುತ್ತಿದೆ. ನಿನ್ನೆ ಸಂಜೆ ಮೇವು ಸಂಗ್ರಹಿಸಲು ಹೋದ ಮೂವರು ದಲಿತ ಬಾಲಕಿಯರಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬಾಕೆ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಈ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಮೂವರ ದೇಹಕ್ಕೆ ವಿಷಸೇರಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಘಟನೆ ಬಗ್ಗೆ ಉನ್ನಾವೋ ಎಸ್ಪಿ ಆನಂದ್ ಕುಲಕರ್ಣಿ ವಿವರಣೆ ನೀಡಿದ್ದು, ಮೂವರೂ ಹುಲ್ಲು ಕೊಯ್ಯಲೆಂದು ಹೋಗಿದ್ದರು ಎಂದು ನಮಗೆ ಕುಟುಂಬದವರು ಹೇಳಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೂವರ ದೇಹದಲ್ಲೂ ವಿಷ ಸೇರಿದೆ ಎಂದು ವೈದ್ಯರು ತಿಳಿಸಿದ್ದಾರೆ. ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಹಾಗೇ, ಪ್ರಕರಣದ ತನಿಖೆಗಾಗಿ 6 ಜನ ಪೊಲೀಸರ ತಂಡವನ್ನು ರಚಿಸಲಾಗಿದೆ. ಇವರು ಮೃತಪಟ್ಟ ಜಾಗದಲ್ಲಿ ನೊರೆ ಇರುವುದನ್ನು ನೋಡಿದರೆ, ದೇಹದೊಳಗೆ ವಿಷ ಸೇರಿಯೇ ಮೃತಪಟ್ಟಿದ್ದಾರೆಂದು ಮೇಲ್ನೋಟಕ್ಕೆ ತಿಳಿಯುತ್ತದೆ ಎಂದು
ಗ್ರಾಮಸ್ಥರ ವಿಚಾರಣೆ ಉನ್ನಾವೋದಲ್ಲಿ ಇಬ್ಬರು ದಲಿತ ಯುವತಿಯರ ಸಾವು ಹಾಗೂ ಇನ್ನೊಬ್ಬಳು ತೀವ್ರ ಅಸ್ವಸ್ಥಳಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು, ಯುವತಿಯ ಕುಟುಂಬದವರು, ಗ್ರಾಮಸ್ಥರನ್ನು ಪ್ರಶ್ನಿಸುತ್ತಿದ್ದಾರೆ. ಹುಡುಗಿಯರು ಸತ್ತಿದ್ದು ಕೃಷಿ ಭೂಮಿಯಲ್ಲಿ ಆಗಿದ್ದರಿಂದ ಅಲ್ಲಿ ಯಾವುದೇ ಸಿಸಿಟಿವಿ ಕ್ಯಾಮರಾಗಳೂ ಇಲ್ಲ. ಹಾಗೇ, ಹುಡುಗಿಯರ ಜತೆ ಇನ್ಯಾರೂ ಇರಲಿಲ್ಲ ಎಂದೂ ಹೇಳಲಾಗಿದೆ. ಹೀಗಾಗಿ ಘಟನೆ ನಡೆದ ಜಾಗದಲ್ಲಿ ಏನಾಯಿತು? ಎಂದು ತಿಳಿಯುವುದು ಸ್ವಲ್ಪ ಕಷ್ಟವೇ ಆದರೂ, ಆದಷ್ಟು ಶೀಘ್ರದಲ್ಲೇ ಪ್ರಕರಣ ಬೇಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಈ ಹುಡುಗಿಯರ ಮೈಮೇಲೆ ಗಾಯದ ಗುರುತೂ ಸಹ ಇಲ್ಲ. ಬಾಯಿಂದ ನೊರೆ ಬಂದಿದ್ದರಿಂದ ಅದು ದೇಹದೊಳಗೆ ವಿಷ ಸೇರಿದ್ದಲಿಂದಲೇ ಜೀವ ಹೋಗಿದ್ದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಆದರೆ ಇವರೇ ವಿಷ ಸೇವನೆ ಮಾಡಿದರಾ? ಇನ್ಯಾರಾದರೂ ಬಲವಂತವಾಗಿ ಮಾಡಿಸಿದರಾ? ಅಥವಾ ಯಾವುದಾದರೂ ವಿಷಪೂರಿತ ಜಂತು ಕಚ್ಚಿರಬಹುದಾ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ನನ್ನ ಮಗಳ ಬಾಯಿಯಿಂದ ನೊರೆ ಬಂದಿದೆ. ಹಾಗಂತ ಆಕೆಯ ಬಟ್ಟೆಗಳಿಗೇನೂ ಆಗಿಲ್ಲ. ಅವಳು ತನ್ನ ತಲೆ, ಕುತ್ತಿಗೆಗೆ ಕಟ್ಟಲಾಗಿದ್ದ ಸ್ಕಾರ್ಫ್ ಕೂಡ ಹಾಗೇ ಇದೆ. ಅವಳ ಕೈ, ಕಾಲುಗಳನ್ನು ಕಟ್ಟಿದ ಗುರುತೂ ಇಲ್ಲ ಎಂದು ಮೃತ ಹುಡುಗಿಯೊಬ್ಬಳ ತಾಯಿ ತಿಳಿಸಿದ್ದಾರೆ.
