Breaking: ನ್ಯಾಷನಲ್ ಹೆರಾಲ್ಡ್ ಭ್ರಷ್ಟಾಚಾರ ಪ್ರಕರಣ: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ವಿಚಾರಣೆ ನಡೆಸಿದ ಇ.ಡಿ..
ಯಂಗ್ ಇಂಡಿಯಾ ಲಿಮಿಟೆಡ್, ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಕಾನೂನು ಬದ್ಧವಾಗಿ ಸ್ವಾಧೀನ ಪಡಿಸಿಕೊಂಡಿಲ್ಲ. ನಿಷ್ಕ್ರಿಯಗೊಂಡ ಮುದ್ರಣ ಮಾಧ್ಯಮದ (ಎಜೆಎಲ್) ಸ್ವತ್ತುಗಳನ್ನು ದುರುದ್ದೇಶಪೂರಿತವಾಗಿ ತೆಗೆದುಕೊಂಡಿದೆ ಎಂಬುದು ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಆರೋಪ.
ನ್ಯಾಷನಲ್ ಹೆರಾಲ್ಡ್ ಸುದ್ದಿ ಪತ್ರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರನ್ನು ವಿಚಾರಣೆ ನಡೆಸಲು ಮುಂದಾಗಿರುವ ಇ.ಡಿ.(ಜಾರಿ ನಿರ್ದೇಶನಲಾಯ) ಅವರಿಗೆ ಈಗಾಗಲೇ ಸಮನ್ಸ್ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದ್ದಾಗಿ ಅಮರ್ ಉಜಾಲಾ ಸುದ್ದಿ ಮಾಧ್ಯಮ ವರದಿ ಮಾಡಿದೆ. ನ್ಯಾಷನಲ್ ಹೆರಾಲ್ಡ್ ಸುದ್ದಿ ಪತ್ರಿಕೆಯನ್ನು 1938ರಲ್ಲಿ ಜವಾಹರ್ ಲಾಲ್ ನೆಹರೂ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರು ಸೇರಿ ಪ್ರಾರಂಭಿಸಿದ್ದರು. ಬಳಿಕ ಇದು ಕಾಂಗ್ರೆಸ್ ಪಕ್ಷದ ಮುಖವಾಣಿಯಾಗಿತ್ತು. ಈ ನ್ಯಾಷನಲ್ ಹೆರಾಲ್ಡ್ ವಿಚಾರದಲ್ಲಿ ಕಾಂಗ್ರೆಸ್ನ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇನ್ನಿತರರು ಸೇರಿ ಹಗರಣ ನಡೆಸಿದ್ದಾರೆ ಎಂದು ದೂರು ಕೊಟ್ಟಿದ್ದರು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ (AJL) ಪ್ರಕಟಿಸುತ್ತಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭವಾಗಿದ್ದ ಈ ಪತ್ರಿಕೆ ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಮುಖವಾಣಿಯಾಯಿತು. ಆದರೆ 2008ರಲ್ಲಿ ಎಜೆಎಲ್ ಬರೋಬ್ಬರಿ 90 ಕೋಟಿ ರೂಪಾಯಿಗಳಷ್ಟು ಸಾಲದ ಸುಳಿಯಲ್ಲಿ ಸಿಲುಕಿದ ನಂತರ ಈ ಪತ್ರಿಕೆಯ ಪ್ರಕಟಣೆ ಸ್ಥಗಿತಗೊಂಡಿತು. ಅಂದಹಾಗೇ, ಈ ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ನ್ನು ಹುಟ್ಟುಹಾಕಿದ್ದೂ ಜವಾಹರ್ಲಾಲ್ ನೆಹರೂ. ಇದನ್ನವರು 1937ರಲ್ಲಿ ಪ್ರಾರಂಭ ಮಾಡಿದ್ದರು. ಶುರುವಾದ ಸಂದರ್ಭದಲ್ಲಿ ಸುಮಾರು ಐದು ಸಾವಿರ ಸ್ವಾತಂತ್ರ್ಯ ಹೋರಾಟಗಾರರು ಇದರ ಶೇರುದಾರರು (ಸ್ಟಾಕ್ ಹೋಲ್ಡರ್ಗಳು) ಆಗಿದ್ದರು.
