ಮುಷ್ಕರ ವಾಪಸ್ ಪಡೆದ ಟ್ರಕ್ ಚಾಲಕರು; ಜನರು ನಿರಾಳ
ಕೇಂದ್ರದ ಹೊಸ ಕಾನೂನು ವಿರೋಧಿಸಿ ದೇಶಾದ್ಯಂತ ಟ್ರಕ್ ಚಾಲಕರು ಮುಷ್ಕರ ನಡೆಸುತ್ತಿದ್ದರು. ಇದರ ಬಿಸಿ ಮಹಾರಾಷ್ಟ್ರ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಬಿಹಾರ ರಾಜ್ಯಗಳಲ್ಲಿ ತಟ್ಟಿತ್ತು. ಟ್ರಕ್ ಚಾಲಕರ ಮುಷ್ಕರ ಹಿನ್ನೆಲೆ ಪೆಟ್ರೋಲ್, ಡೀಸೆಲ್ ಸಾಗಣೆಗೆ ಅಡ್ಡಿಯಾಗಿತ್ತು. ಜನರೆದಲ್ಲರೂ ಅಗತ್ಯಕ್ಕಿಂತ ಹೆಚ್ಚು ಇಂಧನ ಖರೀದಿಸಿದ ಹಿನ್ನೆಲೆ ಪೆಟ್ರೋಲ್, ಡೀಸೆಲ್ ಕೊರತೆ ಉಂಟಾಗಿತ್ತು. ಸದ್ಯ ಕೇಂದ್ರ ಗೃಹ ಕಾರ್ಯದರ್ಶಿ ಜೊತೆ ಸಭೆ ನಂತರ ಮುಷ್ಕರ ವಾಪಸ್ ಪಡೆಯಲಾಗಿದೆ.
ನವದೆಹಲಿ, ಜ.2: ಕೇಂದ್ರದ ಹೊಸ ಕಾನೂನು ವಿರೋಧಿಸಿ ದೇಶಾದ್ಯಂತ ಟ್ರಕ್ ಚಾಲಕರು ಕರೆ ನೀಡಿದ್ದ ಮುಷ್ಕರವನ್ನು (Truck drivers strike) ವಾಪಸ್ ಪಡೆದಿದ್ದಾರೆ. ಕೇಂದ್ರ ಗೃಹ ಕಾರ್ಯದರ್ಶಿ ಜೊತೆ ಸಭೆ ನಂತರ ಮುಷ್ಕರ ವಾಪಸ್ ಪಡೆದಿದ್ದು, ಸರಕು ಸಾಗಣೆ ವಾಹನಗಳ ಚಾಲಕರು ನಾಳೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
ಸಭೆ ನಂತರ ಮಾತನಾಡಿದ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, “ನಾವು ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ್ದೇವೆ. ಹೊಸ ನಿಯಮವನ್ನು ಇನ್ನೂ ಜಾರಿಗೆ ತಂದಿಲ್ಲ ಎಂದು ಹೇಳಿದ್ದೇವೆ. ಭಾರತೀಯ ನ್ಯಾಯ ಸಂಹಿತಾ 106/2 ಅನ್ನು ಜಾರಿಗೊಳಿಸುವ ಮೊದಲು ನಾವು ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿ ನಂತರವೇ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದಿದ್ದಾರೆ.
#WATCH | Union Home Secretary Ajay Bhalla says, ” We had a discussion with All India Motor Transport Congress representatives, govt want to say that the new rule has not been implemented yet, we all want to say that before implementing Bharatiya Nyaya Sanhita 106/2, we will have… pic.twitter.com/14QXaVUg7t
— ANI (@ANI) January 2, 2024
“ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಧಿಸಿದ್ದ ಹತ್ತು ವರ್ಷಗಳ ಶಿಕ್ಷೆ ಮತ್ತು ದಂಡವನ್ನು ತಡೆಹಿಡಿದಿದ್ದಾರೆ” ಎಂದು ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಅಧ್ಯಕ್ಷ ಅಮೃತ್ ಲಾಲ್ ಮದನ್ ಹೇಳಿದ್ದಾರೆ.
ಇದನ್ನೂ ಓದಿ: ಒಂದೆಡೆ ಹಿಟ್ ಆ್ಯಂಡ್ ರನ್ ಕಾನೂನು ವಿರುದ್ಧ ಟ್ರಕ್ ಚಾಲಕರ ಪ್ರತಿಭಟನೆ, ಇನ್ನೊಂದೆಡೆ ಪೆಟ್ರೋಲ್ ಬಂಕ್ನಲ್ಲಿ ಜನವೋ ಜನ
ಹಿಟ್ & ರನ್ ಕೇಸ್ನಲ್ಲಿ 10 ವರ್ಷ ಜೈಲು, 7 ಲಕ್ಷ ರೂ. ದಂಡ ವಿಧಿಸುವ ಕೇಂದ್ರದ ಹೊಸ ಕಾನೂನು ವಿರೋಧಿಸಿ ಟ್ರಕ್ ಚಾಲಕರು ಮುಷ್ಕರ ನಡೆಸುತ್ತಿದ್ದರು. ಈ ಮುಷ್ಕರದ ಬಿಸಿ ಮಹಾರಾಷ್ಟ್ರ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಬಿಹಾರ ರಾಜ್ಯಗಳಿಗೆ ತಟ್ಟಿತ್ತು.
ಸೊಲ್ಲಾಪುರ, ಕೊಲ್ಹಾಪುರ, ನಾಗ್ಪುರ ಜಿಲ್ಲೆಗಳಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆ ವೇಳೆ ಚಾಲಕರು ಪೊಲೀಸರ ಜೊತೆ ಸಂಘರ್ಷಕ್ಕೆ ಇಳಿದಿದ್ದರು. ಇನ್ನೊಂದೆಡೆ, ಟ್ರಕ್ ಚಾಲಕರ ಮುಷ್ಕರ ಹಿನ್ನೆಲೆ ಪೆಟ್ರೋಲ್, ಡೀಸೆಲ್ ಸಾಗಣೆಗೆ ಅಡ್ಡಿ ಉಂಟಾಗಿತ್ತು. ಎಲ್ಲಿ ಇಂಧನ ಸಿಗುವುದಿಲ್ಲವೋ ಎಂಬ ಭೀತಿಯಿಂದ ಬಂಕ್ಗಳಿಗೆ ಮುಗಿಬಿದ್ದ ಜನರು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್, ಡೀಸೆಲ್ ಖರೀದಿಸಿದ್ದರು.
ಅಗತ್ಯಕ್ಕಿಂತ ಹೆಚ್ಚು ಪೆಟ್ರೋಲ್, ಡೀಸೆಲ್ ತುಂಬಿಸಿಕೊಂಡಿದ್ದರ ಪರಿಣಾಮ ದೇಶದ ಹಲವೆಡೆ ಪೆಟ್ರೋಲ್, ಡೀಸೆಲ್ ಖಾಲಿಯಾಗಿತ್ತು. ಸದ್ಯ ಟ್ರಕ್ ಚಾಲಕರು ಮುಷ್ಕರ ಹಿಂಪಡೆದಿದ್ದರಿಂದ ಜನರು ನಿರಾಳರಾಗಿದ್ದಾರೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:47 pm, Tue, 2 January 24