ಬಿರ್ಭೂಮ್​ ಹಿಂಸಾಚಾರ; ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಜೋಡಿ ಸಜೀವ ದಹನ, ಪಾರಾಗುವ ಪ್ರಯತ್ನ ಫಲಿಸಲಿಲ್ಲ

ಮಧ್ಯರಾತ್ರಿ ಹೊತ್ತಿಗೆ ಗಲಾಟೆ ಶುರುವಾಗಿ ಇವರಿದ್ದ ಮನೆಯನ್ನೂ ಯಾರೋ ಲಾಕ್​ ಮಾಡಿದರು. ಕೂಡಲೇ ಸಜಿದುರ್ ತನ್ನ ಸ್ನೇಹಿತ ಮಜಿಮ್​ ಎಂಬುವನಿಗೆ ಕರೆ ಮಾಡಿ, ಯಾರೋ ನಮ್ಮ ಮನೆಯನ್ನು ಲಾಕ್​ ಮಾಡಿದ್ದಾರೆ. ಈಗಾಗಲೇ ಬೆಂಕಿಯನ್ನೂ ಹಚ್ಚಿದ್ದಾರೆ ಎಂದೂ ಹೇಳಿದ್ದರು.

ಬಿರ್ಭೂಮ್​ ಹಿಂಸಾಚಾರ; ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಜೋಡಿ ಸಜೀವ ದಹನ, ಪಾರಾಗುವ ಪ್ರಯತ್ನ ಫಲಿಸಲಿಲ್ಲ
ಬಿರ್ಭೂಮ್​ ಹಿಂಸಾಚಾರದಲ್ಲಿ ಮೃತಪಟ್ಟ ಜೋಡಿ (ಫೋಟೋ ಕೃಪೆ: ಇಂಡಿಯಾ ಟುಡೆ)
Follow us
| Updated By: Lakshmi Hegde

Updated on:Mar 24, 2022 | 8:33 AM

ಬಿರ್ಭೂಮ್​ ಹಿಂಸಾಚಾರ ದೇಶವನ್ನೇ ನಲುಗಿಸಿದೆ. ಬರೋಸಾಲ್​ ಗ್ರಾಮ ಪಂಚಾಯಿತಿ ಉಪಾಧ್ಯಕ್ಷನ ಹತ್ಯೆಯಿಂದ ರೊಚ್ಚಿಗೆದ್ದ ಅವರ ಬೆಂಬಲಿಗರು ರಾಂಪುರಹತ್​​ನಲ್ಲಿ ಹಿಂಸಾಚಾರ ಸೃಷ್ಟಿಸಿದ್ದಷ್ಟೇ ಅಲ್ಲದೆ, ಭಗ್ಟುಯಿ ಮತ್ತು ನನೂರ್​​ ಗ್ರಾಮಗಳಲ್ಲಿ ಹಲವು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಲ್ಲಿ ಇಬ್ಬರು ಮಕ್ಕಳೂ ಸೇರಿ 8 ಮಂದಿ ಸಜೀವದಹನಗೊಂಡಿದ್ದಾರೆ. ಹೊಸದಾಗಿ ಮದುವೆಯಾದ ಜೋಡಿಯೊಂದು ಈ ದುರಂತಕ್ಕೆ ಬಲಿಯಾಗಿದ್ದು ಅವರ ಕುಟುಂಬದವರು, ಸಂಬಂಧಿಕರ ಶೋಕವೀಗ ಮುಗಿಲುಮುಟ್ಟಿದೆ. ಲಿಲಿ ಖಾಟೂನ್​ ಮತ್ತು ಖಾಜಿ ಸಜಿದೂರ್​​ ಮೃತರಾಗಿದ್ದು, ಇವರು ಜನವರಲ್ಲಿ ವಿವಾಹವಾಗಿದ್ದರು. ಭಗ್ಟುಯಿ ಗ್ರಾಮದಲ್ಲಿರುವ ಲಿಲಿ ಖಾಟೂನ್​​ರ ತಾಯಿಯ ಮನೆಗೆ ಭೇಟಿ ಕೊಟ್ಟಿದ್ದರು.

