ದೆಹಲಿಯಲ್ಲಿ ಗಂಭೀರ ಹಂತಕ್ಕೆ ತಲುಪಿರುವ ಮಾಲಿನ್ಯ (Delhi Air Pollution)ಪರಿಸ್ಥಿತಿಯನ್ನು ಸುಪ್ರೀಂಕೋರ್ಟ್ ಅಷ್ಟೇ ಗಂಭೀರವಾಗಿ ಪರಿಗಣಿಸಿದೆ. ರಾಷ್ಟ್ರರಾಜಧಾನಿ ದೆಹಲಿ ಮತ್ತು ಸುತ್ತಲಿನ ನಗರಗಳಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾಗಿದ್ದು, ಅದನ್ನು ತುರ್ತು ಪರಿಸ್ಥಿತಿಯೆಂದು ಪರಿಗಣಿಸಿ, ನಿಯಂತ್ರಣಕ್ಕೆ ಕೂಡಲೇ ಕ್ರಮ ಕೈಗೊಳ್ಳಿ ಎಂದು ಕೇಂದ್ರ ಸರ್ಕಾರದಿಂದ ಹಿಡಿದು, ನಗರಾಡಳಿತಗಳವರೆಗೆ ಸುಪ್ರೀಂ ಸೂಚನೆ ನೀಡಿದೆ. ದೆಹಲಿ ಮಾಲಿನ್ಯದ ಪರಿಸ್ಥಿತಿ ಕುರಿತಂತೆ ಸಲ್ಲಿಕೆಯಾದ ಅರ್ಜಿಗಳ ಮತ್ತು ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಕೇಂದ್ರ, ದೆಹಲಿ ಆಪ್ ಸರ್ಕಾರಗಳು ಸಲ್ಲಿಸಿದ್ದ ವರದಿಯ ವಿಚಾರಣೆ ಇಂದು ನಡೆಯಿತು. ಈ ವೇಳೆ ಸಿಜೆಐ ಎನ್.ವಿ.ರಮಣ, ಎಲ್ಲವನ್ನೂ ನ್ಯಾಯಾಂಗವೇ ಹೇಳಲಿ ಎಂದು ಕುಳಿತುಕೊಳ್ಳಬಾರದು. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಖಡಕ್ ಆಗಿ ಹೇಳಿದ್ದಾರೆ.
ದೀಪಾವಳಿ ಹಬ್ಬ ಮುಗಿದು 10 ದಿನಗಳಾದರೂ ಪಟಾಕಿ ಹೊಡೆಯಲಾಗುತ್ತಿದೆ. ಆದರೆ ಮಾಲಿನ್ಯಕ್ಕೆ ಕಾರಣವೇನು ಎಂದು ಪ್ರಶ್ನಿಸಿದರೆ ಎಲ್ಲರೂ ರೈತರತ್ತ ಮಾತ್ರ ಬೆರಳು ತೋರಿಸುತ್ತಾರೆ. ಅವರು ಒಣಗಿದ ಪೈರು ಸುಡುತ್ತಿರುವುದರಿಂದಲೇ ವಾಯುಮಾಲಿನ್ಯ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಹೀಗೆ ಪಟಾಕಿ ನಿಷೇಧಿಸಿದ್ದರೂ ಈಗಲೂ ಅದನ್ನು ಸಿಡಿಸುತ್ತಿರುವವರ ವಿರುದ್ಧ ಇನ್ನೂ ಕ್ರಮ ಯಾಕೆ ಕೈಗೊಂಡಿಲ್ಲ ಎಂದು ಸಿಜೆಐ ಸರ್ಕಾರಗಳಿಗೆ ಪ್ರಶ್ನೆ ಮಾಡಿದ್ದಾರೆ.
ಇದೇ ವೇಳೆ ಸಿಜೆಐ ಎನ್.ವಿ.ರಮಣ ಸುದ್ದಿ ಮಾಧ್ಯಮಗಳ ವಿರುದ್ಧ ತಮ್ಮ ಅಸಮಾಧಾನವನ್ನು ತೀಕ್ಷ್ಣವಾಗಿ ಹೊರಹಾಕಿದರು. ಟಿವಿಗಳಲ್ಲಿ ಪ್ರಸಾರವಾಗುವ ಚರ್ಚೆಗಳು ಉಳಿದೆಲ್ಲಕ್ಕಿಂತಲೂ ಹೆಚ್ಚಿನ ಮಾಲಿನ್ಯ ಉಂಟು ಮಾಡುತ್ತಿವೆ. ನ್ಯಾಯಾಲಯಗಳು ಹೇಳುವ ಸಣ್ಣಸಣ್ಣ, ಸರಳ ವಿಚಾರಗಳನ್ನೂ ದೊಡ್ಡದು ಮಾಡಿ, ಅವುಗಳಿಗೆ ವಿವಾದಾತ್ಮಕ ರೂಪ ಕೊಟ್ಟು ಈ ಡಿಬೇಟ್ಗಳಲ್ಲಿ ಚರ್ಚಿಸಲಾಗುತ್ತಿದೆ. ಹೀಗೆ ಅನಗತ್ಯವಾಗಿ ಬೇಡದ ವಿಚಾರಗಳನ್ನು ಪ್ರಸಾರ ಮಾಡುವ ಮೂಲಕ ಮಾಲಿನ್ಯ ಉಂಟು ಮಾಡಲಾಗುತ್ತಿದೆ ಎಂದು ಹೇಳಿದರು. ಈ ಮೂಲಕ ದೆಹಲಿ ಮಾಲಿನ್ಯದ ನೆಪದಲ್ಲಿ ಸುದ್ದಿ ಮಾಧ್ಯಮಗಳು ಮತ್ತು ಅದರಲ್ಲಿ ಪ್ರಸಾರವಾಗುವ ಡಿಬೇಟ್ಗಳ ವಿರುದ್ಧ ಕಿಡಿ ಕಾರಿದರು.
