
ಪುಣೆ, ಅಕ್ಟೋಬರ್ 26: ಮಹಾರಾಷ್ಟ್ರದ 28 ವರ್ಷದ ವೈದ್ಯೆಯ ಆತ್ಮಹತ್ಯೆ ಪ್ರಕರಣದಲ್ಲಿ (Maharashtra doctor suicide case) ಹೊಸ ತಿರುವು ಸಿಕ್ಕಿದೆ. ವೈದ್ಯೆಯ ಆತ್ಮಹತ್ಯೆ ಹೇಳಿಕೆಯಲ್ಲಿ ಆರೋಪಿ ಸ್ಥಾನದಲ್ಲಿರುವ ಸಾಫ್ಟ್ವೇರ್ ಎಂಜಿನಿಯರ್ ಹಾಗೂ ಆತನ ಕುಟುಂಬದವರು ಈಗ ವೈದ್ಯೆಯ ವಿರುದ್ಧವೇ ಪ್ರತ್ಯಾರೋಪ ಮಾಡಿದ್ದಾರೆ. ವೈದ್ಯೆ ತನ್ನ ಮೇಲೆ ಮಾನಸಿಕ ಕಿರುಕುಳ ನೀಡುತ್ತಿದ್ದಳು. ಲೈಂಗಿಕ ಸಂಭೋಗಕ್ಕೆ ಕರೆಯುತ್ತಿದ್ದಳು, ಮದುವೆ ಆಗಲು ಒತ್ತಾಯಿಸುತ್ತಿದ್ದಳು ಎಂದು ಆರೋಪಿಯಾಗಿರುವ ಟೆಕ್ಕಿ ಪ್ರಶಾಂತ್ ಬಣಕರ್ ಹೇಳಿದ್ದಾರೆ.
ಕೈಯಲ್ಲಿ ಸೂಸೈಡ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ 28 ವರ್ಷದ ವೈದ್ಯೆಯು ಮಹಾರಾಷ್ಟ್ರದ ಫಲ್ಟಣ್ ಉಪಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಪಿಎಸ್ಐ ಹಾಗೂ ಮನೆ ಮಾಲೀಕರ ಮಗ ಇಬ್ಬರ ಹೆಸರನ್ನು ಆಕೆ ಸಾಯುವ ಮುನ್ನ ಸೂಸೈಡ್ ನೋಟ್ನಲ್ಲಿ ಬರೆದಿಟ್ಟಿರುತ್ತಾಳೆ. ಪಿಎಸ್ಐ ತನ್ನ ಮೇಲೆ ಬಾರಿ ಬಾರಿ ಅತ್ಯಾಚಾರ ಎಸಗಿದ್ದಾರೆ. ಮನೆ ಮಾಲೀಕರ ಮಗ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಇದರಿಂದಾಗಿ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿದ್ದಾಗಿ 28 ವರ್ಷದ ವೈದ್ಯೆ ತನ್ನ ಕೈಗಳ ಮೇಲೆ ಬರೆದುಕೊಂಡಿದ್ದಳು.
ಇದನ್ನೂ ಓದಿ: ಮಹಾರಾಷ್ಟ್ರ: ಅಂಗೈಯಲ್ಲಿತ್ತು ಸಾಕ್ಷಿ, ವೈದ್ಯೆ ಮೇಲೆ ಅತ್ಯಾಚಾರ, ಆತ್ಮಹತ್ಯೆಗೆ ಪ್ರಚೋದನೆ, ಪೊಲೀಸ್ ಅಧಿಕಾರಿಯ ಬಂಧನ
ಇದನ್ನು ಆಧಾರವಾಗಿಟ್ಟುಕೊಂಡು ಸತಾರಾ ಠಾಣೆಯ ಪೊಲೀಸರು ಪಿಎಸ್ಐ ಗೋಪಾಲ್ ಬದಾನೆ ಹಾಗೂ ಟೆಕ್ಕಿ ಪ್ರಶಾಂತ್ ಬಣಕರ್ ಅವರಿಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ವೈದ್ಯೆಯಿಂದಲೇ ತನಗೆ ಕಿರುಕುಳ ಆಗುತ್ತಿತ್ತು. ಆಕೆಯನ್ನು ಮದುವೆಯಾಗಬೇಕೆಂದು ಮತ್ತು ದೈಹಿಕ ಸಂಬಂಧ ಇಟ್ಟುಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಳು ಎಂದು ಆರೋಪಿ ಪ್ರಶಾಂತ್ ಬಣಕರ್ ಆರೋಪಿಸುತ್ತಿದ್ದಾರೆ. ಸತಾರಾ ಪೊಲೀಸರೂ ಕೂಡ ಈ ಸಂಗತಿಯನ್ನು ಖಚಿತಪಡಿಸಿದ್ದಾರೆ. ಅವರಿಬ್ಬರ ಮಧ್ಯೆ ನಡೆದ ದೂರವಾಣಿ ಸಂಭಾಷಣೆ ಹಾಗೂ ಚ್ಯಾಟ್ಗಳ ವಿವರವನ್ನು ಪೊಲೀಸರು ಪಡೆದು ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ: ವೈದ್ಯರ ಹಾಸ್ಟೆಲ್ ಟಾಯ್ಲೆಟ್ ಕಮೋಡ್ನೊಳಗೆ ನಾಗರಹಾವು!
ಬೀಡ್ ಜಿಲ್ಲೆಗೆ ಸೇರಿದ ವೈದ್ಯೆಯು ಪ್ರಶಾಂತ್ ಮನೆಯಲ್ಲಿ ಕಳೆದ ಒಂದು ವರ್ಷದಿಂದ ಬಾಡಿಗೆಗೆ ವಾಸವಿರುತ್ತಾಳೆ. ಕಳೆದ ತಿಂಗಳು ಪ್ರಶಾಂತ್ಗೆ ಡೆಂಗ್ಯೂ ಸೋಂಕು ತಗುಲಿ ಫಲ್ಟಾಣ್ಗೆ ಬಂದಿರುತ್ತಾನೆ. ಈ ವೇಳೆ ಆತನಿಗೆ ಈಕೆಯೇ ಚಿಕಿತ್ಸೆ ನೀಡಿರುತ್ತಾಳೆ. ಆಗ ಇಬ್ಬರ ಮಧ್ಯೆ ಮೊಬೈಲ್ ನಂಬರ್ಗಳ ವಿನಿಮಯ ಆಗುತ್ತದೆ. ಎರಡು ವಾರಗಳ ಹಿಂದೆ ಆಕೆ ಮದುವೆಗೆ ಪ್ರೊಪೋಸ್ ಮಾಡುತ್ತಾಳೆ. ಇದನ್ನು ತನ್ನ ಅಣ್ಣ ತಿರಸ್ಕರಿಸಿದ್ದಾನೆ ಎಂದು ಪ್ರಶಾಂತ್ ಬಣಕಾರ್ನ ತಂಗಿ ಹೇಳಿಕೆ ನೀಡಿದ್ದಾಳೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