NBF: ರಾಷ್ಟ್ರೀಯ ಸುದ್ದಿ ಪ್ರಸಾರಕರ ಒಕ್ಕೂಟಕ್ಕೆ ಸೇರ್ಪಡೆಗೊಂಡ ಟಿವಿ9 ಸಮೂಹ
ರಾಷ್ಟ್ರೀಯ ಸುದ್ದಿ ಪ್ರಸಾರಕರ ಒಕ್ಕೂಟ NBFಗೆ ಟಿವಿ9 ಸಮೂಹ ಸೇರ್ಪಡೆಗೊಂಡಿದೆ. ಈ ಕುರಿತು ಎನ್ಬಿಎಫ್ನ ಸ್ಥಾಪಕ ಅಧ್ಯಕ್ಷ ಅರ್ನಾಬ್ ಗೋಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.
18 ಆಗಸ್ಟ್, ನವದೆಹಲಿ: ಭಾರತದ ಅತ್ಯಂತ ದೊಡ್ಡಸುದ್ದಿ ಪ್ರಸಾರಕರ ಒಕ್ಕೂಟವಾದ ರಾಷ್ಟ್ರೀಯ ಸುದ್ದಿ ಪ್ರಸಾರಕರ ಒಕ್ಕೂಟಕ್ಕೆ(News Broadcasters Federation- NBF) ಟಿವಿ9 ನೆಟ್ವರ್ಕ್ ಸೇರ್ಪಡೆಗೊಂಡಿದೆ. NBF ಪ್ರಸ್ತುತ ದೇಶದ ಅತ್ಯಂತ ದೊಡ್ಡ ಮತ್ತು ಹೆಚ್ಚು ಸದಸ್ಯರಿರುವ ಸ್ವಾಯತ್ತ ಸಂಸ್ಥೆಯಾಗಿದೆ. ಪ್ರಜಾಪ್ರಭುತ್ವದ ಮಾದರಿಯಲ್ಲಿ ಸ್ಥಾಪಿತವಾಗಿರುವ NBF ದೇಶದ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಭಾಷೆಗಳ ಸುದ್ದಿ ಸಂಸ್ಥೆಗಳನ್ನೊಳಗೊಂಡ ಏಕೈಕ ಸಂಸ್ಥೆಯಾಗಿದೆ. ಪ್ರಸ್ತುತ ಬದಲಾಗುತ್ತಿರುವ ದೇಶದ ಮಾಧ್ಯಮ ವ್ಯವಸ್ಥೆಯಲ್ಲಿ ಪ್ರಾದೇಶಿಕ ಹಾಗೂ ರಾಷ್ಟ್ರೀಯ ಮಾಧ್ಯಮಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಸಂಸ್ಥೆ ಸ್ಥಾಪನೆಯಾಗಿದೆ.