ಅಂದಹಾಗೆ ಇಲ್ಲಿ ಟಿವಿ ಡಿಬೇಟ್ಗಳ ವಿಷಯ ಮೊದಲು ಪ್ರಸ್ತಾಪ ಮಾಡಿದ್ದು, ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ. ‘ರೈತರು ಕೊಯ್ಲು ಮಾಡಿದ ಪೈರಿನ ಕೂಳೆ ಸುಡುವ ಕಾರಣದಿಂದಲೇ ದೆಹಲಿ ಮಾಲಿನ್ಯ ಮಟ್ಟ ಹೆಚ್ಚುತ್ತಿದೆ ಎಂದು ನಾನು ಅಂದರೆ ಸುಪ್ರೀಂಕೋರ್ಟ್ಗೆ ತಪ್ಪು ಮಾಹಿತಿ ನೀಡುತ್ತಿದ್ದೇನೆ. ಈ ಮೂಲಕ ಸರ್ವೋಚ್ಛ ನ್ಯಾಯಾಲಯದ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನ ಮಾಡುತ್ತಿದ್ದೇನೆ ಎಂದು ಸುದ್ದಿ ಮಾಧ್ಯಮಗಳ ಚರ್ಚೆಗಳಲ್ಲಿ ಹೇಳಲಾಗುತ್ತಿದೆ’ ಎಂದು ತುಷಾರ್ ಮೆಹ್ತಾ ಸಿಜೆಐ ಬಳಿ ಹೇಳಿದರು. ಅದಕ್ಕೆ ಪ್ರತಿಯಾಗಿ ಉತ್ತರಿಸಿದ ಅವರು, ನಾವು ದಾರಿ ತಪ್ಪಿಲ್ಲ. ಮೀಡಿಯಾಗಳ ಡಿಬೇಟ್ಗಳಿಂದ ಆಗುವಷ್ಟು ಮಾಲಿನ್ಯ ಇನ್ಯಾವ ಮೂಲಗಳಿಂದಲೂ ಆಗುತ್ತಿಲ್ಲ ಎಂದು ಹೇಳಿದರು.
ರೈತರ ಕಷ್ಟ ನಮಗೆ ಅರ್ಥವಾಗುತ್ತದೆ
ಯಾರೆಷ್ಟೇ ರೈತರ ಮೇಲೆ ತಪ್ಪು ಹೊರೆಸಿದರೂ ನಮಗೆ ಅರ್ಥವಾಗುತ್ತದೆ. ದೆಹಲಿಯ ಐದು, ಏಳು ಸ್ಟಾರ್ಗಳ ಹೋಟೆಲ್ಗಳಲ್ಲಿ ಕುಳಿತು ಮಾತನಾಡುವ ಜನರು, ಮಾಲಿನ್ಯಕ್ಕೆ ರೈತರೇ ಕಾರಣ ಎಂದು ತುಂಬ ಸುಲಭವಾಗಿ ಹೇಳಿಬಿಡುತ್ತಾರೆ. ಆದರೆ ಹೀಗೆ ನಿಷೇಧದ ನಡುವೆಯೂ ಪಟಾಕಿ ಹೊಡೆಯುವವರಿಗೆ ಏನೆನ್ನೋಣ? ಮಾಲಿನ್ಯ ಹೆಚ್ಚುವಲ್ಲಿ ಐಷಾರಾಮಿ ವಾಹನದಲ್ಲಿ ತಿರುಗಾಡುವವರ ಕೊಡುಗೆಯೂ ಇರುತ್ತದೆ. ಅಷ್ಟಕ್ಕೂ ರೈತರು ತಮ್ಮ ಹೊಲ ಸ್ವಚ್ಛಗೊಳಿಸಿಕೊಳ್ಳಲು ಪರ್ಯಾಯ ಮಾರ್ಗವೇನು? ಎಂದು ಸಿಜೆಐ ರಮಣ ಪ್ರಶ್ನಿಸಿದ್ದಾರೆ. ಮುಂದಿನ ವಿಚಾರಣೆಯನ್ನು ಮುಂದಿನ ಬುಧವಾರ ನಡೆಸುವುದಾಗಿ ತಿಳಿಸಿದ್ದಾರೆ. ಈ ಮಧ್ಯೆ ದೆಹಲಿಯಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚಲು, ಟ್ರಕ್ ಬ್ಯಾನ್, ಉಷ್ಣಸ್ಥಾವರಗಳ ಬಂದ್ ಮಾಡಲು ಸೂಚಿಸಲಾಗಿದೆ.
ಇದನ್ನೂ ಓದಿ: ದೆಹಲಿ ವಾಯುಮಾಲಿನ್ಯ; ಶಾಲಾ-ಕಾಲೇಜು ಮುಚ್ಚಲು, ಕಚೇರಿಗಳಿಗೆ ಶೇ.50ರಷ್ಟು ಉದ್ಯೋಗಿಗಳು ಬರಲು ಸೂಚನೆ
Published On - 3:54 pm, Wed, 17 November 21