ಕಳೆದು ಹೋದ ಬ್ಯಾಗ್ ವಾಪಸ್ ಪಡೆಯಲು ಇಂಡಿಗೋ ಏರ್ಲೈನ್ಸ್ನ ವೆಬ್ಸೈಟ್ ಹ್ಯಾಕ್ ಮಾಡಿದೆ ಎಂದ ಬೆಂಗಳೂರು ಮೂಲದ ಪ್ರಯಾಣಿಕ !
ನಮ್ಮ ವೆಬ್ಸೈಟ್ ಹ್ಯಾಕ್ ಆಗಿಲ್ಲ. ಸೈಬರ್ ಭದ್ರತೆ ವಿಷಯದಲ್ಲಿ ನಾವು ಯಾವುದೇ ರಾಜಿಯನ್ನೂ ಮಾಡಿಕೊಂಡಿಲ್ಲ. ನಮ್ಮಲ್ಲಿ ಐಟಿ ಪ್ರಕ್ರಿಯೆಗಳು ತುಂಬ ದೃಢವಾಗಿದ್ದು, ಹ್ಯಾಕ್ ಮಾಡುವುದು ಸುಲಭವಲ್ಲ ಎಂದು ಇಂಡಿಗೋ ತಿಳಿಸಿದೆ.
ಇಂಡಿಗೋ ವಿಮಾನದಲ್ಲಿ (IndiGo Airline) ಪ್ರಯಾಣ ಮಾಡಿದ್ದ ಬೆಂಗಳೂರು ಮೂಲದ ಪ್ರಯಾಣಿಕನೊಬ್ಬ ಇಂಡಿಗೋ ಸಂಸ್ಥೆಯ ವೆಬ್ಸೈಟ್ನ್ನೇ ಹ್ಯಾಕ್ ಮಾಡಿದ ಘಟನೆ ನಡೆದಿದೆ. ಪ್ರಯಾಣಿಕನ ಹೆಸರು ನಂದನ್ ಕುಮಾರ್ ಎಂದಾಗಿದ್ದು, ತಾನು ಹ್ಯಾಕ್ ಮಾಡಿದ್ದು ಯಾಕೆ ಮತ್ತು ಹೇಗೆ ಎಂಬುದನ್ನು ಸರಣಿ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇಂಡಿಗೋ ವೆಬ್ಸೈಟ್ನಲ್ಲಿ ಎಷ್ಟು ಸುಲಭವಾಗಿ ತನಗೆ ಬೇಕಾದ ಸೂಕ್ಷ್ಮ ಮಾಹಿತಿಗಳನ್ನು ಪಡೆದೆ ಎಂದು ಹೇಳಿರುವ ನಂದನ್ ಕುಮಾರ್, ಏರ್ಲೈನ್ಸ್ ಅದನ್ನು ಸರಿಪಡಿಸಿಕೊಳ್ಳಬೇಕು. ಇನ್ನಷ್ಟು ಭದ್ರಪಡಿಸಬೇಕು ಎಂಬ ಸಲಹೆಯನ್ನೂ ನೀಡಿದ್ದಾರೆ. ಅಷ್ಟಕ್ಕೂ ನಂದನ್ ಕುಮಾರ್ ವೆಬ್ಸೈಟ್ ಹ್ಯಾಕ್ ಮಾಡಲು ಕಾರಣ ಬ್ಯಾಗ್ ಕಳೆದುಕೊಂಡಿದ್ದು. ನಂದನ್ ಬ್ಯಾಗ್ ಅವರ ಸಹಪ್ರಯಾಣಿಕರೊಟ್ಟಿಗೆ ಹೋಗಿತ್ತು. ಇದು ಕಣ್ತಪ್ಪಿನಿಂದ ಆದ ಎಡವಟ್ಟಾಗಿತ್ತು. ಆದರೆ ಬ್ಯಾಗ್ನ್ನು ಪಡೆಯಲು ಇಂಡಿಗೋ ಕೊಟ್ಟ ಸಹಕಾರ ಸೂಕ್ತವಾಗಿರಲಿಲ್ಲ. ನನ್ನ ಬ್ಯಾಗ್ನಲ್ಲಿ ಅನೇಕ ಮಹತ್ವದ ವಸ್ತುಗಳು ಇದ್ದುದರಿಂದ ಅದನ್ನು ಪಡೆಯಲೇಬೇಕಾಗಿತ್ತು. ಹೀಗಾಗಿ ಇಂಡಿಗೋ ವೆಬ್ಸೈಟ್ ಹ್ಯಾಕ್ ಮಾಡುವ ಮೂಲಕ ಸಹ ಪ್ರಯಾಣಿಕನ ಫೋನ್ ನಂಬರ್ ಪಡೆದೆ ಎಂದು ನಂದನ್ ಹೇಳಿದ್ದಾರೆ.
