ಸುಭಾಷ್ ಚಂದ್ರ ಬೋಸ್ ಪುಣ್ಯತಿಥಿ ಎಂಬ ಕಾಂಗ್ರೆಸ್ ಟ್ವೀಟ್ಗೆ ಟಿಎಂಸಿ ಆಕ್ಷೇಪ; ಭಾವನೆಗಳೊಂದಿಗೆ ಆಟ ಬೇಡ ಎಂದು ಪ್ರತಿಕ್ರಿಯೆ
ಅದೆಲ್ಲದರ ಮಧ್ಯೆ, ಸುಭಾಷ್ ಚಂದ್ರ ಬೋಸ್ ಅವರ ಪುಣ್ಯ ತಿಥಿ ಆಗಸ್ಟ್ 18ರಂದು ಎಂದು 2019ರಲ್ಲಿ, ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಟ್ವೀಟ್ ಮಾಡಿತ್ತು. ಇದು ಮತ್ತೆ ಪ್ರತಿಭಟನೆಗಳಿಗೆ ಕಾರಣವಾಗಿ, ಅದನ್ನು ಹಿಂಪಡೆದಿತ್ತು.
ಇಂದು ಕಾಂಗ್ರೆಸ್ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪುಣ್ಯತಿಥಿ ಎಂದು ಟ್ವೀಟ್ ಮಾಡಿದ್ದನ್ನು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಆಕ್ಷೇಪಿಸಿದೆ. ತೃಣಮೂಲ ಕಾಂಗ್ರೆಸ್ ರಾಜಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆಗಳನ್ನಿಡುತ್ತಲೇ ಮುಂದೆ ಬಂದಿದೆ. ತೃಣಮೂಲ ಕಾಂಗ್ರೆಸ್ಗೆ ಬಿಜೆಪಿಯೊಂದಿಗೆ ಇದ್ದಷ್ಟು ವೈರತ್ವ ಕಾಂಗ್ರೆಸ್ನೊಂದಿಗಿಲ್ಲ. ಅದರಲ್ಲೂ 2024ರ ಲೋಕಸಭಾ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ನೊಟ್ಟಿಗೆ ಸೇರಿ ಬಿಜೆಪಿಯನ್ನು ಸೋಲಿಸಲು ಯೋಜನೆ ರೂಪಿಸುತ್ತಿರುವ ತೃಣಮೂಲ ಕಾಂಗ್ರೆಸ್ ಇದೀಗ ಕಾಂಗ್ರೆಸ್ನೊಂದಿಗೆ ಸಣ್ಣ ಪ್ರಮಾಣದಲ್ಲಿ ಭಿನ್ನಾಭಿಪ್ರಾಯ ಮೂಡಿಸಿಕೊಂಡಿದೆ.
ಇಂದು ಟ್ವೀಟ್ ಮಾಡಿದ್ದ ಕಾಂಗ್ರೆಸ್, ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪುಣ್ಯತಿಥಿ ಎಂದು ಹೇಳಿದೆ. ಫೋಟೋ ಹಾಕಿ, ಭಾರತದ ಸ್ವಾತಂತ್ರ್ಯ ಚಳುವಳಿಯ ಹೀರೋ ಎನಿಸಿಕೊಂಡಿರುವ ಸುಭಾಷ್ ಚಂದ್ರ ಬೋಸ್ ಅವರಿಗೆ ಗೌರವ ಸಲ್ಲಿಸುತ್ತೇವೆ. ಅವರೊಬ್ಬ ಧೀರ ಸ್ವಾತಂತ್ರ್ಯ ಹೋರಾಟಗಾರ. ಉತ್ಕಟ ದೇಶಭಕ್ತ ಮತ್ತು ರಾಷ್ಟ್ರದ ಹೆಮ್ಮೆಯ ಪುತ್ರ. ದೇಶಕ್ಕೆ ಸುಭಾಷ್ ಚಂದ್ರ ಬೋಸ್ ಅವರ ಕೊಡುಗೆ ಸದಾ ಸ್ಮರಣೀಯ ಎಂದು ಹೇಳಿತ್ತು. ಆದರೆ ಈ ಟ್ವೀಟ್ಗೆ ತೃಣಮೂಲ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಕಾಂಗ್ರೆಸ್ ತನ್ನ ಟ್ವೀಟ್ನಲ್ಲಿ ಸುಭಾಷ್ ಚಂದ್ರ ಬೋಸ್ ಮೃತಪಟ್ಟಿದ್ದು, 1945ರ ಆಗಸ್ಟ್ 18 ಎಂದು ಉಲ್ಲೇಖಿಸಿದೆ. ಆದರೆ ಅವರು ಮೃತಪಟ್ಟ ದಿನಾಂಕ ಇನ್ನೂ ಸ್ಪಷ್ಟವಾಗಿಲ್ಲ. ನೇತಾಜಿ ಸುಭಾಷ್ ಚಂದ್ರ ಬೋಸ್ರ ಕೊನೇ ದಿನಗಳು, ಅವರ ಸಾವಿನ ದಿನಾಂಕಗಳನ್ನು ಪತ್ತೆ ಹಚ್ಚಲು ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳೆರಡೂ ಪ್ರಯತ್ನ ಮಾಡಲಿಲ್ಲ. ಈಗ ಪಶ್ಚಿಮ ಬಂಗಾಳ ಮತ್ತು ಭಾರತೀಯರ ಭಾವನೆಗಳೊಂದಿಗೆ ಆಟ ಆಡುವ ಅಗತ್ಯವಿಲ್ಲ. ಸುಭಾಷ್ ಚಂದ್ರ ಬೋಸ್ ಅವರ ಸಾವನ್ನು ಸಾಬೀತು ಪಡಿಸಿ..ವರ್ಗೀಕರಿಸಲಾದ ಫೈಲ್ಗಳನ್ನು ಪ್ರಕಟಿಸಿ ಎಂದು ಟಿಎಂಸಿ ನಾಯಕ ಕುನಾಲ್ ಘೋಷ್ ಹೇಳಿದ್ದಾರೆ.
