ನವದೆಹಲಿ: ಟೂಲ್ಕಿಟ್ ಪ್ರಕರಣದಲ್ಲಿ ಪರಿಸರವಾದಿ ದಿಶಾ ರವಿ ಅವರ ಜಾಮೀನು ಅರ್ಜಿ ವಿಚಾರಣೆ ದೆಹಲಿ ನ್ಯಾಯಾಲಯದಲ್ಲಿ ನಡೆದಿದ್ದು, ಅದು ಟೂಲ್ಕಿಟ್ ಮಾತ್ರ ಆಗಿರಲಿಲ್ಲ. ಭಾರತಕ್ಕೆ ಅಪಖ್ಯಾತಿ ತರುವ ಮತ್ತು ಅಶಾಂತಿ ಸೃಷ್ಟಿಸುವ ಯೋಜನೆ ಆಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಇಂಡಿಯಾ ಗೇಟ್, ಕೆಂಪುಕೋಟೆಯಲ್ಲಿ ಖಾಲಿಸ್ತಾನಿ ಧ್ವಜ ಹಾರಿಸಿದವರಿಗೆ ಬಹುಮಾನ ನೀಡುತ್ತೇವೆ ಎಂದು ಜನವರಿ 11ರಂದು ನಿಷೇಧಿತ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟೀಸ್ ಘೋಷಣೆ ಮಾಡಿತ್ತು ಎಂದಿದ್ದಾರೆ ದೆಹಲಿ ಪೊಲೀಸ್. ಈ ಸಂಘಟನೆಗಳು ಕೆನಡಾದಿಂದ ಕಾರ್ಯ ನಿರ್ವಹಿಸುತ್ತಿದ್ದು ಕೆಂಪುಕೋಟೆ, ಇಂಡಿಯಾ ಗೇಟ್ನಲ್ಲಿ ಧ್ವಜ ಹಾರಾಟ ಮಾಡಲು ಬಯಸಿತ್ತು. ರೈತರ ಪ್ರತಿಭಟನೆಯ ನಡುವೆಯೇ ಈ ಕೆಲಸ ಮಾಡಲು ಅವರು ಬಯಸಿದ್ದರಿಂದಲೇ ಪೊಯೆಟಿಕ್ ಜಸ್ಟೀಸ್ ಫೌಂಡೇಷನ್ ಇದರಲ್ಲಿ ಭಾಗಿಯಾಗಿದ್ದು ಎಂದು ಪೊಲೀಸರು ವಾದಿಸಿದ್ದಾರೆ.
ದಿಶಾ ರವಿ ವಾಟ್ಸ್ಆ್ಯಪ್ ಚಾಟ್ ಡಿಲೀಟ್ ಮಾಡಿದ್ದಾರೆ. ಆಕೆಗೆ ಕಾನೂನು ಕ್ರಮಗಳ ಬಗ್ಗೆ ಅರಿವು ಇತ್ತು. ಈ ಟೂಲ್ ಕಿಟ್ ವಿನ್ಯಾಸಗೊಳಿಸಿರುವುದರ ಹಿಂದೆ ದುರುದ್ದೇಶವಿದೆ. ಭಾರತಕ್ಕೆ ಅಪಖ್ಯಾತಿ ತರುವುದಕ್ಕೆ ಮತ್ತು ರೈತರ ಪ್ರತಿಭಟನೆಯ ನೆರಳಿನಲ್ಲಿ ಶಾಂತಿ ಕದಡುವ ಜಾಗತಿಕ ಸಂಚಿನಲ್ಲಿ ದಿಶಾ ಭಾಗಿಯಾಗಿದ್ದಾರೆ. ಖಾಲಿಸ್ತಾನದ ಪರ ವಾದಿಸುವರೊಂದಿಗೆ ದಿಶಾ ರವಿ ಸಂಪರ್ಕ ಹೊಂದಿದ್ದು ಆಕೆ ಟೂಲ್ಕಿಟ್ ಸಿದ್ಧಪಡಿಸಿ ಶೇರ್ ಮಾಡಿದ್ದರು. ಆಕೆ ಯಾವುದೇ ತಪ್ಪು ಮಾಡಿಲ್ಲ ಎಂದಾದರೆ ಸಾಕ್ಷ್ಯ ನಾಶ ಮಾಡಿದ್ದು ಯಾಕೆ ಎಂದು ಪೊಲೀಸರು ಪ್ರಶ್ನಿಸಿದ್ದಾರೆ.
ದಿಶಾ ರವಿ ಜಾಮೀನು ಅರ್ಜಿ ವಿಚಾರಣೆ ನಡೆಸಿದ ದೆಹಲಿ ಕೋರ್ಟ್, ಜನವರಿ 26ಕ್ಕೆ ಸಂಭವಿಸಿದ ಹಿಂಸಾಚಾರಕ್ಕೂ ಟೂಲ್ಕಿಟ್ಗೂ ಏನು ಸಂಬಂಧ ಇದೆ ಎಂಬುದನ್ನು ನೀವು ಪತ್ತೆ ಹಚ್ಚಿದ್ದೀರಿ ಎಂದು ನ್ಯಾಯಾಲಯ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ವಿ ರಾಜು ಅವರಲ್ಲಿ ಪ್ರಶ್ನಿಸಿದೆ.
