ಪಶ್ಚಿಮ ಬಂಗಾಳದಲ್ಲಿ ಬಿರ್ಭೂಮ್ನಲ್ಲಿ ನಡೆದ ಹಿಂಸಾಚಾರ, 8 ಮಂದಿ ಸಜೀವ ದಹನ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದೆ. ಅದರ ಬಿಸಿ ಆರುವ ಮುನ್ನವೇ ಇದೀಗ ಇಬ್ಬರು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಹತ್ಯೆ ನಡೆದಿದೆ. ಇವೆರಡೂ ಪ್ರತ್ಯೇಕ ಪ್ರಕರಣಗಳಾಗಿವೆ. ಕಳೆದ ಕೆಲವು ದಿನಗಳ ಹಿಂದೆ ಬರೋಸಾಲ್ ಗ್ರಾಪ ಪಂಚಾಯಿತಿ ಉಪಾಧ್ಯಕ್ಷ ಭಡು ಶೇಖ್ ಎಂಬುವರ ಹತ್ಯೆಯಾಗಿತ್ತು. ಇವರೂ ಕೂಡ ಟಿಎಂಸಿ ಮುಖಂಡನೇ ಆಗಿದ್ದರು. ಅವರ ಹತ್ಯೆ ಬೆನ್ನಲ್ಲೇ ಬಿರ್ಭೂಮ್ನಲ್ಲಿ ಅವರ ಬೆಂಬಲಿಗರು ದಾಂಧಲೆ ಎಬ್ಬಿಸಿ, ಸಿಕ್ಕಸಿಕ್ಕ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಪ್ರಕರಣವನ್ನು ಕೊಲ್ಕತ್ತ ಹೈಕೋರ್ಟ್ ಸುಮೊಟೊ ವಿಚಾರಣೆಗೆ ಕೈಗೆತ್ತಿಕೊಂಡಿದ್ದು, ಯಾವುದೇ ಸಾಕ್ಷಿ ನಾಶಕ್ಕೆ ಆಸ್ಪದವಾಗದಂತೆ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಬಿರ್ಭೂಮ್ ಸಹೀವದಹನದ ಸುದ್ದಿಯೇ ಇನ್ನೂ ಚರ್ಚೆಯಲ್ಲಿದೆ. ಅದರ ಬಿಸಿಯೇ ಇನ್ನೂ ಆರಿಲ್ಲ. ಹೀಗಿರುವಾಗ ಹೂಗ್ಲಿಯ ತಾರಕೇಶ್ವರದ ನೂತನ ಕೌನ್ಸಿಲರ್, ಟಿಎಂಸಿ ನಾಯಕಿ ರೂಪಾ ಸರ್ಕಾರ್ ಮೇಲೆ ದಾಳಿಯಾಗಿದೆ. ಕಾರಿನ ಮೂಲಕ ಅವರಿಗೆ ಡಿಕ್ಕಿ ಹೊಡೆಸಲಾಗಿದ್ದು, ಪರಿಸ್ಥಿತಿ ತುಂಬ ಗಂಭೀರವಾಗಿದೆ. ಬುಧವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು ಸದ್ಯ ರೂಪಾರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬುಧವಾರ ರಾತ್ರಿ ರೂಪಾ ತಮ್ಮ ಸ್ಕೂಟರ್ನಲ್ಲಿ ಮನೆಗೆ ಬರುತ್ತಿದ್ದರು. ಈ ವೇಳೆ ಮಾರುತಿ ವ್ಯಾನ್ ಬಂದು ಅವರ ಬೈಕ್ನ ಹಿಂಬದಿಗೆ ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇನ್ನು ರೂಪಾ ಇದು ತನ್ನ ಹತ್ಯೆ ಯತ್ನ ಎಂದೇ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ಹಾಗೇ ಇನ್ನೊಂದು ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ನಾದಿಯಾದಲ್ಲಿ ಸ್ಥಳೀಯ ಟಿಎಂಸಿ ಮುಖಂಡನೊಬ್ಬನ ಮೇಲೆ ಗುಂಡಿನ ದಾಳಿಯಾಗಿದ್ದು, ಅವರ ಸ್ಥಿತಿ ಕೂಡ ತೀವ್ರ ಗಂಭೀರವಾಗಿದೆ. ಗಾಯಾಳುವನ್ನು ಸಹದೇವ್ ಮಂಡಲ್ ಎಂದು ಗುರುತಿಸಲಾಗಿದ್ದು, ಸ್ಥಳೀಯ ಟಿಎಂಸಿ ಮುಖಂಡ. ಇವರು ಬೋಗುಲಾ ಗ್ರಾಮ ಪಂಚಾಯಿತಿ ನಂ.2ರ ಸದಸ್ಯೆಯಾದ ಅನಿಮಾ ಮಂಡಲ್ ಪತಿ. ಗುಂಡೇಟಿನಿಂದ ಗಾಯಗೊಂಡು ಬಿದ್ದಿದ್ದ ಸಹದೇವ್ರನ್ನು ಸ್ಥಳೀಯರೇ ರಕ್ಷಣೆ ಮಾಡಿ, ಬಗುಲಾ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆದರೆ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಕೃಷ್ಣನಗರದಲ್ಲಿರುವ ಶಕ್ತಿ ನಗರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮಾರ್ಚ್ 22ರ ಮಧ್ಯರಾತ್ರಿ ನಡೆದ ಬಿರ್ಭೂಮ್ ಹಿಂಸಾಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರೂ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಇಬ್ಬರು ಮಕ್ಕಳೂ ಬೆಂಕಿಯಲ್ಲಿ ಉರಿದು ದಹನಗೊಂಡಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಂತೂ ಈ ಘಟನೆಯಲ್ಲಿ ಪ್ರತಿಪಕ್ಷಗಳ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಆದರೆ ಪೊಲೀಸರ ಪ್ರಕಾರ ಇದು ರಾಜಕೀಯ ಕಾರಣಕ್ಕೆ ನಡೆದ ಹಿಂಸಾಚಾರವಲ್ಲ. ಸದ್ಯ ಪ್ರಕರಣದ ತನಿಖೆಯನ್ನು ಎಲ್ಲ ರೀತಿಯ ಆಯಾಮಗಳಿಂದಲೂ ನಡೆಸಲಾಗುತ್ತಿದೆ.
ಇದನ್ನೂ ಓದಿ: ಬೆಟ್ಟ ಹತ್ತುತ್ತಿದ್ದ ಪಾದಯಾತ್ರಿಗಳ ಮೇಲೆರಗಿದ ದೈತ್ಯ ಹಾವು; ಮುಂದೆ ಆಗಿದ್ದೇನು..! ಇಲ್ಲಿದೆ ನೋಡಿ ವೈರಲ್ ವಿಡಿಯೋ
Published On - 9:41 am, Thu, 24 March 22