ದೆಹಲಿ: ನೇತಾಜಿ ಸುಭಾಷ್ ಚಂದ್ರಬೋಸ್ ಜನ್ಮದಿನದ ಹಿನ್ನೆಲೆಯಲ್ಲಿ ಗುರುವಾರ (ಅ.21) ದೇಶಾದ್ಯಂತ ಶಾಲೆಗಳಲ್ಲಿ ಮಕ್ಕಳು ಪ್ರಾರ್ಥನೆಯ ವೇಳೆ ಕದಂ ಕದಂ ಬಢಾಯೆ ಜಾ ಹಾಡಲಿದ್ದಾರೆ. ಇದು ಸುಭಾಷ್ ಚಂದ್ರಬೋಸ್ ಅವರ 125ನೇ ಜನ್ಮದಿನವೂ ಹೌದು. ಈ ಹಿನ್ನೆಲೆಯಲ್ಲಿ #Netaji125 ನೇತಾಜಿ ಗೌರವಾರ್ಥ ಹಲವು ಕಾರ್ಯಕ್ರಮಗಳು ನಡೆಯಲಿವೆ. ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟ್ಟಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಉದ್ದೇಶವನ್ನೂ ನೇತಾಜಿ ಅಭಿಯಾನ ಹೊಂದಿದೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಇಂಡಿಯನ್ ನ್ಯಾಷನಲ್ ಆರ್ಮಿ (ಐಎನ್ಎ) ಬಗ್ಗೆ ಹಲವು ಕಾರ್ಯಕ್ರಮಗಳೂ ಶಾಲೆಗಳಲ್ಲಿ ನಡೆಯಲಿವೆ. ನೇತಾಜಿ ರಸಪ್ರಶ್ನೆ, ‘ನೇತಾಜಿ ಕನಸಿನ ಭಾರತ’ ವಿಡಿಯೊ ಸ್ಪರ್ಧೆ ಮತ್ತು ‘ನೇತಾಜಿ-ನನ್ನ ಸ್ಫೂರ್ತಿ’ ಪ್ರಬಂಧ ಸ್ಪರ್ಧೆಗಳು ನಡೆಯಲಿವೆ.
ನೇತಾಜಿ 125ನೇ ಜನ್ಮದಿನದ ಪ್ರಯುಕ್ತ ಇಡೀ ವರ್ಷ ಹಲವು ಚಟುವಟಿಕೆಗಳು ನಡೆಯಲಿವೆ. ಜನವರಿ 23, 2021ರಂದು ಆರಂಭವಾಗಿರುವ ಈ ಕಾರ್ಯಕ್ರಮಗಳು ಜನವರಿ 23, 2022ರವರೆಗೂ ನಡೆಯಲಿವೆ. ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗವು (ಯುಜಿಸಿ) ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಆನ್ಲೈನ್ ಉಪನ್ಯಾಸ, ವೆಬಿನಾರ್, ಸೈಕ್ಲಾಥಾನ್, ಯೋಗಾಥಾನ್, ಚಿತ್ರಕಲತೆ, ಪೋಸ್ಟರ್ ತಯಾರಿಕೆ ಸ್ಪರ್ಧೆಗಳನ್ನು ಆಯೋಜಿಸುವಂತೆ ಸೂಚಿಸಿದೆ.
ದೇಶದ ಮೇಲೆ ಇರುವ ನೇತಾಜಿ ಅವರ ಎಂದಿಗೂ ಮಾಸದ ಪ್ರಭಾವ ಮತ್ತು ದೇಶಕ್ಕೆ ಅವರ ನಿಸ್ವಾರ್ಥ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು 23ನೇ ಜನವರಿ 2021ರಿಂದ 23ನೇ ಜನವರಿ 2022ರವರೆಗೆ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಕೊವಿಡ್ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಶಿಷ್ಟಾಚಾರಗಳನ್ನು ಪಾಲಿಸಬೇಕು ಎಂದು ಯುಜಿಸಿ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು ಮತ್ತು ಕಾಲೇಜು ಪ್ರಾಂಶುಪಾಲರಿಗೆ ತಿಳಿಸಿದೆ.
ಇದನ್ನೂ ಓದಿ: ನೇತಾಜಿ ಸುಭಾಷ್ ಚಂದ್ರ ಬೋಸ್ 125ನೇ ಜನ್ಮದಿನಾಚರಣೆ ಸ್ಮರಣಾರ್ಥ ಜನವರಿ 23ನ್ನು ಪರಾಕ್ರಮ್ ದಿವಸ್ ಎಂದು ಘೋಷಿಸಿದ ಸರ್ಕಾರ
ಇದನ್ನೂ ಓದಿ: ಸುಭಾಷ್ ಚಂದ್ರ ಬೋಸ್ ಪುಣ್ಯತಿಥಿ ಎಂಬ ಕಾಂಗ್ರೆಸ್ ಟ್ವೀಟ್ಗೆ ಟಿಎಂಸಿ ಆಕ್ಷೇಪ; ಭಾವನೆಗಳೊಂದಿಗೆ ಆಟ ಬೇಡ ಎಂದು ಪ್ರತಿಕ್ರಿಯೆ