5,000 ಮೀಟರ್ ಸಮುದ್ರದಾಳದಲ್ಲಿ ಭಾರತೀಯರು; ವಿಶ್ವದ ಕೆಲವೇ ದೇಶಗಳ ಸಾಲಿಗೆ ಭಾರತ

India's preparation for Samudrayaan: ಆಗಸ್ಟ್ ಮೊದಲ ವಾರದಲ್ಲಿ ಭಾರತದ ಜತೀಂದರ್ ಪಾಲ್ ಸಿಂಗ್ ಮತ್ತು ಆರ್ ರಮೇಶ್ ಅವರು 4,000-5,000 ಮೀಟರ್ ಸಮುದ್ರದಾಳಕ್ಕೆ ಹೋಗಿ ಬಂದಿದ್ದಾರೆ. 2027ರ ಸಮುದ್ರಯಾನಕ್ಕೆ ಪೂರ್ವತಯಾರಿಯಾಗಿ ಈ ಇಬ್ಬರು ಜಲಯಾತ್ರಿಗಳು ಸಾಹಸ ಮಾಡಿ ಬಂದಿದ್ದಾರೆ. ಫ್ರಾನ್ಸ್​ನ ಜಲಾಂತರ್ಗಾಮಿ ನೌಕೆ ಮೂಲಕ ಅವರು ಸಮುದ್ರದ ಆಳಕ್ಕೆ ಹೋಗಿದ್ದಾರೆ. 2027ರಲ್ಲಿ ಭಾರತದ್ದೇ ಸ್ವಂತ ನಿರ್ಮಾಣದ ನೌಕೆಯು ಸಮುದ್ರದೊಳಗೆ ಹೋಗಲಿದೆ.

5,000 ಮೀಟರ್ ಸಮುದ್ರದಾಳದಲ್ಲಿ ಭಾರತೀಯರು; ವಿಶ್ವದ ಕೆಲವೇ ದೇಶಗಳ ಸಾಲಿಗೆ ಭಾರತ
ಸಬ್​ಮರ್ಸಿಬಲ್ ನೌಕೆ

Updated on: Aug 31, 2025 | 4:34 PM

ನವದೆಹಲಿ, ಆಗಸ್ಟ್ 31: ಭಾರತದ ಗಗನಯಾನ ಯೋಜನೆಗೆ ಪೂರ್ವಭಾವಿಯಾಗಿ ಶುಭಾಂಶು ಶುಕ್ಲ ಗಗನಯಾತ್ರೆಯನ್ನು ಪ್ರತ್ಯಕ್ಷವಾಗಿ ಅನುಭವಿಸಿ ಬಂದು ಹೊಸ ಇತಿಹಾಸ ಸೃಷ್ಟಿಸಿದ್ದರು. ಅದೇ ರೀತಿ ಈಗ ಭಾರತದ ಸಮುದ್ರಯಾನ ಯೋಜನೆಗೆ (Samudrayaan) ಪೂರ್ವಭಾವಿಯಾಗಿ ಇಬ್ಬರು ಭಾರತೀಯ ಜಲಯಾತ್ರಿಗಳು (Aquanauts) 2-3 ವಾರಗಳ ಹಿಂದೆ ಆಟ್ಲಾಂಟಿಕ್ ಸಾಗರೊಳಗೆ ಜಿಗಿದಿದ್ದಾರೆ. ಫ್ರಾನ್ಸ್ ದೇಶದ ನಾಟೈಲ್ (Nautile) ಎನ್ನುವ ಸಬ್​ಮರ್ಸಿಬಲ್ ನೌಕೆಯಲ್ಲಿ (Submersible) ಆಗಸ್ಟ್ 4 ಮತ್ತು 5ರಂದು ಜತೀಂದರ್ ಪಾಲ್ ಸಿಂಗ್ ಮತ್ತು ಆರ್ ರಮೇಶ್ ಅವರು 4,000-5,000 ಮೀಟರ್ ಸಮುದ್ರದಾಳಕ್ಕೆ ಹೋಗಿ ಬಂದಿದ್ದಾರೆ. ಇದು ಭಾರತಕ್ಕೆ ಬಹಳ ಮಹತ್ವದ್ದಾಗಿರುವ ಬೆಳವಣಿಗೆ. ಶುಭಾಂಶು ಶುಕ್ಲ ಗಗನಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಬಂದಷ್ಟೇ ಮಹತ್ವದ್ದು.

ಭಾರತೀಯರು ಈ ಹಿಂದೆ ಸಾಕಷ್ಟು ಬಾರಿ ಸಬ್​ಮರೈನ್ ಡೈವ್​ಗಳನ್ನು ಮಾಡಿರುವುದುಂಟು. ಆದರೆ ಅವೆಲ್ಲವೂ 500 ಮೀಟರ್​ಗಿಂತ ಕಡಿಮೆ ಆಳಕ್ಕೆ ಹೋಗಿದ್ದೇ ಹೆಚ್ಚು. ಜತೀಂದರ್ ಅವರು ಒಮ್ಮೆ 670 ಮೀಟರ್ ಆಳಕ್ಕೆ ಹೋಗಿ ಬಂದಿದ್ದು ಇದೂವರೆಗಿನ ದಾಖಲೆಯಾಗಿತ್ತು. ಈಗ ಜತೀಂದರ್ ಪಾಲ್ ಸಿಂಗ್ ಅವರೇ ಮತ್ತೆ ಹೊಸ ದಾಖಲೆ ಮಾಡಿದ್ದಾರೆ. 5,002 ಮೀಟರ್ ಆಳಕ್ಕೆ ಹೋಗಿ ಬಂದಿದ್ದಾರೆ.