2008ರಲ್ಲಿ ಸಾಲದ ಹೊರೆಯಿಂದ ಎಜೆಎಲ್ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕಟಣೆಯನ್ನು ನಿಲ್ಲಿಸಿದ ಬಳಿಕ 2011ರಲ್ಲಿ ಯಂಗ್ ಇಂಡಿಯಾ ಲಿಮಿಟೆಡ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದಕ್ಕೆ ಪತ್ರಿಕೆಯ ಹಕ್ಕನ್ನು ವರ್ಗಾಯಿಸಲಾಯಿತು. ಇದರೊಂದಿಗೆ 90 ಕೋಟಿ ರೂ.ಸಾಲವನ್ನೂ ವರ್ಗಾವಣೆ ಮಾಡಲಾಗಿತ್ತು. ಈ ಯಂಗ್ ಇಂಡಿಯಾವನ್ನು ಸ್ಥಾಪಿಸಿದ್ದು ಅಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಹುಲ್ ಗಾಂಧಿ. ಈ ಸಂಸ್ಥೆಗೆ ಅವರು ನಿರ್ದೇಶಕರೂ ಆದರು. ಯಂಗ್ ಇಂಡಿಯಾ ಲಿಮಿಟೆಡ್ನಲ್ಲಿ ರಾಹುಲ್ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಶೇ.76ರಷ್ಟು ಶೇರು ಹೊಂದಿದ್ದರು. ಉಳಿದ ಶೇ.24 ಪಾಲನ್ನು ಕಾಂಗ್ರೆಸ್ ನಾಯಕರಾದ ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್ ಹೊಂದಿದ್ದರು. ಈ ಕಂಪನಿ ಯಾವುದೇ ವಾಣಿಜ್ಯಾತ್ಮಕ ಕಾರ್ಯದಲ್ಲೂ ತೊಡಗಿಕೊಂಡಿರಲಿಲ್ಲ.
ಸುಬ್ರಹ್ಮಣಿಯನ್ ಸ್ವಾಮಿ ಆರೋಪವೇನು?
ಯಂಗ್ ಇಂಡಿಯಾ ಲಿಮಿಟೆಡ್, ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಕಾನೂನು ಬದ್ಧವಾಗಿ ಸ್ವಾಧೀನ ಪಡಿಸಿಕೊಂಡಿಲ್ಲ. ನಿಷ್ಕ್ರಿಯಗೊಂಡ ಮುದ್ರಣ ಮಾಧ್ಯಮದ (ಎಜೆಎಲ್) ಸ್ವತ್ತುಗಳನ್ನು ದುರುದ್ದೇಶಪೂರಿತವಾಗಿ ತೆಗೆದುಕೊಂಡಿದೆ. ಈ ಮೂಲಕ 2000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿ ಮತ್ತು ಲಾಭ ಮಾಡಿಕೊಂಡಿದೆ. ಎಜೆಎಲ್ ಕಾಂಗ್ರೆಸ್ ಸುಮಾರು 90.25 ಕೋಟಿ ರೂಪಾಯಿಯಷ್ಟು ಸಾಲ ನೀಡಬೇಕು. ಆದರೆ ನ್ಯಾಷನಲ್ ಹೆರಾಲ್ಡ್ದ ಜವಾಬ್ದಾರಿ ವಹಿಸಿಕೊಳ್ಳುವಾಗ ಯಂಗ್ ಇಂಡಿಯಾ ಲಿಮಿಟೆಡ್ ಕೇವಲ 50 ಲಕ್ಷ ರೂಪಾಯಿ ಪಾವತಿಸಿದೆ. ಅಷ್ಟೇ ಅಲ್ಲ, ಕಾಂಗ್ರೆಸ್ ಎಜೆಎಲ್ಗೆ ನೀಡಿದ ಸಾಲವೂ ಕಾನೂನು ಬಾಹಿರವಾಗಿ ಇದೆ ಎಂದು ಸುಬ್ರಹ್ಮಣಿಯನ್ ಸ್ವಾಮಿ ಆರೋಪಿಸಿದ್ದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಆಸ್ಕರ್ ಫರ್ನಾಂಡಿಸ್, ಮೋತಿಲಾಲ್ ವೋರಾ, ಯಂಗ್ ಇಂಡಿಯಾದ ನಿರ್ದೇಶಕರಾಗಿದ್ದ ಪತ್ರಕರ್ತ ಸುಮನ್ ದುಬೆ, ತಂತ್ರಜ್ಞ ಸ್ಯಾಮ್ ಪಿತ್ರೊಡಾ ಹೆಸರನ್ನು ಪಿತ್ರೊಡಾ ದೂರಿನಲ್ಲಿ ಉಲ್ಲೇಖಿಸಿದ್ದರು. ಇನ್ನು ಯಂಗ್ ಇಂಡಿಯಾದ ಅಧ್ಯಕ್ಷರಾಗಿದ್ದ ಆಸ್ಕರ್ ಫರ್ನಾಂಡಿಸ್ ಮೃತಪಟ್ಟ ಬಳಿಕ ಮಲ್ಲಿಕಾರ್ಜುನ್ ಖರ್ಗೆ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದರು. ಇದೇ ಹಿನ್ನೆಲೆಯಲ್ಲಿ ಇ.ಡಿ. ಈಗ ಅವರ ವಿಚಾರಣೆಯನ್ನೂ ನಡೆಸುತ್ತಿದೆ.
ಈ ಪ್ರಕರಣವನ್ನು ಇ.ಡಿ.ತನಿಖೆಗೆ ಕೈಗೆತ್ತಿಕೊಂಡಿದ್ದು 2018ರಲ್ಲಿ. ನ್ಯಾಷನಲ್ ಹೆರಾಲ್ಡ್ ವರ್ಗಾವಣೆ ಪ್ರಕ್ರಿಯೆಯಲ್ಲಿ ಹಣ ಅಕ್ರಮ ವರ್ಗಾವಣೆಯೂ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದರಿಂದ ಇ.ಡಿ.ತನಿಖೆ ಶುರು ಮಾಡಿದೆ. 2015ರಲ್ಲಿ ಈ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲನ್ನೂ ಏರಿದೆ. ದೆಹಲಿ ಹೈಕೋರ್ಟ್ ಕೂಡ ರಾಹುಲ್ ಗಾಂಧಿ, ಸೋನಿಯಾ ಗಾಂಧಿಗೆ ಕಳೆದ ವರ್ಷ ಫೆ.21ರಂದು ನೋಟಿಸ್ ನೀಡಿತ್ತು. ಸುಬ್ರಹ್ಮಣಿಯನ್ ಸ್ವಾಮಿ ಅರ್ಜಿಗೆ ಉತ್ತರಿಸುವಂತೆ ಹೇಳಿತ್ತು. ಇದೆಲ್ಲದರ ಮಧ್ಯೆ ಕಾಂಗ್ರೆಸ್ ನಾಯಕರು ತಮ್ಮ ವಿರುದ್ಧದ ಆರೋಪಗಳನ್ನ ನಿರಾಕರಿಸುತ್ತ ಬಂದಿದ್ದಾರೆ. ಯಂಗ್ ಇಂಡಿಯಾ ಲಿಮಿಟೆಡ್ ಸ್ಥಾಪಿಸಿದ್ದು ಕೇವಲ ಚ್ಯಾರಿಟಿ ಉದ್ದೇಶಕ್ಕೆ ಹೊರತು, ಯಾವುದೇ ಲಾಭಕ್ಕಾಗಿ ಅಲ್ಲ ಎಂದು ಹೇಳಿದ್ದಾರೆ.
Published On - 12:36 pm, Mon, 11 April 22