ದೆಹಲಿಯಲ್ಲಿ ಕೊವಿಡ್ 19 ಪಾಸಿಟಿವಿಟಿ ರೇಟ್ ಶೇ. 3.95ಕ್ಕೆ ಏರಿಕೆ; ಮತ್ತೆ ಶುರುವಾಗಿದೆ ಕೊರೊನಾ ಆತಂಕ
ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ಮುನ್ನೆಚ್ಚರಿಕೆ ಡೋಸ್ ನೀಡುವ ಅಭಿಯಾನ ಈಗಾಗಲೇ ಶುರುವಾಗಿದೆ. ಎರಡನೇ ಡೋಸ್ ತೆಗೆದುಕೊಂಡು 9 ತಿಂಗಳು ಪೂರ್ಣಗೊಂಡವರು ಮೂರನೇ ಡೋಸ್ನ್ನು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಪಡೆಯಬೇಕು.
ದೇಶದಲ್ಲಿ ಇನ್ನೇನು ಕೊವಿಡ್ 19 ಕಡಿಮೆಯಾಗುತ್ತ ಬಂತು ಎಂದು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಷ್ಟರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ದಿನೇದಿನೆ ಕೊವಿಡ್ 19 ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ದೆಹಲಿಯಲ್ಲಿ ಕಳೆದ 24ಗಂಟೆಯಲ್ಲಿ 366 ಹೊಸ ಕೊವಿಡ್ 19 ಕೇಸ್ಗಳು ದಾಖಲಾಗಿವೆ. ಇಲ್ಲೀಗ ದೈನಂದಿನ ಪಾಸಿಟಿವಿಟಿ ರೇಟ್ ಶೇ 3.95ಕ್ಕೆ ಏರಿಕೆಯಾಗಿದೆ. ಫೆ.3ರಲ್ಲಿದ್ದ ಪಾಸಿಟಿವಿಟಿ ದರಕ್ಕಿಂತ ಇದು ಶೇ.4ರಷ್ಟು ಹೆಚ್ಚಾಗಿದೆ. ದೆಹಲಿಯಲ್ಲಿ ಒಟ್ಟಾರೆ ಕೊವಿಡ್ 19 ಸೋಂಕಿತರ ಸಂಖ್ಯೆ 18,67,572 ಕ್ಕೆ ಏರಿಕೆಯಾಗಿದೆ. ಒಟ್ಟು ಸಾವಿನ ಸಂಖ್ಯೆ 26,158ಕ್ಕೆ ತಲುಪಿದೆ.
ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ಮುನ್ನೆಚ್ಚರಿಕೆ ಡೋಸ್ ನೀಡುವ ಅಭಿಯಾನ ಈಗಾಗಲೇ ಶುರುವಾಗಿದೆ. ಎರಡನೇ ಡೋಸ್ ತೆಗೆದುಕೊಂಡು 9 ತಿಂಗಳು ಪೂರ್ಣಗೊಂಡವರು ಮೂರನೇ ಡೋಸ್ನ್ನು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಪಡೆಯಬೇಕು ಎಂದು ಕೇಂದ್ರ ಸರ್ಕಾರ ಹೇಳಿತ್ತು. ಇದು ಕಡ್ಡಾಯ ಕೂಡ ಹೌದು. ಆದರೆ ಈ ಮೂರನೇ ಡೋಸ್ನ್ನು ದೆಹಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡುವುದಾಗಿ ನಿನ್ನೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದರು.
ಒಂದೆಡೆ ಕೊರೊನಾ ಲಸಿಕೆ ಮುನ್ನೆಚ್ಚರಿಕೆ ಡೋಸ್ ನೀಡಿಕೆ ಶುರುವಾಗಿದ್ದರೆ, ಮತ್ತೊಂದೆಡೆ ಕೊರೊನಾ ಸೋಂಕಿನ ಸಂಖ್ಯೆಯೂ ಏರುತ್ತಿದೆ. ಈಗಾಗಲೇ ಶಾಲೆಗಳೂ ಶುರುವಾಗಿದ್ದು, ಪರೀಕ್ಷೆಗಳ ಸಮಯ. ಹೀಗಿರುವಾಗ ಮತ್ತೆ ಕೊರೊನಾ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಶಾಲೆಗಳಲ್ಲಿ ಕೆಲವು ವಿದ್ಯಾರ್ಥಿಗಳಲ್ಲೂ ಕೊರೊನಾ ದೃಢಪಟ್ಟಿದೆ. ಯಾವ ಶಾಲೆಯ ಯಾವ ತರಗತಿ ಅಥವಾ ವಿಭಾಗದಲ್ಲಿ ಕೊರೊನಾ ಕಾಣಿಸಿಕೊಂಡಿದೆಯೋ ಅದನ್ನೊಂದು ಸದ್ಯ ಮುಚ್ಚಿದರೆ ಸಾಕು. ಇಡೀ ಶಾಲೆಯನ್ನು ಬಂದ್ ಮಾಡುವ ಅಗತ್ಯವಿಲ್ಲ. ಸಂಖ್ಯೆ ಇನ್ನೂ ಹೆಚ್ಚಳವಾದರೆ ಇಡೀ ಶಾಲೆಯನ್ನು ಬಂದ್ ಮಾಡೋಣ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ದೆಹಲಿಯಲ್ಲಿ ಕೊವಿಡ್ 19 ಕೇಸ್ಗಳು ಏರಿಕೆಯಾಗುತ್ತಿರುವ ಬೆನ್ನಲ್ಲೇ ಹೋಂ ಐಸೋಲೇಶನ್ ಕೂಡ ಹೆಚ್ಚಿದೆ. ಮನೆಯಲ್ಲೇ ಐಸೋಲೇಟ್ ಆಗುತ್ತಿರುವವರ ಪ್ರಮಾಣ ಶೇ.48ಕ್ಕೆ ತಲುಪಿದೆ. ಇದೆಲ್ಲದರ ಮಧ್ಯೆ ದೆಹಲಿ ಸರ್ಕಾರ ಏಪ್ರಿಲ್ 20ರಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯನ್ನು ಕರೆದಿದೆ. ಹೆಚ್ಚುತ್ತಿರುವ ಕೊವಿಡ್ 19 ನಿಯಂತ್ರಣ ನಿರ್ಬಂಧಗಳ ಬಗ್ಗೆ ಅಂದು ಚರ್ಚೆ ನಡೆಯಲಿದೆ.
ಇದನ್ನೂ ಓದಿ: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ಕೆಎಸ್ ಈಶ್ವರಪ್ಪ ಮನೆಗೆ ವಿವಿಧ ಸ್ವಾಮೀಜಿಗಳು ಭೇಟಿ
Published On - 11:49 am, Sat, 16 April 22