ದೇಶದಲ್ಲಿ ಸದ್ಯ ಬಹುಮಟ್ಟಿಗೆ ಸುದ್ದಿಯಾಗುತ್ತಿರುವುದು ಕಲ್ಲಿದ್ದಲು ಕೊರತೆ (Coal Crisis)ಮತ್ತು ವಿದ್ಯುತ್ ಪೂರೈಕೆ (Power Supply)ಯಲ್ಲಿ ವ್ಯತ್ಯಯ. ಈ ಕಲ್ಲಿದ್ದಲು ಅಭಾವ ದೇಶದ ದೆಹಲಿ, ತಮಿಳುನಾಡು, ರಾಜಸ್ಥಾನ, ಪಂಜಾಬ್ ರಾಜ್ಯಗಳಲ್ಲಿ ವಿದ್ಯುತ್ ಸಮಸ್ಯೆ ತಂದೊಡ್ಡಬಹುದು. ಹಾಗೇ ಇನ್ನೂ ಕೆಲವು ರಾಜ್ಯಗಳಲ್ಲೂ ಕೂಡ ವಿದ್ಯುತ್ ವ್ಯತ್ಯಯ ಆಗಬಹುದು ಎಂದು ವಿಶ್ಲೇಷಿಸಲಾಗಿದೆ. ಈ ಮಧ್ಯೆ ಭಾರತೀಯ ರೈಲ್ವೆ ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಸಲು ರೈಲುಗಳು ದಿನದ 24 ಗಂಟೆ ಸಂಚಾರ ನಡೆಸಲು ಪ್ರಾರಂಭ ಮಾಡಿವೆ. ಕಲ್ಲಿದ್ದಲಿನ ಅಭಾವ ಒಂದು ತುರ್ತುಪರಿಸ್ಥಿತಿ ಎಂದು ರಾಷ್ಟ್ರೀಯ ಸಾಗಣೆದಾರರು ಘೋಷಣೆ ಮಾಡಿದ್ದು, 24 ಗಂಟೆ ಕಲ್ಲಿದ್ದಲು ಸಾಗಣೆಗಾಗಿ ಕಂಟ್ರೋಲ್ ರೂಂ ರಚನೆ ಮಾಡಿ ಎಂದು ರೈಲ್ವೆ ಎಲ್ಲ ವಲಯಗಳ ಪ್ರಧಾನ ಮುಖ್ಯ ಕಾರ್ಯನಿರ್ವಾಹಕರಿಗೆ ಸೂಚನೆ ನೀಡಲಾಗಿದೆ.
ಸೋಮವಾರ 1.77 ಮಿಲಿಯನ್ ಟನ್ಗಳಷ್ಟು ಕಲ್ಲಿದ್ದಲನ್ನು ವರ್ಗಾಯಿಸಲಾಗಿದೆ. ಕಳೆದ ವರ್ಷ ಇದೇ ದಿನ 1.48 ಮಿಲಿಯನ್ ಟನ್ಗಳಷ್ಟು ಕಲ್ಲಿದ್ದಲು ಮಾತ್ರ ಟ್ರಾನ್ಸ್ಫರ್ ಆಗಿತ್ತು. ಇನ್ನು ಒಂದು ದಿನ ಬೇಡಿಕೆ 500 ರೇಕ್ಸ್ಗೆ ತಲುಪಿದರೂ, ಸಾಗಣೆದಾರರು ಅದನ್ನು ಆರಾಮಾಗಿ ಪೂರೈಕೆ ಮಾಡುತ್ತಾರೆ. ದೇಶದ ಪೂರ್ವ ಭಾಗದ ಕಲ್ಲಿದ್ದಲು ವಲಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಬರುತ್ತಿದೆ. ಪೂರ್ವ ಮಧ್ಯ ರೈಲ್ವೆ ವಲಯದ ರೈಲುಗಳು ಆ ಕಲ್ಲಿದ್ದಲನ್ನು ಪೂರೈಸುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೇಶಾದ್ಯಂತ ಕಲ್ಲಿದ್ದಲು ಅಗತ್ಯ ಇರುವ ರಾಜ್ಯಗಳಿಗೆ ಸಂಪೂರ್ಣ ಪ್ರಮಾಣದಲ್ಲಿ ಅದನ್ನು ಪೂರೈಸುವ ಮೂಲಕ ವಿದ್ಯುತ್ ಕೊರತೆ ನೀಗಿಸಲು ಸಿದ್ಧರಿದ್ದೇವೆ ಎಂದು ರೈಲ್ವೆ ರಾಷ್ಟ್ರೀಯ ಸಾಗಣೆದಾರರು ವಿದ್ಯುತ್ ಮತ್ತು ಕಲ್ಲಿದ್ದಲು ಸಚಿವಾಲಯಕ್ಕೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಈಗ ಎದುರಾಗಿರುವ ಸಂದರ್ಭ ಒಂದೆರಡು ದಿನಕ್ಕೆಲ್ಲ ಸರಿ ಹೋಗುವಂಥದ್ದಲ್ಲ. ಆದರೆ ಕಲ್ಲಿದ್ದಲು ಸಾಗಣೆಗೆ ಎಲ್ಲ ರೀತಿಯಿಂದಲೂ ಸಿದ್ಧರಾಗಿದ್ದೇವೆ. ಕಲ್ಲಿದ್ದಲು ಲೋಡಿಂಗ್, ಅನ್ಲೋಡಿಂಗ್ ಸೇರಿ ಎಲ್ಲ ರೀತಿಯ ಮೇಲ್ವಿಚಾರಣೆಗಳನ್ನೂ ಸರಿಯಾಗಿ ಮಾಡಲಾಗುವುದು ಎಂದು ರೈಲ್ವೆ ವಲಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಟ್ಯೂಷನ್ ಕ್ಲಾಸ್ನಲ್ಲಿ ಅನ್ಯ ಧರ್ಮದ ಟೋಪಿ ಧರಿಸಿದಕ್ಕೆ ಗಲಾಟೆ; ಐವರ ಮೇಲೆ ಹಲ್ಲೆ
Published On - 9:54 am, Tue, 12 October 21