ಚುನಾವಣೆ ಹೊಸಿಲಲ್ಲಿರುವ ಉತ್ತರ ಪ್ರದೇಶದಲ್ಲಿ ಸಾಲುಸಾಲು ಯೋಜನೆಗಳನ್ನು ಲೋಕಾರ್ಪಣೆ ಮಾಡಲು ಬಿರುಸಿನ ಸಿದ್ಧತೆ

ನವೆಂಬರ್ 25ರಂದು ಗ್ರೇಟರ್​ ನೋಯ್ಡಾಕ್ಕೆ ಭೇಟಿ ನೀಡಲಿರುವ ಮೋದಿ ಮೆಗಾ ನೊಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಚುನಾವಣೆ ಹೊಸಿಲಲ್ಲಿರುವ ಉತ್ತರ ಪ್ರದೇಶದಲ್ಲಿ ಸಾಲುಸಾಲು ಯೋಜನೆಗಳನ್ನು ಲೋಕಾರ್ಪಣೆ ಮಾಡಲು ಬಿರುಸಿನ ಸಿದ್ಧತೆ
ಪ್ರಧಾನಿ ನರೇಂದ್ರ ಮೋದಿ


ಲಖನೌ: ಚುನಾವಣೆ ಹೊಸಿಲಲ್ಲಿರುವ ಉತ್ತರ ಪ್ರದೇಶಕ್ಕೆ ಪೂರ್ವಾಂಚಲ ಎಕ್ಸ್​ಪ್ರೆಸ್​ವೇ ಬಿಜೆಪಿ ಕೊಡುತ್ತಿರುವ ಕೊನೆಯ ಕೊಡುಗೆಯಲ್ಲ. ಇಂಥ ಇನ್ನಷ್ಟು ಯೋಜನೆಗಳ ಸಾಲು ಸಿದ್ಧಗೊಂಡಿದ್ದು, ಒಂದೊಂದಾಗಿ ಅನಾವರಣಗೊಳ್ಳಲಿವೆ. ಮುಂದಿನ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕನಿಷ್ಠ ಮೂರು ಮುಖ್ಯ ಯೋಜನೆಗಳಿಗೂ ಭೂಮಿಪೂಜೆ ನೆರವೇರಿಸಲಿದ್ದಾರೆ. ನವೆಂಬರ್ 25ರಂದು ಗ್ರೇಟರ್​ ನೋಯ್ಡಾಕ್ಕೆ ಭೇಟಿ ನೀಡಲಿರುವ ಮೋದಿ ಮೆಗಾ ನೊಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಅಲ್ಲಿ ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿಯೂ ಮಾತನಾಡುತ್ತಾರೆ.

ಪೂರ್ವಾಂಚಲ್ ಎಕ್ಸ್​ಪ್ರೆಸ್​ವೇ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮೀರತ್​ನಿಂದ ಪ್ರಯಾಗ್​ರಾಜ್ ಸಂಪರ್ಕಿಸುವ 594 ಕಿಮೀ ಅಂತರದ ಗಂಗಾ ಎಕ್ಸ್​ಪ್ರೆಸ್​ವೇ ಮೂಲಕ ಪೂರ್ವ ಉತ್ತರ ಪ್ರದೇಶವನ್ನು ಪಶ್ಚಿಮ ಉತ್ತರ ಪ್ರದೇಶದೊಂದಿಗೆ ಬೆಸೆಯಲಾಗುವುದು. ಈ ಯೋಜನೆಗೆ ಇನ್ನು ಕೆಲವೇ ದಿನಗಳಲ್ಲಿ ಚಾಲನೆ ಸಿಗದಲಿದೆ. ಇಟಾ-ಚಿತ್ರಕೂಟ ಮಾರ್ಗದ ಬುಂದೇಲಖಂಡ ಎಕ್ಸ್​ಪ್ರೆಸ್​ವೇ ಕಾಮಗಾರಿಗೂ ಹೊಸ ವೇಗ ಸಿಗಲಿದೆ ಎಂದು ಘೋಷಿಸಿದ್ದರು.