Strongly object to this tweet. This date of death is not proved. Both Congress and BJP govt didn’t try to find out the real facts regarding the last moments of Netaji. Don’t play with emotions of Bengal and India. First prove the death. Publish the classified files. https://t.co/FmjSoZ3oud
— Kunal Ghosh (@KunalGhoshAgain) August 18, 2021
ಸುಭಾಷ್ ಚಂದ್ರ ಬೋಸ್ ಅವರ ಕೊನೇ ದಿನಕ್ಕೆ ಸಂಬಂಧಪಟ್ಟಂತೆ ಇನ್ನೂ ಗೊಂದಲಗಳಿವೆ. 1940ರ ಡಿಸೆಂಬರ್ಲ್ಲಿ ಸುಭಾಷ್ ಚಂದ್ರ ಬೋಸ್ರನ್ನು ಜೈಲಿನಿಂದ ಬಿಡುಗಡೆ ಮಾಡಿದ್ದ ಬ್ರಿಟಿಷರು, 1941ರ ಜನವರಿ 16ರಂದು ಕೋಲ್ಕತ್ತದಲ್ಲೇ ಅವರಿಗೆ ಗೃಹ ಬಂಧನ ವಿಧಿಸಿದ್ದರು. ಆದರೆ ನೇತಾಜಿ ಅಂದು ರಾತ್ರಿ ತಪ್ಪಿಸಿಕೊಂಡವರು ಕೊನೆಗೆ ಹಿಂತಿರುಗಲೇ ಇಲ್ಲ. ನೇತಾಜಿಯವರ ಕಣ್ಮರೆ ಬಗ್ಗೆ ಜನರು ಮೂರು ರೀತಿಯಲ್ಲಿ ಈಗಲೂ ಚರ್ಚಿಸುತ್ತಾರೆ. ಒಂದು 1945ರಲ್ಲಿ ತೈವಾನ್ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಬೋಸ್ ಸತ್ತಿದ್ದಾರೆ ಎಂದು ಹೇಳಲಾಯಿತು. ಇನ್ನೊಂದು, ರಷ್ಯಾದಲ್ಲಿ ಮೃತಪಟ್ಟಿದ್ದಾರೆ ಎಂಬುದು ಹಾಗೂ ಮತ್ತೊಂದು ಅವರು ಆಗ ಸತ್ತಿಲ್ಲ, 1970ರಲ್ಲಿ ಉತ್ತರ ಪ್ರದೇಶದ ಫೈಜಾಬಾದ್ನಲ್ಲಿ ಒಬ್ಬರು ಗುಮ್ನಾಮಿ ಬಾಬಾ ಕಾಣಿಸಿಕೊಂಡಿದ್ದರು. ಅದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರೇ ಮಾರುವೇಷದಲ್ಲಿ ಬಂದಿದ್ದು ಎಂದೂ ಹೇಳಲಾಗುತ್ತದೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಸಾವಿನ ತನಿಖೆ ನಡೆಸಲು ಭಾರತ ಸರ್ಕಾರದಿಂದ ಮೂರು ಆಯೋಗಗಳು ರಚಿತವಾದವು. ಮೊದಲು 1956ರಲ್ಲಿ ಶಾಹ್ ನವಾಜ್ ಸಮಿತಿ ರಚನೆಯಾಯ್ತು. 1974ರಲ್ಲಿ ಖೋಸ್ಲಾ ಆಯೋಗ ಮತ್ತು 2005ರಲ್ಲಿ ನ್ಯಾಯಮೂರ್ತಿ ಮುಖರ್ಜಿ ಆಯೋಗ ರಚನೆಯಾದವು. ಇದರಲ್ಲಿ ಮೊದಲೆರಡು ಆಯೋಗಗಳು ಸುಭಾಷ್ ಚಂದ್ರ ಬೋಸ್ ಅವರು 1945ರ ಆಗಸ್ಟ್ 18ರಂದು ತೈವಾನ್ನ ಮಿಲಿಟರಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ ಎಂದೇ ವರದಿ ನೀಡಿದವು. ಆದರೆ ನ್ಯಾಯಮೂರ್ತಿ ಮುಖರ್ಜಿ ಆಯೋಗ, ಸುಭಾಷ್ ಚಂದ್ರ ಬೋಸ್ ಅವರು ಅಂದಿನ ವಿಮಾನ ಅಪಘಾತದಲ್ಲಿ ಸತ್ತಿಲ್ಲ. ಜಪಾನ್ ದೇಗುಲದಲ್ಲಿರುವ ಚಿತಾಭಸ್ಮ ನೇತಾಜಿಯವರದ್ದಲ್ಲ ಎಂದೂ ಪ್ರತಿಪಾದಿಸಿತ್ತು.
