ನವದೆಹಲಿ: ಉತ್ತರ ಪ್ರದೇಶದ ಪೂರ್ವಾಂಚಲ್ ಎಕ್ಸ್ಪ್ರೆಸ್ವೇಗೆ ವಾಯುಪಡೆಯ ಸಿ- 130ಜೆ ಸೂಪರ್ ಹರ್ಕ್ಯುಲಸ್ ವಿಮಾನದಲ್ಲಿ ಬಂದಿಳಿದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟನೆ ಮಾಡಿದ್ದಾರೆ. ಎಕ್ಸ್‌ಪ್ರೆಸ್‌ವೇಯಲ್ಲಿ ನಿರ್ಮಿಸಲಾದ 3.2 ಕಿಲೋಮೀಟರ್ ಏರ್‌ಸ್ಟ್ರಿಪ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ C-130 ಹರ್ಕ್ಯುಲಸ್ ವಿಮಾನದಲ್ಲಿ ಬಂದಿಳಿದರು. ಸುಲ್ತಾನ್‌ಪುರ ಜಿಲ್ಲೆಯ ಕರ್ವಾಲ್ ಖೇರಿಯಲ್ಲಿ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯನ್ನು ಅವರು ಉದ್ಘಾಟಿಸಿದ್ದಾರೆ. ಇದಾದ ಬಳಿಕ ಇಬ್ಬರೂ ಭಾರತೀಯ ವಾಯುಪಡೆಯ ವೈಮಾನಿಕ ಪ್ರದರ್ಶನಕ್ಕೆ ಸಾಕ್ಷಿಯಾಗಲಿದ್ದಾರೆ.
340 ಕಿಮೀ ಉದ್ದದ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಲಕ್ನೋದಿಂದ ಗಾಜಿಪುರದ ನಡುವಿನ ಪ್ರಯಾಣದ ಸಮಯವನ್ನು 6 ಗಂಟೆಗಳಿಂದ 3.5 ಗಂಟೆಗಳಿಗೆ ಕಡಿಮೆ ಮಾಡುತ್ತದೆ. ಎಕ್ಸ್‌ಪ್ರೆಸ್‌ವೇ ಲಕ್ನೋದ ಚಾಂದಸರಾಯ್ ಗ್ರಾಮದಿಂದ ಪ್ರಾರಂಭವಾಗುತ್ತದೆ ಮತ್ತು ಘಾಜಿಪುರದ ರಾಷ್ಟ್ರೀಯ ಹೆದ್ದಾರಿ 31 ರಲ್ಲಿ ಹೈದರಿಯಾ ಗ್ರಾಮದಲ್ಲಿ ಕೊನೆಗೊಳ್ಳುತ್ತದೆ (ಯುಪಿ-ಬಿಹಾರ ಗಡಿಯಿಂದ 18 ಕಿಮೀ). ಇದು ಏಳು ಪ್ರಮುಖ ಸೇತುವೆಗಳು, ಏಳು ರೈಲ್ವೆ ಮೇಲ್ಸೇತುವೆಗಳು, 114 ಸಣ್ಣ ಸೇತುವೆಗಳು ಮತ್ತು 271 ಕೆಳಸೇತುವೆಗಳನ್ನು ಹೊಂದಿರುತ್ತದೆ. ಆರು ಪಥಗಳ ಎಕ್ಸ್‌ಪ್ರೆಸ್‌ವೇಯನ್ನು ಭವಿಷ್ಯದಲ್ಲಿ ಎಂಟು ಲೇನ್‌ಗಳಿಗೆ ವಿಸ್ತರಿಸಬಹುದು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹಿಂದಿನ ಸರ್ಕಾರಗಳು ಉತ್ತರ ಪ್ರದೇಶದ ಅಭಿವೃದ್ಧಿಯತ್ತ ಗಮನ ಹರಿಸಿರಲಿಲ್ಲ. ಈ ಬೃಹತ್ ಯೋಜನೆ ಉತ್ತರ ಪ್ರದೇಶದ ಹೆಮ್ಮೆ ಹಾಗೂ ಶಕ್ತಿಯಾಗಲಿದೆ. ಉತ್ತರಪ್ರದೇಶದ ಜನತೆಯ ಸಾಮರ್ಥ್ಯದ ಮೇಲೆ ಅನುಮಾನವಿದ್ದರೆ ಸುಲ್ತಾನ್ ಪರಕ್ಕೆ ಬನ್ನಿ. ಉತ್ತರಪ್ರದೇಶದ ಅಭಿವೃದ್ಧಿ ವೇಗಕ್ಕೆ ಎಕ್ಸ್‌ಪ್ರೆಸ್ ವೇ ಸಹಕಾರಿಯಾಗಲಿದೆ ಎಂದಿದ್ದಾರೆ.
