ಕಂಠ ಮಟ್ಟ ಕುಡಿದು, ಅಮಲೇರಿಸಿಕೊಂಡು ದೇವಸ್ಥಾನದಲ್ಲಿ ಮದುವೆಯಾದ ಯುವಕರು; ಮುಂದಾಗಿದ್ದೆಲ್ಲ ಫಜೀತಿ, 10 ಸಾವಿರ ರೂ.ಹೋಯ್ತು !
ಮನೆಗೆ ಹೋಗಿ ಸ್ವಲ್ಪ ಹೊತ್ತಾದ ಮೇಲೆ ಇಬ್ಬರಿಗೂ ಕುಡಿದ ಅಮಲೆಲ್ಲ ಇಳಿದಿದೆ. ಒಂದೆರಡು ದಿನ ಬಿಟ್ಟು ತಾಳಿ ಕಟ್ಟಿಸಿಕೊಂಡ ಜೋಗಿಪೇಟ್ನ ಯುವಕ ಸೀದಾ ತಾಳಿಕಟ್ಟಿದ ಆಟೋ ಚಾಲಕನ ಮನೆಗೆ ಬಂದಿದ್ದಾನೆ.
ಹೊಟ್ಟೆಗೆ ಮದ್ಯ ಸೇರಿದ್ದು ಹೆಚ್ಚಾದಾಗ ಅಂಥವರು ಮಾಡುವ ಎಡವಟ್ಟುಗಳು ಒಂದೆರಡಲ್ಲ. ಕೆಲವರು ಕುಡಿದಿದ್ದು ಹೆಚ್ಚಾದರೆ ಸುಮ್ಮನೆ ಮಲಗುತ್ತಾರೆ. ಮತ್ತೊಂದಷ್ಟು ಮಂದಿ ಏನೇನೋ ಮಾಡಿಕೊಂಡು ಪೇಚಿಗೆ ಸಿಲುಕುತ್ತಾರೆ. ಅಂಥದ್ದೇ ಒಂದು ವಿಚಿತ್ರ ಘಟನೆ ತೆಲಂಗಾಣದಲ್ಲಿ ನಡೆದಿದೆ. ಇಲ್ಲಿಬ್ಬರು ಯುವಕರು ಕಂಠಮಟ್ಟಕ್ಕೆ ಕುಡಿದು, ಅಮಲೇರಿಸಿಕೊಂಡು ಮದುವೆಯಾಗಿಬಿಟ್ಟಿದ್ದಾರೆ. ಈ ಇಬ್ಬರು ಕುಡಿದುಕೊಂಡು ಹೋಗಿ ಹುಡುಗಿಯರಿಗೆ ತಾಳಿಕಟ್ಟಿದ್ದಾರೆ ಎಂದುಕೊಳ್ಳಬೇಡಿ, ಇವರಿಬ್ಬರೇ ಮದುವೆಯಾಗಿದ್ದಾರೆ. ಒಬ್ಬ ಕುಡುಕ, ಮತ್ತೊಬ್ಬಾತನಿಗೆ ತಾಳಿ ಕಟ್ಟಿದ್ದಾನೆ !
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿರುವ ಜೋಗಿಪೇಟ್ನ ನಿವಾಸಿಯಾದ 21 ವರ್ಷದ ಯುವಕ ಮತ್ತು ಮೇದಕ್ ಜಿಲ್ಲೆಯ ಚಂದೂರ್ ನಿವಾಸಿಯಾದ 22 ವರ್ಷದ ಯುವಕ (ಈತ ರಿಕ್ಷಾ ಚಾಲಕ) ಇಬ್ಬರೂ ಒಂದು ಬಾರಿ ಧೂಮಪಾಲಾಪೇಟ್ ಗ್ರಾಮದಲ್ಲಿರುವ ಹೆಂಡದ ಅಂಗಡಿಯಲ್ಲಿ ಹೇಗೋ ಭೇಟಿಯಾದರು. ಹಾಗೇ, ಮಾತನಾಡುತ್ತ ಸ್ನೇಹಿತರೂ ಆದರು. ನಂತರ ಆಗಾಗ ಸಿಕ್ಕು ಒಟ್ಟಿಗೇ ಕುಡಿಯುತ್ತಿದ್ದರು. ಏಪ್ರಿಲ್ 1ರಂದು ಕೂಡ ಇವರಿಬ್ಬರೂ ಒಟ್ಟಿಗೇ ಕುಳಿತು ಕುಡಿದಿದ್ದಲ್ಲದೆ, ಸಿಕ್ಕಾಪಟೆ ಅಮಲೇರಿಸಿಕೊಂಡಿದ್ದಾರೆ. ಅದೇ ಅಮಲಿನಲ್ಲಿ ಜೋಗಿನಾಥ್ ಗುಟ್ಟಾ ದೇವಸ್ಥಾನಕ್ಕೆ ಹೋಗಿ ಮದುವೆಯಾಗಿದ್ದಾರೆ. ಇದರಲ್ಲಿ ಮೇದಕ್ ಜಿಲ್ಲೆಯವನಾದ ಆಟೋ ಚಾಲಕ, ಇನ್ನೊಬ್ಬಾತನಿಗೆ ತಾಳಿ ಕಟ್ಟಿದ್ದಾನೆ. ಅಷ್ಟು ಮಾಡಿಯಾದ ಮೇಲೆ ಇಬ್ಬರೂ ತಮ್ಮ-ತಮ್ಮ ಮನೆ ಹಾದಿ ಹಿಡಿದಿದ್ದಾರೆ.