ಜಪಾನ್ ದಾಖಲೆಯಲ್ಲೇನಿತ್ತು? ನೇತಾಜಿ ಸಾವಿಗೆ ಸಂಬಂಧಪಟ್ಟ, 60ವರ್ಷಗಳಷ್ಟು ಹಳೆಯ ಜಪಾನ್ ಸರ್ಕಾರದ ದಾಖಲೆಗಳು 2016ರಲ್ಲಿ ಬಹಿರಂಗಗೊಂಡಿವೆ. ಅದರಲ್ಲಿ ಅವರು 1945ರ ಆಗಸ್ಟ್ 18ರಂದು, ತೈವಾನ್ನಲ್ಲಿ ನಡೆದ ವಿಮಾನ ಅಪಘಾತದಲ್ಲಿಯೇ ಮೃತಪಟ್ಟಿದ್ದಾರೆಂದು ಉಲ್ಲೇಖಿಸಲಾಗಿದೆ. 1945ರ ಆಗಸ್ಟ್ 18ರಂದು ಸುಭಾಷ್ ಚಂದ್ರ ಬೋಸ್ ಪ್ರಯಾಣಿಸುತ್ತಿದ್ದ ವಿಮಾನ ಅಪಘಾತ ಆಯ್ತು. ಅದೇ ದಿನ ಸಂಜೆ ಅವರು ತೈಪೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಜಪಾನ್ ಸರ್ಕಾರ ಬಿಡುಗಡೆ ಮಾಡಿದ ಏಳು ಪೇಜ್ಗಳ ವರದಿಯಲ್ಲಿ ಹೇಳಲಾಗಿತ್ತು. ಆದರೆ ಅದರಲ್ಲೂ ಕೂಡ ತೃಪ್ತಿಯಿಲ್ಲ. 1949ರಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರು ರಷ್ಯಾದ ಸೆರೆಮನೆಯೊಂದರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ನೋಡಿದ್ದಾರೆ ಎಂಬಂತ ವರದಿಗಳೂ ಇದ್ದು, ಅದಕ್ಕೆ ಸಾಕ್ಷಿಯಿದೆ ಎಂದೂ ಹೇಳಲಾಗಿದೆ.
ಅದೆಲ್ಲದರ ಮಧ್ಯೆ, ಸುಭಾಷ್ ಚಂದ್ರ ಬೋಸ್ ಅವರ ಪುಣ್ಯ ತಿಥಿ ಆಗಸ್ಟ್ 18ರಂದು ಎಂದು 2019ರಲ್ಲಿ, ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಟ್ವೀಟ್ ಮಾಡಿತ್ತು. ಇದು ಮತ್ತೆ ಪ್ರತಿಭಟನೆಗಳಿಗೆ ಕಾರಣವಾಗಿ, ಅದನ್ನು ಹಿಂಪಡೆದಿತ್ತು. ಸುಭಾಷ್ ಚಂದ್ರ ಬೋಸ್ ಕುಟುಂಬ ಅವರು ಸತ್ತಿದ್ದು ಆಗಸ್ಟ್ 18ರ 1945ರಂದು ಎಂದೇ ನಂಬಿದ್ದರೂ ಅವರ ಅನುಯಾಯಿಗಳು ಒಪ್ಪುತ್ತಿಲ್ಲ. ಹಾಗೇ, ಇದೀಗ ಟಿಎಂಸಿ ಕೂಡ ಕಾಂಗ್ರೆಸ್ ಟ್ವೀಟ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ನೇತಾಜಿ ಸಾವಿನ ಕುರಿತು ಸರಿಯಾದ ತನಿಖೆಯಾಗಬೇಕು ಎಂದೇ ಆಗ್ರಹಿಸುತ್ತಿದೆ.
ಇದನ್ನೂ ಓದಿ: ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ: ಮೂವರ ಬಂಧನ; ಘಟನೆ ಸಮರ್ಥಿಸಿಕೊಂಡ ಭಗವಂತ್ ಖೂಬಾ