ಜೀವ ಉಳಿದ ಯುವತಿಗೆ ಒಳ್ಳೆ ಚಿಕಿತ್ಸೆ ಕೊಡಿಸಿ ಘಟನೆಯ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಇಬ್ಬರ ಜೀವವಂತೂ ಹೋಯಿತು, ಇನ್ನುಳಿದ ಒಬ್ಬಳಿಗಾದರೂ ಉತ್ತಮ ಚಿಕಿತ್ಸೆ ಕೊಡಿಸಿ, ಜೀವ ಉಳಿಸಿ ಎಂದು ಆಗ್ರಹಿಸಿದ್ದಾರೆ. ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಯುವತಿಯನ್ನು ದೆಹಲಿಯ ಏಮ್ಸ್ಗೆ ಕರೆದುಕೊಂಡು ಹೋಗಿ ಟ್ರೀಟ್ಮೆಂಟ್ ಕೊಡಿಸಿ ಎಂದು ದಲಿತ ಗ್ರೂಪ್ ಮತ್ತು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಆಗ್ರಹಿಸಿದ್ದಾರೆ. ಭಾರತದಲ್ಲಿ ದಲಿತರು ನಿರಂತರವಾಗಿ ದಾಳಿಗೆ ಒಳಗಾಗುತ್ತಿದ್ದಾರೆ. ಇಂಥ ಘಟನೆಗಳನ್ನು ಸಹಜ, ಸಾಮಾನ್ಯವೆಂದು ನಿರ್ಲಕ್ಷಿಸಬಾರದು ಎಂದೂ ಹೇಳಿದ್ದಾರೆ.
ನಿನ್ನೆ ಸಂಜೆ ಏನಾಯಿತು? ನಿನ್ನೆ ಸಂಜೆ ಮೂವರೂ ಹುಡುಗಿಯರು ಮೇವು ಕೊಯ್ಯಲೆಂದು ಹೋಗಿದ್ದರು. ಆದರೆ ಎಷ್ಟೊತ್ತಾದರೂ ವಾಪಸ್ ಬರಲಿಲ್ಲ. ಹೋಗಿ ನೋಡಿದಾಗ ಮೂವರ ಪರಿಸ್ಥಿತಿಯೂ ಹದಗೆಟ್ಟಿತ್ತು. ಗ್ರಾಮಸ್ಥರು ಮೂವರನ್ನೂ ಆಸ್ಪತ್ರೆಗೆ ಕರೆದೊಯ್ದರು. ಆದರೆ ಹೋಗುವಷ್ಟರಲ್ಲೇ ಇಬ್ಬರು ಮೃತಪಟ್ಟಿದ್ದರು. ಘಟನೆಯ ಬಗ್ಗೆ ಕಂಗಾಲಾದ ಹಳ್ಳಿಗರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಉನ್ನಾವೋದಲ್ಲಿ ದುರ್ಘಟನೆ ಮೊದಲಲ್ಲ ಕೆಟ್ಟ ಘಟನೆಗಳಿಂದಾಗಿ ಉನ್ನಾವೋ ಮುನ್ನೆಲೆಗೆ ಬಂದಿದ್ದು ಇದೇ ಮೊದಲಲ್ಲ. ಈ ಹಿಂದೆ 2017ರಲ್ಲಿ ಯುವತಿಯೋರ್ವಳನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿ, ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ಗೆ 2019ರಲ್ಲಿ ಜೀವಾವಧಿ ಶಿಕ್ಷೆಯಾಗಿದೆ. ಈ ರೇಪ್ ಕೇಸ್ ಇಡೀ ದೇಶವನ್ನು ನಲುಗಿಸಿತ್ತು. ಸಂತ್ರಸ್ತೆಯ ಕುಟುಂಬಕ್ಕೆ ಆರೋಪಿಗಳು ಕೊಡಬಾರದ ಶಿಕ್ಷೆ ಕೊಟ್ಟಿದ್ದರು.
ಹಾಗೇ 2019ರಲ್ಲಿ ಇನ್ನೊಂದು ಭೀಕರ ಅತ್ಯಾಚಾರ ನಡೆದಿತ್ತು. ಒಟ್ಟು ಐವರು ಸೇರಿ 23ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದರು. ಅವರನ್ನು ಬಂಧಿಸಿ ಜೈಲಿಗೆ ಹಾಕಿದ್ದರೂ, ಅಲ್ಲಿಂದ ಬಿಡುಗಡೆಯಾದ ಬಳಿಕ ಸಂತ್ರಸ್ತೆಗೆ ಬೆಂಕಿ ಹಚ್ಚಿದ್ದರು. ಶೇ.90ರಷ್ಟು ಸುಟ್ಟು ಹೋಗಿದ್ದ ಆಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಈಗ ನಡೆದ ಪ್ರಕರಣದಲ್ಲಿ ಅತ್ಯಾಚಾರದ ಕುರುಹೇನೂ ಇಲ್ಲ ಎಂದು ಪೊಲೀಸರು ಹೇಳಿದ್ದರೂ, ಎಲ್ಲ ಆಯಾಮಗಳಲ್ಲೂ ತನಿಖೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ: ಯುವಕ ಆತ್ಮಹತ್ಯೆ; ಸಿದ್ದರಾಮಯ್ಯ, ಯಶ್ ಅಂತ್ಯಸಂಸ್ಕಾರಕ್ಕೆ ಬರುವಂತೆ ಮನವಿ, 15 ವರ್ಷದ ಹಿಂದೆ ತಂದೆ ಸಹ ಆತ್ಮಹತ್ಯೆ..
Published On - 12:03 pm, Thu, 18 February 21