ಆದರೆ ಮಧ್ಯರಾತ್ರಿ ಹೊತ್ತಿಗೆ ಗಲಾಟೆ ಶುರುವಾಗಿ ಇವರಿದ್ದ ಮನೆಯನ್ನೂ ಯಾರೋ ಲಾಕ್​ ಮಾಡಿದರು. ಕೂಡಲೇ ಸಜಿದುರ್ ತನ್ನ ಸ್ನೇಹಿತ ಮಜಿಮ್​ ಎಂಬುವನಿಗೆ ಕರೆ ಮಾಡಿ, ಯಾರೋ ನಮ್ಮ ಮನೆಯನ್ನು ಲಾಕ್​ ಮಾಡಿದ್ದಾರೆ. ಈಗಾಗಲೇ ಬೆಂಕಿಯನ್ನೂ ಹಚ್ಚಿದ್ದಾರೆ. ಕೂಡಲೇ ಪೊಲೀಸರಿಗೆ ಕರೆ ಮಾಡು ಎಂದು ಹೇಳಿದ್ದಾರೆ. ಮಜೀಮ್​ ಕೂಡಲೇ ಸಜಿದುರ್​ ತಂದೆಗೆ ಕರೆಮಾಡಿ ವಿಷಯ ತಿಳಿಸಿದ್ದಾನೆ. ಅವರು ಮತ್ತೆ ವಾಪಸ್​ ಸಜಿದುರ್​ಗೆ ಫೋನ್​ ಮಾಡಿದರೆ ಕನೆಕ್ಟ್ ಆಗಲಿಲ್ಲ. ಆದರೆ ಬಳಿಕ ಮುಂಜಾನೆಯೇ ಆ ಸ್ಥಳಕ್ಕೆ ಬಂದರೆ ಸಜಿದುರ್​ ಮತ್ತು ಅವರ ಪತ್ನಿಯ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ರಾಷ್ಟ್ರೀಯ ಹೆದ್ದಾರಿಯ ಅಂಗಡಿಯೊಂದರಲ್ಲಿ ನಿಂತಿದ್ದ ಉಪಾಧ್ಯಕ್ಷ ಭಡು ಶೇಖ್​ ಅವರನ್ನು, ಬೈಕ್​ನಲ್ಲಿ ಬಂದ ನಾಲ್ವರು ಮುಸುಕುಧಾರಿಗಳು ಕಚ್ಚಾ  ಬಾಂಬ್​ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಆದರೆ ಭಡು ಶೇಖ್​ ಬೆಂಬಲಿಗರು ಮಾತ್ರ ತಾಳ್ಮೆ ಕಳೆದುಕೊಂಡು 12 ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಇಟ್ಟಿದ್ದಾರೆ.  ಇಲ್ಲಿಯವರೆಗೆ ಘಟನೆಗೆ ಸಂಬಂಧಪಟ್ಟಂತೆ ಸುಮಾರು 20 ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ಪ್ರಕರಣವನ್ನು ಕೋಲ್ಕತ್ತ ಹೈಕೋರ್ಟ್ ಸುಮೊಟೊ (ಸ್ವಯಂಪ್ರೇರಿತ) ವಿಚಾರಣೆ ನಡೆಸಿತು. ಸೂಕ್ತ ವಿಚಾರಣೆ ನಡೆದು, ತೀರ್ಪು ಹೊರಬರಬೇಕು ಎಂದರೆ ಸಾಕ್ಷಿಗಳನ್ನು ಸಂರಕ್ಷಿಸಬೇಕು. ಹೀಗಾಗಿ ಕ್ರೈಂ-ಹಿಂಸಾಚಾರ ನಡೆದ ಸ್ಥಳಗಳನ್ನು ಎಲ್ಲ ಆಯಾಮಗಳಿಂದಲೂ ತೋರಿಸುವ ರೀತಿಯಲ್ಲಿ ಆ ಜಾಗದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ಸಾಕ್ಷಿ ನಾಶಕ್ಕೆ ಅವಕಾಶ ಕೊಡಬಾರದು ಮತ್ತು ಈ ಕೆಲಸವನ್ನು ಜಿಲ್ಲಾ ನ್ಯಾಯಾಧೀಶರಾದ ಪುರ್ಬಾ ಭುರ್ದಾವನ್ ಸಮ್ಮುಖದಲ್ಲಿಯೇ ನಡೆಸಬೇಕು ಎಂದು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಇದನ್ನೂ ಓದಿ: ‘ಜೇಮ್ಸ್​​’ ಚಿತ್ರ ತೆಗೆಯದಂತೆ ಫಿಲ್ಮ್ ಚೇಂಬರ್​ಗೆ ಸಿಎಂ ಕಚೇರಿಯಿಂದ ಫೋನ್​​ ಕರೆ; ಮಹತ್ವದ ಸಭೆಗೆ ಸಿದ್ಧತೆ

Published On - 8:22 am, Thu, 24 March 22