ತಿಮ್ಮಪ್ಪನ ಸನ್ನಿಧಾನಕ್ಕೆ ಮತ್ತೆ ಮಕ್ಕಳು-ವೃದ್ಧರಿಗೆ ಅವಕಾಶ; ನಿರ್ಬಂಧ ಸಡಿಲಿಕೆ, ಆದ್ರೆ ಷರತ್ತು ಅನ್ವಯ
ಭಕ್ತರು ಈಗಿರುವ ನಿಯಮದ ಅನುಸಾರವೇ ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಬೇಕು. ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಟಿಟಿಡಿ ಹೇಳಿದೆ.
ತಿರುಮಲ: ತಿರುಮಲ ತಿರುಪತಿ ದೇವಸ್ಥಾನ (TTD)ಕೊವಿಡ್-19 ನಿರ್ಬಂಧಗಳನ್ನು ಸಡಿಲಿಸಿದ್ದು, ಇನ್ನು ಮುಂದೆ 10 ವರ್ಷದೊಳಗಿನ ಮಕ್ಕಳು, 65 ಮೇಲ್ಪಟ್ಟ ವೃದ್ಧರು ಮತ್ತು ಗರ್ಭಿಣಿಯರೂ ಕೂಡ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಆಗಮಿಸಬಹುದು ಎಂದು ಹೇಳಿದೆ.
ಕೊರೊನಾ ಕಾರಣದಿಂದ ಮಾರ್ಚ್ನಿಂದಲೂ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ಇರಲಿಲ್ಲ. ಜೂನ್ನಿಂದ ಮತ್ತೆ ದೇವರ ದರ್ಶನಕ್ಕೆ ಅನುಮತಿ ನೀಡಿದ್ದರೂ, 10 ವರ್ಷ ಒಳಗಿನ ಮಕ್ಕಳು, ವೃದ್ಧರು, ಗರ್ಭಿಣಿಯರಿಗೆ ಅನುಮತಿ ನೀಡಿರಲಿಲ್ಲ. ಆದರೆ ಮಕ್ಕಳು, ವೃದ್ಧರು, ಗರ್ಭಿಣಿಯರಿಗೂ ಅವಕಾಶ ಕೊಡಿ ಎಂಬ ಮನವಿಯುಳ್ಳ ಇ-ಮೇಲ್ಗಳು, ಫೋನ್ ಕರೆಗಳು ಟಿಟಿಡಿಗೆ ಹೆಚ್ಚು ಪ್ರಮಾಣದಲ್ಲಿ ಬರಲು ಪ್ರಾರಂಭವಾಗಿತ್ತು.
ತಮ್ಮ ಪುಟ್ಟ ಮಕ್ಕಳಿಗೆ ಅನ್ನ ಹಾಕಿಸುವ ಶಾಸ್ತ್ರ, ಮುಡಿ ಕೊಡುವುದು, ಕಿವಿ ಚುಚ್ಚುವ ಶಾಸ್ತ್ರವನ್ನು ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಮಾಡಲು ಬಯಸುತ್ತಿದ್ದೇವೆ ಎಂದು ಅನೇಕ ಪಾಲಕರು ಹೇಳಿದ್ದರು.. ಹಾಗೇ 65ವರ್ಷ ಮೇಲ್ಪಟ್ಟವರು ತಮ್ಮ ಷಷ್ಟಿಪೂರ್ತಿ, ಶಾಂತಿ ಪೂಜೆಯನ್ನು ಮಾಡಿಸುವುದಿತ್ತು, ಅವಕಾಶ ಮಾಡಿಕೊಂಡಿ ಎಂಬ ಕೋರಿಕೆ ಇಟ್ಟಿದ್ದರು. ಇದೆಲ್ಲ ಕಾರಣದಿಂದ ಟಿಟಿಡಿ ಮಹತ್ವದ ನಿರ್ಧಾರವನ್ನು ಕೈಗೆತ್ತಿಕೊಂಡಿದೆ. ಆದರೆ ಸಾಮಾಜಿಕ ಅಂತರ ಪರಿಪಾಲನೆ, ಮಾಸ್ಕ್ ಕಡ್ಡಾಯ ಎಂದು ಹೇಳಿದೆ.
ಭಕ್ತರು ಈಗಿರುವ ನಿಯಮದ ಅನುಸಾರವೇ ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಬೇಕು. ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದೆ.
ತಿರುಪತಿಯಲ್ಲಿ ಶ್ರೀವಾರಿ ಲಡ್ಡು ಪ್ರಸಾದದ ಜೊತೆಗೆ 2021ರ ಕ್ಯಾಲೆಂಡರ್, ಡೈರಿಯನ್ನೂ ಕೊಡ್ತಿದ್ದಾರೆ