ಟೂಲ್​ಕಿಟ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಿಗೆ ನೊಟೀಸ್ ಜಾರಿ, ಬಿಜೆಪಿಯ ಸಂಬಿತ್​ ಪಾತ್ರಾ ವಿಚಾರಣೆ ಸಾಧ್ಯತೆ

|

Updated on: May 25, 2021 | 1:33 PM

‘ಟೂಲ್​ಕಿಟ್ ಬಗ್ಗೆ ಟ್ವಿಟರ್​ ಬಳಿ ಏನೆಲ್ಲಾ ಮಾಹಿತಿ ಇದೆ ಎಂಬ ಬಗ್ಗೆ ತಿಳಿದುಕೊಳ್ಳಲು ನೊಟೀಸ್ ಜಾರಿ ಮಾಡಿದೆವು. ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳಿಗೂ ತನಿಖೆಗೆ ಸಹಕರಿಸುವಂತೆ ಸೂಚಿಸಿದ್ದೇವೆ’ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಟೂಲ್​ಕಿಟ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಿಗೆ ನೊಟೀಸ್ ಜಾರಿ, ಬಿಜೆಪಿಯ ಸಂಬಿತ್​ ಪಾತ್ರಾ ವಿಚಾರಣೆ ಸಾಧ್ಯತೆ
ದೆಹಲಿಯ ಟ್ವಿಟರ್ ಇಂಡಿಯಾ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳು
Follow us on

ದೆಹಲಿ: ಕಾಂಗ್ರೆಸ್​ನ ಸಾಮಾಜಿಕ ಮಾಧ್ಯಮ ಘಟಕದ ಮುಖ್ಯಸ್ಥ ರೊಹನ್ ಗುಪ್ತಾ ಮತ್ತು ವಕ್ತಾರ ಎಂ.ವಿ.ರಾಜೀವ್​ಗೌಡ ಅವರಿಗೆ ದೆಹಲಿ ಪೊಲೀಸ್ ಇಲಾಖೆಯ ವಿಶೇಷ ಘಟಕವು ಮಂಗಳವಾರ ನೊಟೀಸ್ ಜಾರಿ ಮಾಡಿದೆ. ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರನ್ನೂ ಮುಂದಿನ ದಿನಗಳಲ್ಲಿ ವಿಚಾರಣೆಗೆ ಕರೆಸುವ ಸಾಧ್ಯತೆಯಿದೆ.

ದೆಹಲಿ ಪೊಲೀಸರು ಟ್ವಿಟರ್ ಇಂಡಿಯಾದ ದೆಹಲಿ ಮತ್ತು ಗುರುಗ್ರಾಮ ಕಚೇರಿಗಳಿಗೆ ಭೇಟಿ ನೀಡಿ ನೊಟೀಸ್ ಜಾರಿ ಮಾಡಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಆಡಳಿತ ಪಕ್ಷದ ಕೆಲ ನಾಯಕರ ಟ್ವೀಟ್​ಗಳನ್ನು ಟ್ವಿಟರ್ ‘ತಿರುಚಿದ ಮಾಹಿತಿ’ ಎಂದು ಲೇಬಲ್ ಹಚ್ಚಿದ ನಂತರ ಈ ಬೆಳವಣಿಗೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್​ ಈ ಮೂಲಕ ಸಂಚು ರೂಪಿಸಿದೆ ಎಂಬ ಆರೋಪಗಳು ಕೇಳಿಬಂದಿತ್ತು. ಟೂಲ್​ಕಿಟ್ ಪ್ರಕರಣದಲ್ಲಿ ಟ್ವಿಟರ್​ ‘ತಿರುಚಿದ ಮಾಹಿತಿ’ ಎಂದು ಲೇಬಲ್ ಹಚ್ಚಿದ್ದಕ್ಕೆ ಕೇಂದ್ರ ಸರ್ಕಾರವು ಆಕ್ಷೇಪ ವ್ಯಕ್ತಪಡಿಸಿತ್ತು.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರ ವಿರುದ್ಧವೂ ಈವರೆಗೆ ಎಫ್​ಐಆರ್ ದಾಖಲಿಸಿಲ್ಲ. ಎಫ್​ಐಆರ್ ದಾಖಲಿಸುವ ಮೊದಲು ಸಂಬಂಧಿಸಿದ ಎಲ್ಲ ಜನರೂ ಮತ್ತು ಸಂಸ್ಥೆಗಳ ಪ್ರತಿನಿಧಿಗಳ ವಿಚಾರಣೆ ನಡೆಸುತ್ತಿದ್ದೇವೆ. ಟೂಲ್​ಕಿಟ್​ ಬಗ್ಗೆ ಒಬ್ಬರು ಮಾಡಿದ್ದ ಟ್ವೀಟ್​ಗೆ ಟ್ವಿಟರ್​ ‘ತಿರುಚಿದ ಟ್ವೀಟ್’ ಎಂಬ ಲೇಬಲ್ ಹಾಕಿತ್ತು. ಈ ಹಿನ್ನೆಲೆಯಲ್ಲಿ ಟೂಲ್​ಕಿಟ್ ಬಗ್ಗೆ ಟ್ವಿಟರ್​ ಬಳಿ ಏನೆಲ್ಲಾ ಮಾಹಿತಿ ಇದೆ ಎಂಬ ಬಗ್ಗೆ ತಿಳಿದುಕೊಳ್ಳಲು ನೊಟೀಸ್ ಜಾರಿ ಮಾಡಿದೆವು. ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳು, ದೂರುದಾರರಿಗೂ ತನಿಖೆಗೆ ಸಹಕರಿಸುವಂತೆ ಸೂಚಿಸಿದ್ದೇವೆ. ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರಿಗೂ ಮುಂದಿನ ದಿನಗಳಲ್ಲಿ ನೊಟೀಸ್ ನೀಡಲಿದ್ದೇವೆ’ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

