ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ಕೆಎಸ್ ಈಶ್ವರಪ್ಪ ಮನೆಗೆ ವಿವಿಧ ಸ್ವಾಮೀಜಿಗಳು ಭೇಟಿ
ಕೆ.ಎಸ್. ಈಶ್ವರಪ್ಪಗೆ ಕರೆ ಮಾಡಿದ ಮಂತ್ರಾಲಯದ ಶ್ರೀಗಳು ನೀವು ಯಾವುದಕ್ಕೂ ವಿಚಲಿತರಾಗಬೇಡಿ, ನೀವು ರಾಮ ಭಕ್ತರು. ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭಿಸಿದೆ.
ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮನೆಗೆ ಸ್ವಾಮೀಜಿಗಳು ಭೇಟಿ ನೀಡಿದ್ದಾರೆ. ಶಿವಮೊಗ್ಗದಲ್ಲಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮನೆಗೆ ಕಾಗಿನೆಲೆಯ ಪುರುಷೋತ್ತಮನಂದಪುರಿ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ಹೊಸದುರ್ಗದ ಈಶ್ವರನಂದಪುರಿ, ಸಹಿತ ಒಟ್ಟು 9 ಸ್ವಾಮೀಜಿಗಳು ಈಶ್ವರಪ್ಪ ಮನೆಗೆ ಭೇಟಿ ನೀಡಿ, ಮಾತುಕತೆ ನಡೆಸಿದ್ದಾರೆ. ಸಂತೋಷ್ ಆತ್ಮಹತ್ಯೆ ಕೇಸ್‌ನಲ್ಲಿ ಈಶ್ವರಪ್ಪ ರಾಜೀನಾಮೆ ಹಿನ್ನೆಲೆ ಈಶ್ವರಪ್ಪಗೆ ಸ್ವಾಮೀಜಿಗಳು ಧೈರ್ಯ ತುಂಬಿದ್ದಾರೆ. ಅಷ್ಟೇ ಅಲ್ಲದೆ, ಕೆ.ಎಸ್. ಈಶ್ವರಪ್ಪಗೆ ಕರೆ ಮಾಡಿದ ಮಂತ್ರಾಲಯದ ಶ್ರೀಗಳು ನೀವು ಯಾವುದಕ್ಕೂ ವಿಚಲಿತರಾಗಬೇಡಿ, ನೀವು ರಾಮ ಭಕ್ತರು. ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭಿಸಿದೆ.
ಸಂತೋಷ್ ಪ್ರಕರಣದ ಬಗ್ಗೆ ಶ್ರೀಗಳಿಗೆ ಕೆ.ಎಸ್. ಈಶ್ವರಪ್ಪ ವಿವರಣೆ ನೀಡಿದ್ದಾರೆ. ಪಕ್ಷದ ವರಿಷ್ಠರ ಜೊತೆ ಚರ್ಚಿಸಿಯೇ ರಾಜೀನಾಮೆ ನೀಡಿರುವೆ. ಎರಡು ದಿನ ಮೊದಲೇ ರಾಜೀನಾಮೆಯನ್ನ ನೀಡಲು ತೆರಳುತ್ತಿದ್ದೆ. ರಾಜೀನಾಮೆ ನೀಡಲು ಮೈಸೂರಿನಿಂದ ಬೆಂಗಳೂರಿಗೆ ಹೋಗ್ತಿದ್ದೆ. ಆತುರಬೇಡವೆಂಬ ಸೂಚನೆ ಹಿನ್ನೆಲೆ ರಾಜೀನಾಮೆಗೆ ತಡ ಮಾಡಿದ್ದೆ ಎಂದು ಕಾಗಿನೆಲೆ ಶ್ರೀ ಸೇರಿದಂತೆ ವಿವಿಧ ಶ್ರೀಗಳಿಗೆ ಕೆ.ಎಸ್. ಈಶ್ವರಪ್ಪ ವಿವರಣೆ ಕೊಟ್ಟಿದ್ದಾರೆ.
