India Map Twitter: ವೆಬ್ಸೈಟ್ನಿಂದ ಭಾರತದ ತಪ್ಪು ಭೂಪಟ ತೆಗೆದು ಪ್ರಮಾದ ತಿದ್ದಿಕೊಂಡ ಟ್ವಿಟರ್
ದೇಶದ ಭೂಪಟವನ್ನು ತಪ್ಪಾಗಿ ಬಿಂಬಿಸುವುದು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಭಾರೀ ಮೊತ್ತದ ಜುಲ್ಮಾನೆ ಮತ್ತು 7 ವರ್ಷಗಳ ಜೈಲು ಶಿಕ್ಷೆಗೂ ಗುರಿಯಾಗುವ ಸಂಭವವಿದೆ ಎಂದು ಹೇಳಲಾಗಿತ್ತು.
ತನ್ನ ವೆಬ್ಸೈಟ್ನಲ್ಲಿ ಭಾರತದ ಭೂಪಟವನ್ನು ತಪ್ಪಾಗಿ ಪ್ರದರ್ಶಿಸಿದ್ದರ ಕುರಿತು ಭಾರೀ ಟೀಕೆ ವ್ಯಕ್ತವಾದ ಬೆನ್ನಲ್ಲೇ ಟ್ವಿಟರ್ ಪ್ರಮಾದವನ್ನು ತಿದ್ದಿಕೊಂಡಿದೆ. ಅಲ್ಲದೇ ಟ್ವಿಟರ್ನ ಈ ಪ್ರಮಾದದ ಕುರಿತು ಭಾರತದ ಒಕ್ಕೂಟ ಸರ್ಕಾರವೂ ಕಟು ಎಚ್ಚರಿಕೆಯನ್ನು ನೀಡಿತ್ತು. ದೇಶದ ಭೂಪಟವನ್ನು ತಪ್ಪಾಗಿ ಬಿಂಬಿಸುವುದು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಭಾರೀ ಮೊತ್ತದ ಜುಲ್ಮಾನೆ ಮತ್ತು 7 ವರ್ಷಗಳ ಜೈಲು ಶಿಕ್ಷೆಗೂ ಗುರಿಯಾಗುವ ಸಂಭವವಿದೆ ಎಂದು ಹೇಳಲಾಗಿತ್ತು. ಈ ಕುರಿತು ಭಾರತದ ಒಕ್ಕೂಟ ಸರ್ಕಾರ ಎಚ್ಚರಿಕೆಯನ್ನೂ ಸಹ ಟ್ವಿಟರ್ ಸಂಸ್ಥೆಗೆ ವಿಧಿಸಿದ್ದು, ಆನಂತರ ಟ್ವಿಟರ್ ತಪ್ಪು ಭೂಪಟವನ್ನು ಹಿಂಪಡೆದಿದೆ ಎಂದು ಹೇಳಲಾಗಿದೆ. ಭಾರತದಲ್ಲಿ ಜಾರಿಯಲ್ಲಿರುವ ಐಟಿ ಕಾನೂನಿನ 69ಎ ಪ್ರಕಾರ ಟ್ವಿಟರ್ನ್ನು ಭಾರತದಲ್ಲಿ ಬ್ಲಾಕ್ ಮಾಡುವ ಸಾಧ್ಯತೆಯೂ ತಪ್ಪು ಭೂಪಟ ಪ್ರದರ್ಶನದಿಂದ ಎದುರಾಗಿತ್ತು. ಸದ್ಯ ಟ್ವಿಟರ್ ವಿರುದ್ಧದ ಅಭಿಪ್ರಾಯ ಭಾರತದಲ್ಲಿ ಬಲಗೊಳ್ಳುತ್ತಿದ್ದು ಟ್ವಿಟರ್ ವಿರುದ್ಧ ಸ್ವತಃ ಟ್ವಿಟರರ್ನಲ್ಲೇ #BanTwitter ಎಂಬ ಹ್ಯಾಷ್ಟ್ಯಾಗ್ ಟ್ರೆಂಡಿಂಗ್ನಲ್ಲಿದೆ.
ಟ್ವಿಟರ್‌ನಲ್ಲಿ ತಪ್ಪಾಗಿ ಪ್ರದರ್ಶನವಾಗಿರುವ ಭಾರತದ ಭೂಪಟ ಕುರಿತ ವಿಚಾರದ ಬಗ್ಗೆ ಭಾರತೀಯ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ತನಿಖೆ ನಡೆಸುತ್ತಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿರುವ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿತ್ತು. ಕೇಂದ್ರ ಸರ್ಕಾರ ಹಾಗೂ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ನಡುವೆ ಕೆಲದಿನಗಳಿಂದ ನಡೆಯುತ್ತಿರುವ ತಿಕ್ಕಾಟಗಳ ಹಿನ್ನೆಲೆಯಲ್ಲಿ ಈ ಪ್ರಕರಣ ಮಹತ್ವ ಪಡೆದುಕೊಂಡಿತ್ತು.