‘ಇದು ಸಾಮಾನ್ಯ ಪ್ರಕ್ರಿಯೆ’ ಎಂದು ನಿನ್ನೆಯಷ್ಟೇ (ಮೇ 24) ದೆಹಲಿ ಪೊಲೀಸ್​ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಚಿನ್ಮಯ್ ಬಿಸ್ವಾಲ್ ಹೇಳಿದ್ದರು. ಟ್ವಿಟರ್​ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರ ಪ್ರತಿಕ್ರಿಯೆಯಲ್ಲಿ ಸಂದಿಗ್ಧ ಇದ್ದ ಕಾರಣ ನಾವು ನೊಟೀಸ್ ನೀಡಲು ಯಾರು ಸರಿಯಾದ ವ್ಯಕ್ತಿ ಎಂದು ಹುಡುಕಬೇಕಾಯಿತು’ ಎಂದು ಅವರು ಅಭಿಪ್ರಾಯಪಟ್ಟಿದ್ದರು. ಸಂಬಿತ್ ಪಾತ್ರಾ ಮತ್ತು ಇತರರ ವಿರುದ್ಧ ದೂರು ನೀಡಿದ್ದ ಕಾಂಗ್ರೆಸ್ ಶಿಸ್ತು ಕ್ರಮ ತೆಗೆದುಕೊಳ್ಳಲು ಟ್ವಿಟರ್ ಮತ್ತು ಪೊಲೀಸರನ್ನು ಆಗ್ರಹಿಸಿತ್ತು.

(Twitter Indian and Congress leaders served notice in toolkit case BJP leader Sambit Patra may summoned by Delhi Police)

ಇದನ್ನೂ ಓದಿ: ಟೂಲ್​ಕಿಟ್ ಕೇಸ್​​​; ಕಾಂಗ್ರೆಸ್​​ನಿಂದ ದೂರು, ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ, ವಕ್ತಾರನ ವಿರುದ್ಧ ಎಫ್​ಐಆರ್​ ದಾಖಲು

ಇದನ್ನೂ ಓದಿ: ಟೂಲ್​ಕಿಟ್​ ಟ್ವೀಟ್​ಗಳಿಂದ ‘ಮ್ಯಾನಿಪುಲೇಟೆಡ್ ಮಿಡಿಯಾ’ ತೆಗೆದುಹಾಕುವಂತೆ ಟ್ವಿಟ್ಟರ್​ಗೆ ಸೂಚಿಸಿದ ಕೇಂದ್ರ ಸರ್ಕಾರ

Published On - 1:31 pm, Tue, 25 May 21