ಸಂತೋಷ್ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿದ ಪೊಲೀಸರು; ಚಿಕ್ಕಮಗಳೂರಿನಲ್ಲಿ ಮಾಹಿತಿ ಸಂಗ್ರಹ
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಕಾಫಿನಾಡಿನ ಹೋಂ ಸ್ಟೇನಲ್ಲಿ ಪೊಲೀಸರು ವಿವಿಧ ಮಾಹಿತಿ ಕಲೆ ಹಾಕಿದ್ದಾರೆ. ನವೀನ್ ಎಂಬುವರ ಹೆಸರಲ್ಲಿ ಹೋಂ ಸ್ಟೇ ಬುಕ್ ಮಾಡಲಾಗಿತ್ತು. 8/04/2022 ದಿನಾಂಕದಂದು ರಾತ್ರಿ ಹೋಂ ಸ್ಟೇಗೆ ಚೆಕ್ಇನ್ ಮಾಡಲಾಗಿತ್ತು. 9/04/2022 ಬೆಳಿಗ್ಗೆ ಮುಳ್ಳಯ್ಯಗಿರಿಗೆ ಸ್ನೇಹಿತರೊಂದಿಗೆ ಟ್ರಿಪ್ ಹೋಗಿದ್ದರು. 9/04/2022 ರಾತ್ರಿ ಹೋಂ ಸ್ಟೇನಲ್ಲಿಯೇ ಉಳಿದಿದ್ದರು. 10/04/2022 ಬೆಳಿಗ್ಗೆ ಚೆಕ್ಔಟ್ ಮಾಡಿಕೊಂಡು ಸಿಟಿಗೆ ಬಂದಿದ್ದರು. ಮತ್ತೆ ಅದೇ ದಿನ ರಾತ್ರಿ ಅದೇ ಹೋಂ ಸ್ಟೇ ಹೋಗಿ ಚೆಕ್ಇನ್ ಮಾಡಿದ್ದರು. 11/04/2022 ಚೆಕ್ಔಟ್ ಮಾಡಿಕೊಂಡು ಉಡುಪಿ ಕಡೆಗೆ ತೆರಳಿದ್ದರು. ನಾಲ್ಕು ದಿನಗಳ ಕಾಲ ಹೋಂ ಸ್ಟೇ ನಲ್ಲಿ ಸಂತೋಷ ಸ್ನೇಹಿತರು ತಂಗಿದ್ದರು ಎಂದು ತಿಳಿದುಬಂದಿದೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಚಿಕ್ಕಮಗಳೂರಿನ ಹೋಂ ಸ್ಟೇ ನಲ್ಲಿ ಮಾಹಿತಿ ಸಂಗ್ರಹ ಮಾಡಿದ್ದಾರೆ. ಮೂರು ದಿನ ವಾಸ್ತವ್ಯ ಹೂಡಿದ್ದ ಹೋಂ ಸ್ಟೇನಲ್ಲಿ ತನಿಖೆ ಮಾಡಲಾಗಿದೆ. ಚಿಕ್ಕಮಗಳೂರು ತಾಲೂಕಿನ ಕೈಮರ ಬಳಿಯ ಹೋಂ ಸ್ಟೇನಲ್ಲಿದ್ದ ಸಿಸಿಟಿವಿ ಡಿವಿಆರ್ ಸೇರಿ ದಾಖಲೆ ವಶಪಡಿಸಿಕೊಂಡಿದ್ದಾರೆ. ಏಪ್ರಿಲ್ 8ರ ರಾತ್ರಿ ಹೋಂಸ್ಟೇಗೆ ಆಗಮಿಸಿದ್ದ ಮೂವರು, ಏ.11ರ ಬೆಳಗ್ಗೆ ತೆರಳಿದ್ದರು. ಚಿಕ್ಕಮಗಳೂರಿನಿಂದ ಉಡುಪಿಗೆ ತೆರಳಿದ್ದ ಸಂತೋಷ್ ಪಾಟೀಲ್ ಅವರ ಮೂರು ದಿನಗಳ ಸಂಪೂರ್ಣ ಚಲನವಲನಗಳ ಮಾಹಿತಿ ಸಂಗ್ರಹ ಮಾಡಲಾಗಿದೆ.