ಮನೆಗೆ ಹೋಗಿ ಸ್ವಲ್ಪ ಹೊತ್ತಾದ ಮೇಲೆ ಇಬ್ಬರಿಗೂ ಕುಡಿದ ಅಮಲೆಲ್ಲ ಇಳಿದಿದೆ. ಒಂದೆರಡು ದಿನ ಬಿಟ್ಟು ತಾಳಿ ಕಟ್ಟಿಸಿಕೊಂಡ ಜೋಗಿಪೇಟ್ನ ಯುವಕ ಸೀದಾ ತಾಳಿಕಟ್ಟಿದ ಆಟೋ ಚಾಲಕನ ಮನೆಗೆ ಬಂದಿದ್ದಾನೆ. ‘ನಿಮ್ಮ ಮಗ ನನಗೆ ತಾಳಿ ಕಟ್ಟಿದ್ದಾನೆ. ನನಗೂ ಇಲ್ಲಿಯೇ ಅವನೊಂದಿಗೆ ಇರಲು ಅವಕಾಶ ಮಾಡಿಕೊಡಿ. ನಾನು ಬೇರೆಲ್ಲೂ ಹೋಗಲು ಸಾಧ್ಯವಿಲ್ಲ’ ಎಂದು ಆಟೋ ಚಾಲಕನ ತಂದೆ-ತಾಯಿಯ ಬಳಿಯೂ ಮನವಿ ಮಾಡಿದ್ದಾನೆ. ಆದರೆ ಇದು ದೊಡ್ಡ ಗಲಾಟೆಗೆ ಕಾರಣವಾಯಿತು. ತಾಳಿ ಕಟ್ಟಿದ ಆಟೋ ಚಾಲಕ ಕೂಡ ತಿರುಗಿಬಿದ್ದಿದ್ದಾನೆ. ಮನೆಯಲ್ಲಿ ಇರಲು ಅವಕಾಶ ಕೊಡುವುದಿಲ್ಲ ಎಂದು ಎಲ್ಲರೂ ಸೇರಿ ಕೂಗಾಡಿದ್ದಾರೆ. ಬಳಿಕ ಜೋಗಿಪೇಟ್ನ ಯುವಕ ಸೀದಾ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾನೆ. ಅಷ್ಟೇ ಅಲ್ಲ, ನಾನು ತಾಳಿಕಟ್ಟಿಸಿಕೊಂಡಿದ್ದೇನೆ. ಈಗ ಮನೆಗೆ ಸೇರಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಹಾಗೊಮ್ಮೆ ನಾನು ಶಾಶ್ವತವಾಗಿ ದೂರ ಇರಬೇಕು ಎಂದರೆ ಆ ಕುಟುಂಬದವರು ನನಗೆ 1 ಲಕ್ಷ ರೂಪಾಯಿ ಕೊಡಬೇಕು ಎಂಬ ಬೇಡಿಕೆಯನ್ನೂ ಇಟ್ಟಿದ್ದ.
ಬಳಿಕ ಇದು ಕುಡಿದಾಗ ನಡೆದ ಎಡವಟ್ಟು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಂಡರು. ಇಬ್ಬರೂ ಯುವಕರ ಕುಟುಂಬದವರು ಸೇರಿ ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಂಡಿದ್ದಾರೆ. ಆದರೂ ತಾಳಿಕಟ್ಟಿಸಿಕೊಂಡ ಜೋಗಿಪೇಟ್ ಯುವಕ 10 ಸಾವಿರ ರೂಪಾಯಿ ಪರಿಹಾರ ಪಡೆದಿದ್ದಾನೆ ಎಂದು ಪೊಲೀಸ್ ಅಧಿಕಾರಿ ಮೊಹಮ್ಮದ್ ಗೋಸೆ ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇದನ್ನೂ ಓದಿ: ನಾವು ಪಾಕಿಸ್ತಾನದ ಮುಸ್ಲಿಮರಲ್ಲ, ಸಹಬಾಳ್ವೆಗೆ ನಮ್ಮ ಮೊದಲ ಆದ್ಯತೆ: ಕಾಂಗ್ರೆಸ್ ಶಾಸಕ ಜಮೀರ್ ಅಹಮದ್
Published On - 1:34 pm, Mon, 11 April 22