Chithirai Festival: ಮಧುರೈನ ಚಿತ್ತಿರೈ ಉತ್ಸವದಲ್ಲಿ ಕಾಲ್ತುಳಿತ; ಇಬ್ಬರು ಸಾವು, 7 ಜನರಿಗೆ ಗಾಯ
ಮಧುರೈ ಚಿತ್ತಿರೈ ಉತ್ಸವ 2022ರ ಅಂಗವಾಗಿ ವೈಗೈ ನದಿಗೆ ಕಲ್ಲಜಗರ್ ದೇವರ ಪ್ರವೇಶದ ಸಮಯದಲ್ಲಿ ಇಬ್ಬರು ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 7 ಜನರು ಗಾಯಗೊಂಡಿದ್ದಾರೆ.
ಮಧುರೈ: ತಮಿಳುನಾಡಿನ ಮಧುರೈನಲ್ಲಿ ನಡೆಯುತ್ತಿರುವ ಚಿತ್ತಿರೈ ಉತ್ಸವದ (Chithirai Festival) ಅಂಗವಾಗಿ ಇಂದು (ಶನಿವಾರ) ವೈಗೈ ನದಿಗೆ ಕಲ್ಲಜಗರ್ ದೇವರ ಪ್ರವೇಶವನ್ನು ವೀಕ್ಷಿಸಲು ಸಾವಿರಾರು ಭಕ್ತರು ನೆರೆದಿದ್ದರಿಂದ ಕಾಲ್ತುಳಿತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 7 ಜನರು ಗಾಯಗೊಂಡಿದ್ದಾರೆ. ಮಧುರೈ ಚಿತ್ತಿರೈ ಉತ್ಸವ 2022ರ ಅಂಗವಾಗಿ ವೈಗೈ ನದಿಗೆ ಕಲ್ಲಜಗರ್ ದೇವರ ಪ್ರವೇಶದ ಸಮಯದಲ್ಲಿ ಇಬ್ಬರು ಜನರು ಸಾವನ್ನಪ್ಪಿದ್ದಾರೆ ಎಂದು ಮಧುರೈ ಸರ್ಕಾರಿ ಆಸ್ಪತ್ರೆಯ ಡೀನ್ ಎ ರತ್ನವೇಲ್ ತಿಳಿಸಿದ್ದಾರೆ. ಮಧುರೈ (Madhurai) ಚಿತ್ತಿರೈ ಉತ್ಸವ 2022 ರ ಅಂಗವಾಗಿ ಶೈವ-ವೈಷ್ಣವರ ಐಕ್ಯತೆ ಮತ್ತು ಸೌಹಾರ್ದತೆಗಾಗಿ ವೈಗೈ ನದಿಗೆ ಕಲ್ಲಜಗರ್ ದೇವರ ಪ್ರವೇಶವನ್ನು ವೀಕ್ಷಿಸಲು ಅಪಾರ ಸಂಖ್ಯೆಯ ಭಕ್ತರು ನೆರೆದಿದ್ದರು.
ಈ ವೇಳೆ ಕಾಲ್ತುಳಿತದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಮೃತರ ಪೈಕಿ ಮಧ್ಯವಯಸ್ಕ ಪುರುಷ ಮತ್ತು ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. ಮೃತರ ಬಗ್ಗೆ ಯಾವುದೇ ಮಾಹಿತಿಯನ್ನು ತಿಳಿಸಲು ಆಡಳಿತವು ಸಹಾಯವಾಣಿ ಸಂಖ್ಯೆ 9498042434 ಕೂಡ ನೀಡಿದೆ. ಗಾಯಾಳುಗಳನ್ನು ಸರ್ಕಾರಿ ರಾಜಾಜಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಸಂತ್ರಸ್ತರ ಕುಟುಂಬಗಳಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಮುಖ್ಯಮಂತ್ರಿಗಳ ಸಾಮಾನ್ಯ ಪರಿಹಾರ ನಿಧಿಯಿಂದ ಇಬ್ಬರು ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ., ಗಂಭೀರವಾಗಿ ಗಾಯಗೊಂಡ ಒಬ್ಬರಿಗೆ 2 ಲಕ್ಷ ರೂ. ಮತ್ತು ರೂ. ಸಣ್ಣಪುಟ್ಟ ಗಾಯವಾಗಿರುವ ಏಳು ಮಂದಿಗೆ ತಲಾ 1 ಲಕ್ಷ ರೂ. ನೀಡಲು ಸೂಚಿಸಲಾಗಿದೆ.
#WATCH | Tamil Nadu: A huge crowd of devotees witness the entry of Lord Kallazhagar into the Vaigai River, for the unity & amity of the Saiva-Vaishnava, as part of the #MaduraiChithiraiFestival2022 festival, in Madurai pic.twitter.com/9zDL92LaOD
— ANI (@ANI) April 16, 2022
ವಾರ್ಷಿಕ ‘ಚಿತ್ತಿರೈ’ ಹಬ್ಬವು ಕಳೆದ ವಾರ ಮೀನಾಕ್ಷಿ ಅಮ್ಮನ್ ದೇವಸ್ಥಾನದಲ್ಲಿ ಸಾಂಪ್ರದಾಯಿಕ ದೇವಾಲಯದ ಧ್ವಜಾರೋಹಣದೊಂದಿಗೆ ಪ್ರಾರಂಭವಾಯಿತು. ಚಿತ್ತಿರೈ ಉತ್ಸವ, ಚಿತ್ತಿರೈ ತಿರುವಿಜ, ಮೀನಾಕ್ಷಿ ಕಲ್ಯಾಣಂ ಅಥವಾ ಮೀನಾಕ್ಷಿ ತಿರುಕಲ್ಯಾಣಂ ಎಂದೂ ಕರೆಯಲ್ಪಡುವ ಇದು ಮೀನಾಕ್ಷಿ ದೇವಿ ಮತ್ತು ಭಗವಾನ್ ಸುಂದರೇಶ್ವರರ ಸ್ವರ್ಗೀಯ ವಿವಾಹವಾಗಿದೆ. ಸ್ವರ್ಗೀಯ ವಿವಾಹ ಅಥವಾ ತಿರುಕಲ್ಯಾಣವು ಏಪ್ರಿಲ್ 14ರಂದು ನಡೆದಿದೆ. ಏಪ್ರಿಲ್ 15ರಂದು ರಥೋತ್ಸವ ನಡೆದಿದ್ದು, ಇಂದು ಕಲ್ಲಜಗರ ಉತ್ಸವ ನಡೆಯಲಿದೆ.
ಈ ಹಬ್ಬವು ಒಂದು ತಿಂಗಳ ಕಾಲ ನಡೆಯುತ್ತದೆ. ಮೊದಲ 15 ದಿನಗಳು ಮಧುರೈನ ದೈವಿಕ ಆಡಳಿತಗಾರ್ತಿಯಾಗಿ ಮೀನಾಕ್ಷಿಯ ಪಟ್ಟಾಭಿಷೇಕದ ಆಚರಣೆಗಳು ಮತ್ತು ಸುಂದರೇಶ್ವರನೊಂದಿಗಿನ ವಿವಾಹವನ್ನು ಗುರುತಿಸುತ್ತವೆ.
ಇದನ್ನೂ ಓದಿ: Tirupati Temple: ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ಕಾಲ್ತುಳಿತ; ಮೂವರಿಗೆ ಗಾಯ