ಬಳಿಕ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ನರೇಂದ್ರ ಮೋದಿಯವರ ಕಾರಣದಿಂದ ಎಕ್ಸ್‌ಪ್ರೆಸ್ ಹೈವೇ ನಿರ್ಮಾಣವಾಗಿದೆ. ಇದು ಉತ್ತರ ಪ್ರದೇಶದ ಪೂರ್ವ ವಿಭಾಗದ ಅಭಿವೃದ್ಧಿಗೆ ಸಹಕಾರಿ. ಬುಂದೇಲ್ಖಂಡ್ನಲ್ಲೂ ಎಕ್ಸ್‌ಪ್ರೆಸ್ ಹೈವೇ ನಿರ್ಮಾಣವಾಗುತ್ತದೆ. ಪೂರ್ವ, ಪಶ್ಚಿಮ ಭಾಗ ಸಂಪರ್ಕಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಎಕ್ಸ್‌ಪ್ರೆಸ್‌ವೇ ಮೇಲಿನ ಏರ್‌ಸ್ಟ್ರಿಪ್ ತುರ್ತು ಸಂದರ್ಭದಲ್ಲಿ ಐಎಎಫ್ ಯುದ್ಧ ವಿಮಾನಗಳನ್ನು ಲ್ಯಾಂಡಿಂಗ್ ಮತ್ತು ಟೇಕ್-ಆಫ್ ಮಾಡಲು ಅನುವು ಮಾಡಿಕೊಡುತ್ತದೆ. ಉದ್ಘಾಟನಾ ಸಮಾರಂಭದಲ್ಲಿ ಮಿರಾಜ್ 2000 ಮತ್ತು Su-30MKI ವಿಮಾನಗಳು ತುರ್ತು ಏರ್‌ಸ್ಟ್ರಿಪ್‌ನಲ್ಲಿ ಅನೇಕ ಟೇಕ್‌ಆಫ್‌ಗಳು ಮತ್ತು ಲ್ಯಾಂಡಿಂಗ್‌ಗಳನ್ನು ಮಾಡುತ್ತವೆ. ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯಲ್ಲಿ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಸುಮಾರು 22,500 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಹೆದ್ದಾರಿ ಲಕ್ನೋ ಜಿಲ್ಲೆಯ ಲಕ್ನೋ-ಸುಲ್ತಾನ್‌ಪುರ ರಸ್ತೆ (NH-731) ಬಳಿ ಇರುವ ಚಂದ್‌ಸರೈ ಗ್ರಾಮದಿಂದ ಪ್ರಾರಂಭವಾಗುತ್ತದೆ. ಇದು ಘಾಜಿಪುರ ಜಿಲ್ಲೆಯ ಉತ್ತರ ಪ್ರದೇಶ-ಬಿಹಾರ ಗಡಿಯಿಂದ 18 ಕಿಮೀ ದೂರದಲ್ಲಿರುವ ಗಾಜಿಪುರದ ರಾಷ್ಟ್ರೀಯ ಹೆದ್ದಾರಿ 31ರಲ್ಲಿ ಹೈದರಿಯಾ ಎಂಬ ಗ್ರಾಮದಲ್ಲಿ ಮುಕ್ತಾಯವಾಗುತ್ತದೆ.
Prime Minister Narendra Modi inaugurates the 341 km long Purvanchal Expressway, in Sultanpur. pic.twitter.com/q1C0rmGMAa
— ANI UP (@ANINewsUP) November 16, 2021
ಇಂದು ಉದ್ಘಾಟನೆಯಾಗಿರುವ ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ ಉತ್ತರ ಪ್ರದೇಶದ ರಾಜಧಾನಿ ಲಕ್ನೋವನ್ನು ಅಜಂಗಢದ ಮೂಲಕ ಪೂರ್ವ ಪ್ರದೇಶಕ್ಕೆ ಸಂಪರ್ಕಿಸುತ್ತದೆ. ಈ ಹೊಸ ಯೋಜನೆಯಿಂದ ಉತ್ತರ ಪ್ರದೇಶದ ಪೂರ್ವ ಪ್ರದೇಶವು ಲಕ್ನೋಗೆ ಮಾತ್ರವಲ್ಲದೆ ಆಗ್ರಾ-ಲಕ್ನೋ ಮತ್ತು ಯಮುನಾ ಎಕ್ಸ್‌ಪ್ರೆಸ್‌ವೇಗಳ ಮೂಲಕ ನವದೆಹಲಿಗೆ ಕೂಡ ಸಂಪರ್ಕ ಕಲ್ಪಿಸುತ್ತದೆ. ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ 22 ಫ್ಲೈಓವರ್‌ಗಳು, 7 ರೈಲ್ವೆ-ಓವರ್-ಬ್ರಿಡ್ಜ್‌ಗಳು (ROB), 7 ಪ್ರಮುಖ ಸೇತುವೆಗಳು, 114 ಸಣ್ಣ ಸೇತುವೆಗಳು, 6 ಟೋಲ್ ಪ್ಲಾಜಾಗಳು, 45 ವಾಹನ-ಅಂಡರ್‌ಪಾಸ್‌ಗಳು (VUP), 139 ಲೈಟ್ VUP, 87 ಪಾದಚಾರಿ ಅಂಡರ್‌ಪಾಸ್ ಮತ್ತು 525 ಬಾಕ್ಸ್ ಕಲ್ವರ್ಟ್‌ಗಳನ್ನು ಹೊಂದಿರುತ್ತದೆ.
ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ ಸಿಎನ್‌ಜಿ ಸ್ಟೇಷನ್‌ಗಳು, ವಾಹನಗಳಿಗೆ ಎಲೆಕ್ಟ್ರಿಕ್ ರೀಚಾರ್ಜ್ ಕೇಂದ್ರಗಳನ್ನು ಹೊಂದಿದೆ. ಈ ಹೈವೇಯಲ್ಲಿ ಗಂಟೆಗೆ 120 ಕಿಮೀ ವೇಗದಲ್ಲಿ ವಾಹನಗಳು ಸಂಚರಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ವಾಹನಗಳ ವೇಗವನ್ನು ಗಂಟೆಗೆ 100 ಕಿಮೀ ಎಂದು ನಿಗದಿಪಡಿಸಲಾಗಿದೆ. ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ ಉತ್ತರ ಪ್ರದೇಶದ ಅತಿದೊಡ್ಡ ಯೋಜನೆಯಾಗಿದೆ.
ಇದನ್ನೂ ಓದಿ: ಅಂಬಾಲ ಜೈಲಿನ ಮಣ್ಣಿನಿಂದ ನಾಥೂರಾಂ ಗೋಡ್ಸೆ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಹಿಂದೂ ಮಹಾಸಭಾ