ಘಟನೆ ಬಗ್ಗೆ ಮಾಹಿತಿ ನೀಡಿದ ನಂದನ್ ಕುಮಾರ್, ‘ನಾನು ಪಾಟ್ನಾದಿಂದ ಬೆಂಗಳೂರಿಗೆ ಇಂಡಿಗೋ 6ಇ-185 ಎಂಬ ಫ್ಲೈಟ್ನಲ್ಲಿ ಮಾರ್ಚ್ 27ರಂದು ಪ್ರಯಾಣ ಮಾಡಿದೆ. ಆದರೆ ಬೆಂಗಳೂರಿನಲ್ಲಿ ಇಳಿದಾಗ ನನ್ನ ಬ್ಯಾಗ್ ಕಳೆದು ಹೋಗಿತ್ತು. ಅದನ್ನು ಕಣ್ತಪ್ಪಿನಿಂದ ನನ್ನೊಂದಿಗೇ ಪ್ರಯಾಣ ಮಾಡಿದ್ದವ ತೆಗೆದುಕೊಂಡು ಹೋಗಿದ್ದು ನನಗೆ ಗೊತ್ತಾಯಿತು. ನನ್ನ ಮತ್ತು ಅವನ ಬ್ಯಾಗ್ ಒಂದೇ ತರ ಇದ್ದುದರಿಂದ ಈ ಪ್ರಮಾದ ಆಗಿತ್ತು. ನನಗೆ ನನ್ನ ಬ್ಯಾಗ್ ಬೇಕಾಗಿತ್ತು. ಹೀಗಾಗಿ ಇಂಡಿಗೋ ಕಸ್ಟಮರ್ ಕೇರ್ಗೆ ಕರೆ ಮಾಡಲು ಪ್ರಯತ್ನ ಪಟ್ಟೆ. ತುಂಬ ಸಲ ಫೋನ್ ಮಾಡಿದ ಬಳಿಕ ಕನೆಕ್ಟ್ ಆಯಿತು. ನಂತರ ಏರ್ಲೈನ್ ಸಂಸ್ಥೆಯ ಇಂಟರಾಕ್ಟಿವ್ ವೈಸ್ ರೆಸ್ಪಾನ್ಸ್ (IVR) ಮೂಲಕ ನ್ಯಾವಿಗೇಟ್ ಮಾಡಲೂ ಸಾಧ್ಯವಾಯಿತು. ಆದರೆ ನನ್ನೊಂದಿಗೆ ಪ್ರಯಾಣ ಮಾಡಿದ್ದವನನ್ನು ಕನೆಕ್ಟ್ ಮಾಡಲು ಇಂಡಿಗೋ ಕಸ್ಟಮರ್ ಕೇರ್ ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಆಗ ನಾನು, ಐವಿಆರ್ ಮೂಲಕ ಸಂಪರ್ಕ ಸಾಧ್ಯವಾಗುತ್ತಿಲ್ಲ. ಹೀಗಾಗಿ ನನಗೆ ಆತನ ಫೋನ್ ನಂಬರ್ ಕೊಡಿ, ನಾನೇ ಸಂಪರ್ಕ ಮಾಡುತ್ತೇನೆ ಎಂದು ಹೇಳಿದೆ. ಆದರೆ ಇಂಡಿಗೋ ಅದಕ್ಕೆ ಸಿದ್ಧ ಇರಲಿಲ್ಲ. ಇನ್ನೊಬ್ಬರ ಫೋನ್ ನಂಬರ್ ಕೊಡಲು ಸಾಧ್ಯವಿಲ್ಲ, ಅದು ಸುರಕ್ಷತಾ ನಿಯಮಗಳಿಗೆ ವಿರುದ್ಧ ಎಂದು ಹೇಳಿದರು’.