ಗಂಗಾ ಎಕ್ಸ್​ಪ್ರೆಸ್​ವೇ ಯೋಜನೆಯ ತಾಂತ್ರಿಕ ಬಿಡ್​ಗಳನ್ನು ಮೂರು ದಿನಗಳ ಹಿಂದೆ ತೆರೆಯಲಾಗಿದೆ. ಅಂತಿಮ ಬಿಡ್​ಗಳನ್ನು ಮುಂದಿನ ವಾರ ತೆರೆಯಲಾಗುವುದು. ಯಶಸ್ವಿ ಬಿಡ್ಡರ್ ಯಾರು ಎಂಬುದು ಅಂತಿಮವಾದ ತಕ್ಷಣ ಶಿಲಾನ್ಯಾಸ ನೆರವೇರಿಸಲಾಗುವುದು. ಈ ಯೋಜನೆಗೆ ಬೇಕಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಶೇ 94ರಷ್ಟು ಮುಕ್ತಾಯವಾಗಿದೆ. ಹಾಲಿ ಚಾಲ್ತಿಯಲ್ಲಿರುವ ಲಖನೌ-ಆಗ್ರಾ ಎಕ್ಸ್​ವೇ ಮಾರ್ಗವನ್ನು ಇದು ಹಲವೆಡೆ ಅಡ್ಡಲಾಗಿ ಹಾದು ಹೋಗುತ್ತದೆ. ಈ ಯೋಜನೆಗೆ ಸುಮಾರು ₹ 36,000 ಕೋಟಿ ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ಬುಂದೇಲಖಂಡ್ ಎಕ್ಸ್​ಪ್ರೆಸ್ ವೇ ಯೋಜನೆಯ ಶೇ 76ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಡಿಸೆಂಬರ್ ಮಾಸಾಂತ್ಯದ ಒಳಗೆ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ಆಲೋಚನೆ ಉತ್ತರ ಪ್ರದೇಶದ ಬಿಜೆಪಿ ಸರ್ಕಾರಕ್ಕೆ ಇದೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಲಖನೌ-ಆಗ್ರಾ ಎಕ್ಸ್​ಪ್ರೆಸ್​ವೇ ಮಾರ್ಗಕ್ಕೆ ಇದು ಹಲವೆಡೆ ಅಡ್ಡಲಾಗಿ ಹಾದುಹೋಗುತ್ತದೆ. ಗೋರಖ್​ಪುರದಲ್ಲಿ ರಸಗೊಬ್ಬರ ಕಾರ್ಖಾನೆ ಮತ್ತು ಏಮ್ಸ್​ ಆಸ್ಪತ್ರೆಯ ಸಂಕೀರ್ಣವನ್ನೂ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಈ ಸಮಾರಂಭ ಡಿಸೆಂಬರ್ 5ರಂದು ನಡೆಯಬಹುದು ಎಂದು ತಾತ್ಕಾಲಿಕ ದಿನಾಂಕ ನಿಗದಿಪಡಿಸಲಾಗಿದೆ.

ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಚಾಲನೆ ನೀಡಿದ್ದ ಯೋಜನೆಗಳನ್ನು ಮಾತ್ರ ಯೋಗಿ ಆದಿತ್ಯನಾಥ್ ಸರ್ಕಾರವು ಉದ್ಘಾಟಿಸುತ್ತಿದೆ ಎಂದು ಉತ್ತರ ಪ್ರದೇಶದ ಪ್ರಮುಖ ಪ್ರತಿಪಕ್ಷ ಸಮಾಜವಾದಿ ಪಕ್ಷ ಆರೋಪಿಸಿದೆ. ಆದರೆ ಬಿಜೆಪಿ ಈ ಹೇಳಿಕೆಗಳನ್ನು ಒಪ್ಪುತ್ತಿಲ್ಲ. ಈ ಎಲ್ಲ ಯೋಜನೆಗಳ ಶ್ರೇಯವು ಕೇಂದ್ರದ ಮೋದಿ ಸರ್ಕಾರ ಮತ್ತು ರಾಜ್ಯದ ಯೋಗಿ ಸರ್ಕಾರಕ್ಕೆ ಸೇರಬೇಕು. ಬೇರೆ ಯಾರೂ ಇದರಲ್ಲಿ ಪಾಲುದಾರರಲ್ಲ ಎಂದು ಬಿಜೆಪಿ ಹೇಳುತ್ತಿದೆ.

ಇದನ್ನೂ ಓದಿ: Purvanchal Expressway Inaguration: ಉತ್ತರ ಪ್ರದೇಶದಲ್ಲಿ 22,500 ಕೋಟಿ ವೆಚ್ಚದ ಪೂರ್ವಾಂಚಲ್ ಎಕ್ಸ್​ಪ್ರೆಸ್​ವೇ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
ಇದನ್ನೂ ಓದಿ: ಉತ್ತರ ಪ್ರದೇಶ ಸರ್ಕಾರದಿಂದ ಹೊಸ ಯೋಜನೆ; ಹಸುಗಳಿಗೆ ಆಂಬುಲೆನ್ಸ್ ಸೇವೆ ಒದಗಿಸಲು ನಿರ್ಧಾರ

Published On - 5:31 pm, Wed, 17 November 21

Click on your DTH Provider to Add TV9 Kannada