ದಿಶಾ ರವಿ ರೆಬೆಲ್ ಅಲ್ಲ, ಪರಿಸರ ಮತ್ತು ಕೃಷಿ ಪರಸ್ಪರ ಬೆಸೆದುಕೊಂಡಿದೆ ಎಂದು ದಿಶಾ ಪರ ವಾದಿಸಿದ ವಕೀಲರು ಹೇಳಿದ್ದಾರೆ. ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆ ಜತೆಗೆ ದಿಶಾ ರವಿಗೆ ಸಂಬಂಧ ಇದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ದಿಶಾ ರವಿ ಪರ ವಾದಿಸಿದ ವಕೀಲ ಸಿದ್ದಾರ್ಥ್ ಅಗರವಾಲ್, ಖಾಲಿಸ್ತಾನದ ಜತೆಗೆ ನನಗೆ ಯಾವುದೇ ಸಂಬಂಧವಿಲ್ಲ, ಸಿಖ್ಸ್ ಫಾರ್ ಜಸ್ಟೀಸ್ ಅಥವಾ ಪಿಜೆಎಫ್ ಜತೆ ನಂಟು ಹೊಂದಿಲ್ಲ. ಈ ಪ್ರಕರಣದಲ್ಲಿ ವಿಭಿನ್ನವಾದ ಆಲೋಚನೆ ದೇಶದ್ರೋಹ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ.
ದಿಶಾ ಜಾಮೀನು ಅರ್ಜಿ ಬಗ್ಗೆ ಮಂಗಳವಾರ ತೀರ್ಪು ನೀಡಲಿದೆ ಕೋರ್ಟ್
ಶನಿವಾರ ಮೂರು ಗಂಟೆಗಳ ಕಾಲ ದಿಶಾ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಮಂಗಳವಾರಕ್ಕೆ ಕೋರ್ಟ್ ತೀರ್ಪು ಕಾದಿರಿಸಿದೆ . ದಿಶಾ ರವಿ ಅವರು ಸಹಿ ಹಾಕಿದ ಅಫಿಡವಿಟ್ನ್ನು ನೀಡಲು ಸಿದ್ಧವಿದ್ದು, ಆಕೆ ತನಿಖೆ ಪೂರ್ತಿಯಾಗುವವರೆಗೆ ದೆಹಲಿ ಬಿಟ್ಟು ಹೊರಗೆ ಹೋಗುವುದಿಲ್ಲ. ಜನವರಿ 26ಕ್ಕೆ ನಡೆದ ಹಿಂಸಾಚಾರ ಪ್ರಕರಣದಲ್ಲಿ 149 ಮಂದಿಯನ್ನು ಬಂಧಿಸಲಾಗಿದೆ. ಆಕೆ ಯಾರಲ್ಲಿ ಮಾತನಾಡಿದ್ದಾರೆ? ಎಂದು ದಿಶಾ ರವಿ ಪರ ವಾದಿಸಿದ ವಕೀಲರು ಪ್ರಶ್ನಿಸಿದ್ದಾರೆ.
ಸಾವಿರಾರು ಮಂದಿ ದೆಹಲಿಗೆ ಬರುವಂತೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ. ನಾನು 10 ಮಂದಿಯನ್ನು ಆಹ್ವಾನಿಸಿದರೆ ತಪ್ಪೇನು? ಸಂಯುಕ್ತ ಕಿಸಾನ್ ಮೋರ್ಚಾ ಪರೇಡ್ ಆಯೋಜಿಸಿತ್ತು, ಅವರ ವಿರುದ್ಧವೂ ದೇಶದ್ರೋಹ ಪ್ರಕರಣ ದಾಖಲಾಗಿದೆಯೇ? ದೇಶದ್ರೋಹಿಗಳೊಂದಿಗ ಮಾತಾನಾಡಿದರೆ ನಾವು ದೇಶದ್ರೋಹಿಗಳಾಗುತ್ತೇವೆಯೇ? ಯಾವುದೇ ಒಂದು ವೇದಿಕೆಯಲ್ಲಿ ನಿಮ್ಮ ಅಭಿಪ್ರಾಯಗಳನ್ನು ಹೇಳುವುದು ಅಪರಾಧವಲ್ಲ. ದೆಹಲಿ ಪೊಲೀಸರು ದಿಶಾ ಮೇಲೆ ಮಾಡಿರುವ ಆರೋಪವನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ದಿಶಾ ಅವರ ವಕೀಲರು ಹೇಳಿದ್ದಾರೆ.
ಇದನ್ನೂ ಓದಿ: Fact Check: ಆಕೆಯ ಹೆಸರು ದಿಶಾ ರವಿ, ದಿಶಾ ರವಿ ಜೋಸೆಫ್ ಅಲ್ಲ
Published On - 5:27 pm, Sat, 20 February 21