ಉತ್ತರ ಪ್ರದೇಶ ಸರ್ಕಾರದಿಂದ ಹೊಸ ಯೋಜನೆ; ಹಸುಗಳಿಗೆ ಆಂಬುಲೆನ್ಸ್ ಸೇವೆ ಒದಗಿಸಲು ನಿರ್ಧಾರ
ಕರೆ ಮಾಡಿ ಮಾಹಿತಿ ನೀಡಿದ 15 ರಿಂದ 20 ನಿಮಿಷದ ಒಳಗಾಗಿ ಒಬ್ಬ ಪಶುವೈದ್ಯ, ಇಬ್ಬರು ಸಹಾಯಕರನ್ನು ಹೊಂದಿದ ಆಂಬುಲೆನ್ಸ್ ಸ್ಥಳಕ್ಕೆ ಆಗಮಿಸಲಿದೆ ಎಂದು ಹೇಳಲಾಗಿದೆ. ಈ ಕರೆಗಳನ್ನು ಸ್ವೀಕರಿಸಲು ಲಕ್ನೋದಲ್ಲಿ ಕಾಲ್ ಸೆಂಟರ್ ತೆರೆಯಲಾಗುವುದು ಎಂದು ಹೇಳಲಾಗಿದೆ.
ಮಥುರಾ: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಹಸುಗಳಿಗೆ ಆಂಬುಲೆನ್ಸ್ ಸೇವೆ ನೀಡಲು ಉತ್ತರ ಪ್ರದೇಶ ಸರ್ಕಾರ ತಯಾರಿ ನಡೆಸಿದೆ. ಈ ಬಗ್ಗೆ ಉತ್ತರ ಪ್ರದೇಶದ ಪಶು ಸಂಗೋಪನಾ ಮತ್ತು ಮೀನುಗಾರಿಕಾ ಸಚಿವ ಲಕ್ಷ್ಮೀ ನಾರಾಯಣ ಚೌಧರಿ ಭಾನುವಾರ ತಿಳಿಸಿದ್ದಾರೆ. ಈ ಯೋಜನೆಗಾಗಿ 515 ಆಂಬುಲೆನ್ಸ್ಗಳು ತಯಾರಾಗಿರುವ ಬಗ್ಗೆ ಅವರು ಹೇಳಿಕೆ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಈ ಯೋಜನೆ ಜಾರಿ ಆಗುತ್ತಿದೆ.
ತುರ್ತು ಪರಿಸ್ಥಿತಿಯ ಸಂದರ್ಭ 112 ಸಂಖ್ಯೆಗೆ ಕರೆ ಮಾಡುವ ಮೂಲಕ ಈ ಆಂಬುಲೆನ್ಸ್ ಸೇವೆಯನ್ನು ಬಳಸಿಕೊಳ್ಳಬಹುದು ಎಂದು ಮಾಹಿತಿ ನೀಡಲಾಗಿದೆ. ಕರೆ ಮಾಡಿ ಮಾಹಿತಿ ನೀಡಿದ 15 ರಿಂದ 20 ನಿಮಿಷದ ಒಳಗಾಗಿ ಒಬ್ಬ ಪಶುವೈದ್ಯ, ಇಬ್ಬರು ಸಹಾಯಕರನ್ನು ಹೊಂದಿದ ಆಂಬುಲೆನ್ಸ್ ಸ್ಥಳಕ್ಕೆ ಆಗಮಿಸಲಿದೆ ಎಂದು ಹೇಳಲಾಗಿದೆ. ಈ ಕರೆಗಳನ್ನು ಸ್ವೀಕರಿಸಲು ಲಕ್ನೋದಲ್ಲಿ ಕಾಲ್ ಸೆಂಟರ್ ತೆರೆಯಲಾಗುವುದು ಎಂದು ಹೇಳಲಾಗಿದೆ.
ಅಧಿಕ ಹಾಲು ನೀಡುವ ಪಶುಗಳಿಂದ ಎಂಬ್ರಿಯೋ ಟ್ರಾನ್ಸ್ಪ್ಲಾಂಟ್ ತಂತ್ರಜ್ಞಾನವು ರಾಜ್ಯದಲ್ಲಿ ಕ್ರಾಂತಿ ಹುಟ್ಟುಹಾಕಲಿದೆ ಎಂದೂ ಸಚಿವರು ಹೇಳಿಕೆ ನೀಡಿದ್ದಾರೆ. ಇದರಿಂದ ಪಶು ಸಾಕಾಣಿಕೆ ಮಾಡುವವರು ಉದ್ಯೋಗ ಮುಂದುವರಿಸಲು ಸಹಾಯ ಆಗಲಿದೆ. ಹಸುವೊಂದು 20 ಲೀಟರ್ಗಳಷ್ಟು ಹಾಲು ದಿನನಿತ್ಯ ನೀಡುವಂತೆ ಆಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಯೋಜನೆಯು ಮೊದಲಿಗೆ ಉತ್ತರ ಪ್ರದೇಶದ ಎಂಟು ಜಿಲ್ಲೆಗಳಲ್ಲಿ ಆರಂಭ ಆಗಲಿದೆ ಎಂದು ಹೇಳಲಾಗಿದೆ. ಇದಕ್ಕೂ ಮೊದಲು ಉತ್ತರ ಪ್ರದೇಶ ಸರ್ಕಾರ ಅನಾಥ ದನಗಳಿಗೆ ಗೋಶಾಲೆಗಳನ್ನು ನಿರ್ಮಿಸಲು ನಿಧಿ ಮೀಸಲಿಟ್ಟಿತ್ತು. ಇದೀಗ ಹಸುಗಳಿಗೆ ಆಂಬುಲೆನ್ಸ್ ಸೇವೆ ಒದಗಿಸುವ ಬಗ್ಗೆ ಸರ್ಕಾರ ತೀರ್ಮಾನಿಸಿದೆ.
ಇದನ್ನೂ ಓದಿ: ಎಮ್ಮೆ ಹಾಲು ಕರೆಯಲು ಬಿಡುತ್ತಿಲ್ಲ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ ರೈತ!
ಇದನ್ನೂ ಓದಿ: ಹಸುಗಳ ಸಗಣಿ, ಮೂತ್ರದಿಂದ ದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯ: ಶಿವರಾಜ್ ಸಿಂಗ್ ಚೌಹಾಣ್