ಸಂತೋಷ್ ಆತ್ಮಹತ್ಯೆ ಮಾಡಿಕೊಳ್ಳಲು ನಿಷೇಧಿತ ಮೋನೋಕ್ರೋಟೋಫಸ್ ಬಳಕೆ?
ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಳ್ಳಲು ನಿಷೇಧಿತ ಮೋನೋಕ್ರೋಟೋಫಸ್ ಸೇವಿಸಿದ್ದರಾ? ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ. ಲಾಡ್ಜಿನಲ್ಲಿ ಜ್ಯೂಸ್ ಜೊತೆ ಕೀಟನಾಶಕ ಬೆರೆಸಿ ಸೇವಿಸಿದ್ದ ಸಂತೋಷ್ ಚಿಕ್ಕಮಗಳೂರಿನಿಂದ ವಿಷ ಖರೀದಿಸಿ ತಂದಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಗಿಡಗಳಿಗೆ ಹುಳ ಭಾದೆ ಉಂಟಾಗದಂತೆ ಬಳಸಲಾಗುವ ಮೋನೋಕ್ರೋಟೋಫಾಸ್ ವಿಷವಾಗಿದ್ದು ಅದನ್ನೇ ಸೇವಿಸಿರುವ ಬಗ್ಗೆ ಬಲ್ಲಮೂಲಗಳಿಂದ ತಿಳಿದುಬಂದಿದೆ. ಮನುಷ್ಯನ ಸಾವಿಗೆ ಕಾರಣವಾಗುತ್ತದೆ ಎಂದು ಸರಕಾರದಿಂದ ನಿಷೇಧಕ್ಕೆ ಒಳಗಾಗಿರುವ ಕೀಟನಾಶಕ ಇದಾಗಿದೆ. ಲಾಡ್ಜಿನಲ್ಲಿ ಕಸದತೊಟ್ಟಿಯಲ್ಲಿ ಪತ್ತೆಯಾಗಿದ್ದ ವಿಷದ ಬಾಟಲಿಯನ್ನು ಫಾರೆನ್ಸಿಕ್ ತಜ್ಞರು ವಶಪಡಿಸಿಕೊಂಡಿದ್ದಾರೆ.
ಕೆಲವು ವರ್ಷಗಳ ಹಿಂದೆ ಬಿಹಾರದಲ್ಲಿ 23 ಮಕ್ಕಳ ಸಾವಿಗೆ ಇದೇ ವಿಷ ಕಾರಣವಾಗಿತ್ತು ಎಂದು ತಿಳಿದುಬಂದಿದೆ. ಕೇವಲ ಈ ವಿಷದ ಖಾಲಿ ಬಾಟಲಿಯಲ್ಲಿ ಹಾಕಲಾಗಿದ್ದ ಎಣ್ಣೆಯನ್ನು ಬಳಸಿದ ಕಾರಣದಿಂದ 23ಕ್ಕೂ ಅಧಿಕ ಮಕ್ಕಳು ಸಾವನ್ನಪ್ಪಿದ್ದರು. ಅತ್ಯಂತ ಅಪಾಯಕಾರಿ ಆಗಿರುವ ಮೋನೋಕ್ರೋಟೋಫಾಸ್ ವಿಷ ಇದಾಗಿದೆ ಎಂದು ಮಾಧ್ಯಮಗಳಿಗೆ ಪೊಲೀಸ್ ಮೂಲಗಳಿಂದ ಮಾಹಿತಿ ಲಭಿಸಿದೆ.
ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರ ಜತೆಗಿನ ಮೃತ ಸಂತೋಷ್ ಪಾಟೀಲ್ ಫೋಟೋಗಳು ವೈರಲ್
ಇದನ್ನೂ ಓದಿ: ಸಚಿವ ಮುರುಗೇಶ್ ನಿರಾಣಿ ಭೇಟಿ ಬಳಿಕ ಮೃದುವಾದ ಸಂತೋಷ್ ಕುಟುಂಬಸ್ಥರು, ಸಂತೋಷ್ ಸಾವು ವಿಧಿಲಿಖಿತ ಎಂದ ಸೋದರ ಪ್ರಶಾಂತ್
Published On - 11:54 am, Sat, 16 April 22