ನಿಮ್ಮ ಬ್ಯಾಗ್ ತೆಗೆದುಕೊಂಡು ಹೋದವರ ಸಂಪರ್ಕಕ್ಕೆ ನಿರಂತರವಾಗಿ ಪ್ರಯತ್ನ ಮಾಡುತ್ತಿರುತ್ತೇವೆ. ಅವರ ಕಾಲ್ ಕನೆಕ್ಟ್ ಆದ ತಕ್ಷಣ ನಿಮಗೆ ಕಾಲ್ ಮಾಡುತ್ತೇವೆ ಎಂದು ಏರ್ಲೈನ್ಸ್ನವರು ಹೇಳಿದ್ದರು. ಆದರೆ ಎಷ್ಟು ದಿನ ಕಳೆದರೂ ನನಗೆ ಕರೆ ಬರಲಿಲ್ಲ. ಆಗ ನಾನು ಇಂಡಿಗೋ ವೆಬ್ಸೈಟ್ಗೆ ಹೋಗಿ, ಅಲ್ಲಿ ನನ್ನ ಸಹ ಪ್ರಯಾಣಿಕನ ಪಿಎನ್ಆರ್ ಹಾಕಿದೆ. ಅಂದರೆ ಅವರು ಬಿಟ್ಟು ಹೋಗಿದ್ದ ಬ್ಯಾಗ್ನ ಟ್ಯಾಗ್ ಮೇಲೆ ಹೆಸರು ಇದ್ದಿದ್ದನ್ನು ನೋಡಿಕೊಂಡಿದ್ದೆ. ಆ ಪಿಎನ್ಆರ್ ಹಾಕಿದ ನಂತರವೂ ಹಲವು ರೀತಿಯ ಪ್ರಯತ್ನ ಮಾಡಿದೆ. ಆದರೆ ಪ್ರಯಾಣಿಕನ ಫೋನ್ ನಂಬರ್ ಸಿಗಲಿಲ್ಲ. ಅದಾದ ನಂತರ ನಾನು ಎಫ್ 12 ಬಟನ್ ಪ್ರೆಸ್ ಮಾಡುವ ಮೂಲಕ ವೆಬ್ಸೈಟ್ನ developer console ಓಪನ್ ಮಾಡಿ ಪ್ರಯಾಣಿಕನ ಫೋನ್ನಂಬರ್, ವಿವರಗಳನ್ನೆಲ್ಲ ತೆಗೆದುಕೊಂಡೆ ಎಂದು ನಂದನ್ ಕುಮಾರ್ ತಿಳಿಸಿದ್ದಾರೆ.
ಇಂಡಿಗೋ ಹೇಳಿದ್ದೇನು?
ನಮ್ಮ ವೆಬ್ಸೈಟ್ ಹ್ಯಾಕ್ ಆಗಿಲ್ಲ. ಸೈಬರ್ ಭದ್ರತೆ ವಿಷಯದಲ್ಲಿ ನಾವು ಯಾವುದೇ ರಾಜಿಯನ್ನೂ ಮಾಡಿಕೊಂಡಿಲ್ಲ. ನಮ್ಮಲ್ಲಿ ಐಟಿ ಪ್ರಕ್ರಿಯೆಗಳು ತುಂಬ ದೃಢವಾಗಿದ್ದು, ಹ್ಯಾಕ್ ಮಾಡುವುದು ಸುಲಭವಲ್ಲ. ಪಿಎನ್ಆರ್, ಕೊನೇ ಹೆಸರು, ಸಂಪರ್ಕ ಸಂಖ್ಯೆ ಅಥವಾ ಇಮೇಲ್ ವಿಳಾಸ ಬಳಸಿಕೊಂಡು ಯಾವುದೇ ಪ್ರಯಾಣಿಕರೂ ವೆಬ್ಸೈಟ್ನಿಂದ ಅವರ ಬುಕ್ಕಿಂಗ್ ವಿವರಗಳನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಜಾಗತಿಕವಾಗಿ ಎಲ್ಲ ವಿಮಾನಯಾನ ಸಂಸ್ಥೆಗಳಲ್ಲೂ ಈ ವ್ಯವಸ್ಥೆ ಇದ್ದೇ ಇರುತ್ತದೆ ಎಂದು ಹೇಳಿಕೊಂಡಿದೆ.
ಇದನ್ನೂ ಓದಿ: ಸಾರಿ ಕೇಳುವುದರಿಂದ ನಮ್ಮ ವ್ಯಕ್ತಿತ್ವ ಕಡಿಮೆಯಾಗುತ್ತಾ..! ಹಾಗಾದ್ರೆ ಈ ವಿಡಿಯೋ ನೋಡಿ
Published On - 7:33 am, Thu, 31 March 22