ಟ್ವಿಟರ್‌ನಲ್ಲಿ ಭಾರತದ ಭೂಪಟ ತಪ್ಪಾಗಿ ಪ್ರದರ್ಶನಗೊಂಡಿತ್ತು. ಲಡಾಖ್ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳು ಪ್ರತ್ಯೇಕ ದೇಶಗಳೆಂದು ಕಂಡುಬಂದಿತ್ತು. ಟ್ವಿಟರ್ ಕಂಪೆನಿ ವೆಬ್‌ಸೈಟ್‌ನ ಉದ್ಯೋಗ ಸೆಕ್ಷನ್ (Career) ಅಡಿಯಲ್ಲಿ ಈ ಪ್ರಮಾದ ಕಂಡುಬಂದಿತ್ತು.
ಟ್ವಿಟರ್ ಇದು ಎರಡನೇ ಬಾರಿಗೆ ಭಾರತದ ಮ್ಯಾಪ್‌ನ್ನು ತಪ್ಪಾಗಿ ತೋರಿಸಿದೆ. ಈ ಮೊದಲು, ಕಳೆದ ಅಕ್ಟೋಬರ್ ತಿಂಗಳಲ್ಲಿ ಲೆಹ್ ಪ್ರದೇಶವನ್ನು ಚೀನಾದ ಭಾಗವಾಗಿ ತೋರಿಸಿದ್ದಕ್ಕೆ ಸರ್ಕಾರ ಟ್ವಿಟರ್‌ಗೆ ನೋಟಿಸ್ ನೀಡಿತ್ತು. ಟ್ವಿಟರ್ ಸಿಇಒಗೆ ಪತ್ರ ಬರೆದಿದ್ದ ಕೇಂದ್ರ ಭಾರತದ ಭೂಪಟ ತಪ್ಪಾಗಿ ತೋರಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು.
ಬಿಜೆಪಿ ಮುಖಂಡ ಪಿ ಮುರಳೀಧರ್ ರಾವ್ ಟ್ವಟರ್ ಭಾರತದ ತಪ್ಪು ಭೂಪಟ ಪ್ರದರ್ಶಿಸಿದ ವಿರುದ್ಧ ಅತ್ಯಂತ ತೀವ್ರಥರದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Twitter is confirming by its actions the apprehensions expressed widely in last few months about its bias towards Indian interests & sensitivities.
Twitter’s mischeavious representation of Indian Map is strongly condemned. @Twitter has to follow law of land..!
— P Muralidhar Rao (@PMuralidharRao) June 28, 2021
ಕಳೆದ ಡಿಸೆಂಬರ್ ತಿಂಗಳಲ್ಲಿ ವಿಕಿಪೀಡಿಯಾ ಕೂಡ ಇಂತಹ ಪ್ರಮಾದ ಮಾಡಿತ್ತು. ದೇಶದ ಗಡಿಭಾಗಗಳನ್ನು ತಪ್ಪಾಗಿ ತೋರಿಸಿತ್ತು. ಅದು ಒಂದು ಪ್ರತ್ಯೇಕ ಪೇಜ್‌ನಲ್ಲಿ ಆದ ಬದಲಾವಣೆ ಆದಕಾರಣ ಅದನ್ನು ಸ್ಕ್ರಾಪ್ ಮಾಡುವಂತೆ ಸೂಚನೆ ನೀಡಲಾಗಿತ್ತು.
ಇದನ್ನೂ ಓದಿ:
Twitter India: ಟ್ವಿಟರ್ ಕುಂದುಕೊರತೆ ಪರಿಹಾರ ಅಧಿಕಾರಿಯಾಗಿ ಯುಎಸ್ನ ಜೆರೆಮಿ ಕೆಸ್ಸೆಲ್ ನೇಮಕ
ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ವೈಯಕ್ತಿಕ ಟ್ವಿಟರ್ ಖಾತೆಗೆ ನಿರ್ಬಂಧ; ಒಂದು ಗಂಟೆ ಲಾಕ್ ಮಾಡಿ ಅನ್ಲಾಕ್
(Twitter drops incorrect maps after warns to take action)
Published On - 10:14 pm, Mon, 28 June 21