ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿಯ ಟ್ವಿಟರ್ ಇಂದು ಮುಂಜಾನೆ ಹೊತ್ತಿಗೆ ಅಕೌಂಟ್ ಹ್ಯಾಕ್ ಆಗಿತ್ತು. ಸುಮಾರು 4 ತಾಸುಗಳ ಬಳಿಕ ಭಾಗಶಃ ಸರಿಪಡಿಸಲಾಗಿದ್ದು, ಹ್ಯಾಕ್ ಮಾಡಿದ ಕಿಡಿಗೇಡಿಗಳು ಮಾಡಿದ್ದ ಟ್ವೀಟ್ಗಳನ್ನೆಲ್ಲ ಡಿಲೀಟ್ ಮಾಡಲಾಗಿದೆ. ಯುಪಿ ಮುಖ್ಯಮಂತ್ರಿ ಕಚೇರಿಯ ಟ್ವಿಟರ್ನ್ನು ಹ್ಯಾಕ್ ಮಾಡಿದವರು ಆ ಖಾತೆಯಿಂದ 100ಕ್ಕೂ ಅಧಿಕ ಟ್ವೀಟ್ ಮಾಡಿದ್ದರು. ಅಲ್ಲದೆ, ಟ್ವಿಟರ್ ಖಾತೆಯ ಪ್ರೊಫೈಲ್ನಲ್ಲಿದ್ದ ಯೋಗಿ ಆದಿತ್ಯನಾಥ್ ಫೋಟೋವನ್ನೂ ತೆಗೆದುಹಾಕಿದ್ದರು. BAYC/MAYC ಮೊಬೈಲ್ ಗೇಮ್ಗೆ ಸಂಬಂಧಿಸಿದ ಟ್ವೀಟ್ಗಳನ್ನು ಹಾಕಿದ್ದರು. ಪ್ರೊಫೈಲ್ ಫೋಟೋವೂ ಕೂಡ ಈ ಗೇಮ್ನಲ್ಲಿ ಬರುವ ವಾನರನದ್ದೇ ಇತ್ತು. ಅದರ ಪ್ರೊಫೈಲ್ ಫೋಟೋ ಬದಲಾಗಿದ್ದು ಮತ್ತು ಟ್ವೀಟ್ಗಳನ್ನು ನೋಡಿದ ನೆಟ್ಟಿಗರು ಅನೇಕರು ದೂರು ನೀಡಿದ್ದಾರೆ. ಈ ಟ್ವಿಟರ್ ಖಾತೆ ಹ್ಯಾಕ್ ಆಗಿದೆ ಎಂದು ರಿಪೋರ್ಟ್ ಮಾಡಿದ್ದಾರೆ. ಅಂತೂ ಅದನ್ನು ಭಾಗಶಃ ಸರಿಪಡಿಸಿರುವ ತಂತ್ರಜ್ಞರ ತಂಡ, ಮತ್ತೆ ಸಿಎಂ ಯೋಗಿ ಫೋಟೋವನ್ನೇ ಹಾಕಿಟ್ಟಿದೆ.
ಸರ್ಕಾರಿ ಕಚೇರಿಗಳ ಟ್ವಿಟರ್ ಖಾತೆಗಳು ಹ್ಯಾಕ್ ಆಗುತ್ತಿರುವುದು ಇದೇ ಮೊದಲೇನೂ ಅಲ್ಲ. 2021ರ ಡಿಸೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಟ್ವಿಟರ್ ಅಕೌಂಟ್ ಹ್ಯಾಕ್ ಆಗಿತ್ತು. ಹೀಗೆ ಹ್ಯಾಕ್ ಮಾಡಿದ್ದ ಕಿಡಿಗೇಡಿಗಳು, ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನು ಬದ್ಧವಾಗಿದೆ. ಅದಕ್ಕೆ ಸಂಬಂಧಪಟ್ಟು ಕಾನೂನು ರಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಟ್ವೀಟ್ ಮಾಡಿದ್ದರು. ಬಳಿಕ ಪ್ರಧಾನಿ ಮಂತ್ರಿ ಕಚೇರಿಯ ಟ್ವಿಟರ್ ಅಕೌಂಟ್ನಿಂದ ಟ್ವೀಟ್ ಮಾಡಿ, ಪಿಎಂ ಮೋದಿ ವೈಯಕ್ತಿಕ ಟ್ವಿಟರ್ ಖಾತೆ ಹ್ಯಾಕ್ ಆಗಿದ್ದು, ಅದನ್ನು ಮರುಸ್ಥಾಪಿಸಲು ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆ. ಬಿಟ್ಕಾಯಿನ್ ಕುರಿತು ಮಾಡಲಾದ ಯಾವುದೇ ಟ್ವೀಟ್ನ್ನೂ ನಂಬಬೇಡಿ ಎಂದು ತಿಳಿಸಲಾಗಿತ್ತು.
ಅದಾಗಿ ಸರಿಯಾಗಿ ಒಂದು ತಿಂಗಳ ಬಳಿಕ, ಅಂದರೆ 2022ರ ಜನವರಿ 12ರಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು. ಟ್ವಿಟರ್ ಅಕೌಂಟ್ ಹ್ಯಾಕ್ ಮಾಡಿದ್ದ ಹ್ಯಾಕರ್ಸ್ಗಳು, ಖಾತೆಯ ಹೆಸರನ್ನು ಎಲೋನ್ ಮಸ್ಕ್ (Elon Musk) ಎಂದು ಬದಲಿಸಿದ್ದರು. ಹಾಗೇ, ಗ್ರೇಟ್ ಜಾಬ್ (ಅದ್ಭುತ ಕೆಲಸ) ಎಂದೂ ಟ್ವೀಟ್ ಮಾಡಿದ್ದರು. ಇನ್ನು ಒಂದಿಷ್ಟು ಲಿಂಕ್ಗಳನ್ನೆಲ್ಲ ಪೋಸ್ಟ್ ಮಾಡಿದ್ದರು. ಆದರೆ ಕೆಲವೇ ಹೊತ್ತಿನಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತನ್ನ ಟ್ವಿಟರ್ ಖಾತೆಯ ಮೇಲೆ ನಿಯಂತ್ರಣ ಹೊಂದಿತ್ತು. ಹ್ಯಾಕರ್ಸ್ಗಳ ಕೈಯಿಂದ ವಾಪಸ್ ಅಕೌಂಟ್ನ್ನು ಪಡೆದು, ಪ್ರೊಫೈಲ್ನ್ನು ಬದಲಿಸಿಕೊಂಡು, ಟ್ವೀಟ್ಗಳನ್ನೂ ಡಿಲೀಟ್ ಮಾಡಿತ್ತು.
ಇದನ್ನೂ ಓದಿ: ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಉತ್ಸವಕ್ಕೆ ಅಧಿಕೃತ ಚಾಲನೆ; ರಥದಲ್ಲಿ ದೇವರ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಅಲಂಕಾರ
Published On - 8:03 am, Sat, 9 April 22