ಟಿವಿ9 ಸಮೂಹ ಸಂಸ್ಥೆ NBFನೊಂದಿಗೆ ಕೈಜೋಡಿಸಿದ ಕುರಿತಂತೆ NBFನ ಅಧ್ಯಕ್ಷ ಅರ್ನಾಬ್ ಗೋಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ. ಟಿವಿ9ನ್ನು ಸಂಸ್ಥೆಗೆ ಸ್ವಾಗತಿಸಿದ ಅವರು, ‘‘ಸಂಸ್ಥೆಗೆ ಟಿವಿ9 ನೆಟ್ವರ್ಕ್ ಸೇರಿದ್ದು ಬಹಳ ಖುಷಿಯ ವಿಚಾರ. ಪ್ರಾದೇಶಿಕ ಹಾಗೂ ರಾಷ್ಟ್ರೀಯ ಮಟ್ಟದ ಸುದ್ದಿ ಸಂಸ್ಥೆಗಳನ್ನು ಸದಸ್ಯರಾಗಿ ಹೊಂದಿರುವ ದೇಶದ ಏಕೈಕ ಸಂಸ್ಥೆ NBF ಆಗಿದ್ದು, ಸುದ್ದಿ ಮಾಧ್ಯಮದ ಪರ ನಿಲ್ಲುವ ಸಂಸ್ಥೆಯಾಗಿದೆ. ಇದು ಪ್ರಜಾಪ್ರಭುತ್ವದ ಮಾದರಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದು, ಈ ಅಂಶ ಇತರ ಸಂಸ್ಥೆಗಳಿಗಿಂತ NBFನ್ನು ವಿಶಿಷ್ಟವಾಗಿಸಿದೆ. ಇಂದು NBF ಭಾರತದ ಅತ್ಯಂತ ದೊಡ್ಡ ಸುದ್ದಿ ಪ್ರಸಾರಕರ ಒಕ್ಕೂಟವಾಗಿ ಹೊರಹೊಮ್ಮಿದ್ದು, ಭಾರತದ ಉತ್ತಮ ಭವಿಷ್ಯಕ್ಕೆ ಕೊಡುಗೆ ನೀಡಲಿದೆ’’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಟಿವಿ9 ಸಮೂಹ ಸಂಸ್ಥೆಗಳು NBFಗೆ ಸೇರಿರುವುದರೊಂದಿಗೆ, ಸಂಸ್ಥೆಯ ಸಿಇಒ ಬರುಣ್ ದಾಸ್ NBFನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಕುರಿತು ಸಂತಸ ಹಂಚಿಕೊಂಡಿರುವ ಬರುಣ್ ದಾಸ್, ‘‘NBFನ ಭಾಗವಾಗಿರುವುದು ಖುಷಿಯ ವಿಷಯ. ಒಕ್ಕೂಟದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಅರ್ನಬ್ ಕಾರ್ಯವೈಖರಿಯನ್ನು ಮೆಚ್ಚುತ್ತೇನೆ. ಸುದ್ದಿ ಮಾಧ್ಯಮದಲ್ಲಿ ಪ್ರಾದೇಶಿಕ ಮಾಧ್ಯಮಗಳು ನೋಡುಗರ ದೃಷ್ಟಿಯಿಂದ ಹಾಗೂ ಆರ್ಥಿಕ ದೃಷ್ಟಿಯಿಂದ ಬಹುದೊಡ್ಡ ಪಾತ್ರವನ್ನು ನಿರ್ವಹಿಸುತ್ತವೆ. ಆದ್ದರಿಂದಲೇ ಒಕ್ಕೂಟದಲ್ಲಿ ಅವುಗಳಿಗೂ ಮನ್ನಣೆ ಇದ್ದಾಗ ಸಂಸ್ಥೆ ಎಲ್ಲಾ ಮಾಧ್ಯಮಗಳ ಹಿತಕಾಯಲು ಸಾಧ್ಯ. NBF ಅಂತಹ ಸಮಾನತೆಯನ್ನು ಒಕ್ಕೂಟದಲ್ಲಿ ಅಳವಡಿಸಿಕೊಂಡಿದ್ದು, ಇಲ್ಲಿ ಪ್ರಾದೇಶಿಕ ಭಾಷೆಯ ಸುದ್ದಿ ಮಾಧ್ಯಮಗಳಿಗೂ ಮಹತ್ವವಿದೆ’’ ಎಂದಿದ್ದಾರೆ.
ಇದನ್ನೂ ಓದಿ:
NBF: ರಾಷ್ಟ್ರೀಯ ಸುದ್ದಿ ಪ್ರಸಾರಕರಿಂದ ಬಾರ್ಕ್ ಪುನರಾರಂಭಿಸಿಲು ಕೇಂದ್ರಕ್ಕೆ ಮನವಿ
(TV9 group joins NBF and CEO Barun Das says delighted to be part of it)
Published On - 2:39 pm, Wed, 18 August 21