ಇದನ್ನೂ ಓದಿ: ಚೆನ್ನೈನಲ್ಲಿ ಮೇಘಸ್ಫೋಟ; ಹಲವೆಡೆ ಭಾರೀ ಮಳೆ; ಬೆಂಗಳೂರಿಗೆ ಬಂದ 3 ವಿಮಾನಗಳು

ಆರ್ ರಮೇಶ್ ಅವರು 4,025 ಮೀಟರ್ ಅಳದವರೆಗೂ ಹೋಗಿ ಬಂದಿದ್ದಾರೆ. ಭಾರತೀಯರು ಇಷ್ಟು ಆಳಕ್ಕೆ ಸಬ್​ಮರೈನ್ ಡೈವ್ ಮಾಡಿರುವುದು ಇದೇ ಮೊದಲು. ವಿಶ್ವದಲ್ಲಿ ಭಾರತವೂ ಸೇರಿದಂತೆ ಆರು ದೇಶಗಳ ವ್ಯಕ್ತಿಗಳು ಮಾತ್ರವೇ ಈ ಆಳಕ್ಕೆ ಹೋಗಿ ಬಂದಿರುವುದು ಎಂದು ಹೇಳಲಾಗುತ್ತಿದೆ.

ಆಳ ಸಮುದ್ರಕ್ಕೆ ಇಳಿದ ಭಾರತೀಯರು, ವಿಡಿಯೋ

2027ಕ್ಕೆ ಸಿದ್ಧವಾಗಲಿದೆ ಭಾರತದ್ದೇ ಸ್ವಂತ ನೌಕೆ

ಭಾರತದ ಜತೀಂದರ್ ಮತ್ತು ರಮೇಶ್ ಅವರು ಫ್ರಾನ್ಸ್ ದೇಶದ ನಾಟೈಲ್ ನೌಕೆಯಲ್ಲಿ ಸಮುದ್ರದ ಆಳಕ್ಕೆ ಹೋಗಿ ಬಂದಿದ್ದರು. ಆದರೆ, ಭಾರತವೇ ಸ್ವಂತವಾಗಿ ಮತ್ಸ್ಯ ಎನ್ನುವ ನೌಕೆಯನ್ನು ನಿರ್ಮಿಸುತ್ತಿದೆ. ಇದು 6,000 ಮೀಟರ್ ಆಳಕ್ಕೆ ಹೋಗಿ ಬರುವ ಸಾಮರ್ಥ್ಯ ಹೊಂದಿರಲಿದೆ. 2027ಕ್ಕೆ ಈ ನೌಕೆಯು ಆಳ ಸಮುದ್ರಕ್ಕೆ ಜಲಯಾತ್ರಿಗಳನ್ನು ಕರೆದೊಯ್ಯಲಿದೆ.

ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ (ಎನ್​ಐಒಟಿ) ಸಬ್​ಮರ್ಸಿಬಲ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇಸ್ರೋದ ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್ ಸಂಸ್ಥೆಯು ಕ್ರ್ಯೂ ಕ್ಯಾಪ್ಸೂಲ್ ವಿನ್ಯಾಸ ಮತ್ತು ತಯಾರಿಕೆ ಮಾಡುತ್ತಿದೆ.

ಇದನ್ನೂ ಓದಿ: ಪರಸ್ಪರ ನಂಬಿಕೆ, ಗೌರವದ ಮೇಲೆ ನಮ್ಮ ಸಂಬಂಧ ಮುಂದುವರೆಸಲು ಬದ್ಧ: ಜಿನ್​​ಪಿಂಗ್​​ಗೆ ಮೋದಿ ಸಂದೇಶ

ಆರು ದೇಶಗಳ ಸಾಲಿಗೆ ಸೇರಲಿರುವ ಭಾರತ

ಈಗ ಸದ್ಯಕ್ಕೆ ಐದು ದೇಶಗಳು ಮಾತ್ರವೇ ಆಳ ಸಮುದ್ರಕ್ಕೆ ಹೋಗಬಲ್ಲ ಸಬ್ಮರ್ಸಿಬಲ್ ನೌಕೆಗಳನ್ನು ತಯಾರಿಸಿರುವುದು. ಅಮೆರಿಕ, ಜಪಾನ್, ಫ್ರಾನ್ಸ್, ರಷ್ಯಾ ಮತ್ತು ಚೀನಾ ದೇಶಗಳು ಈ ಮೊದಲು ಜಲಾಂತರ್ಗಾಮಿ ನೌಕೆಗಳನ್ನು ಯಶಸ್ವಿಯಾಗಿ ಕಳುಹಿಸಿವೆ. 2027ರಲ್ಲಿ ಭಾರತದ ಸಮುದ್ರಯಾನ ಯಶಸ್ವಿಯಾದರೆ ಈ ಗುಂಪಿಗೆ ಆರನೇ ದೇಶ ಸೇರ್ಪಡೆಯಾದಂತಾಗುತ್ತದೆ.

ಸದ್ಯ ಚೀನಾದ ನೌಕೆಗಳು 10,000 ಮೀಟರ್ ಆಳಕ್ಕೆ ಜಲಯಾತ್ರಿಗಳನ್ನು ಕರೆದುಕೊಂಡು ಹೋಗಿ ಬಂದಿವೆ. ಇಷ್ಟು ಆಳಕ್ಕೆ ಬೇರಾವ ದೇಶಕ್ಕೂ ಹೋಗಿ ಬರಲು ಸಾಧ್ಯವಾಗಿಲ್ಲ. ಈ ವಿಚಾರದಲ್ಲಿ ಚೀನಾ ಮುಂಚೂಣಿಯಲ್ಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:30 pm, Sun, 31 August 25