ಗೋಹತ್ಯೆ ಆರೋಪ: ಮಧ್ಯಪ್ರದೇಶದಲ್ಲಿ ಬುಡಕಟ್ಟು ಜನಾಂಗದ ಇಬ್ಬರು ವ್ಯಕ್ತಿಗಳನ್ನು ಹೊಡೆದು ಕೊಂದ ಜನ

| Updated By: ರಶ್ಮಿ ಕಲ್ಲಕಟ್ಟ

Updated on: May 03, 2022 | 8:42 PM

15-20 ಜನರ ಗುಂಪೊಂದು ಸಂತ್ರಸ್ತರ ಮನೆಗೆ ಹೋಗಿ ಹಸುವನ್ನು ಕೊಂದಿದ್ದಾರೆಂದು ಆರೋಪಿಸಿ ಅವರ ಮೇಲೆ ಹಲ್ಲೆ ನಡೆಸಿದೆ. ಇಬ್ಬರು ವ್ಯಕ್ತಿಗಳು ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದರು.

ಗೋಹತ್ಯೆ ಆರೋಪ: ಮಧ್ಯಪ್ರದೇಶದಲ್ಲಿ ಬುಡಕಟ್ಟು ಜನಾಂಗದ ಇಬ್ಬರು ವ್ಯಕ್ತಿಗಳನ್ನು ಹೊಡೆದು ಕೊಂದ ಜನ
ಪ್ರಾತಿನಿಧಿಕ ಚಿತ್ರ
Follow us on

ಭೋಪಾಲ್: ಮಧ್ಯಪ್ರದೇಶದ (Madhya Pradesh) ಸಿಯೋನಿ ಜಿಲ್ಲೆಯಲ್ಲಿ ಗೋಹತ್ಯೆ (cow slaughter) ಆರೋಪದ ಮೇಲೆ ಬುಡಕಟ್ಟು ಜನಾಂಗದ (Tribals) ಇಬ್ಬರು ವ್ಯಕ್ತಿಗಳನ್ನು ಹೊಡೆದು ಕೊಂದ ಘಟನೆ ನಡೆದಿದೆ. ಈ ದಾಳಿಯಲ್ಲಿ ಮತ್ತೊಬ್ಬ ವ್ಯಕ್ತಿ  ಗಾಯಗೊಂಡಿದ್ದು ಸುಮಾರು 20 ಮಂದಿ ದಾಳಿ ನಡೆಸಿದ್ದರು ಎಂದಿದ್ದಾರೆ ಪೊಲೀಸರು. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾಂಗ್ರೆಸ್ ಶಾಸಕ ಅರ್ಜುನ್ ಸಿಂಗ್ ಕಕೋಡಿಯಾ ಜಬಲ್‌ಪುರ-ನಾಗ್ಪುರ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ಸಿಯೋನಿ ಪೊಲೀಸ್ ಮುಖ್ಯಸ್ಥರು ಮತ್ತು ಇತರ ಅಧಿಕಾರಿಗಳು ಸಂತ್ರಸ್ತರ ಮನೆಗೆ ಭೇಟಿ ನೀಡಿದ್ದಾರೆ.20 ಜನರ ಮೇಲೆ ಆರೋಪ ಹೊರಿಸಲಾಗಿದ್ದು, ಅವರಲ್ಲಿ ಆರು ಮಂದಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಡಕಟ್ಟು ಜನಾಂಗದ “ಇಬ್ಬರು ಪುರುಷರು ಸಾವನ್ನಪ್ಪಿದ್ದಾರೆ. 15-20 ಜನರ ಗುಂಪೊಂದು ಸಂತ್ರಸ್ತರ ಮನೆಗೆ ಹೋಗಿ ಹಸುವನ್ನು ಕೊಂದಿದ್ದಾರೆಂದು ಆರೋಪಿಸಿ ಅವರ ಮೇಲೆ ಹಲ್ಲೆ ನಡೆಸಿದೆ. ಇಬ್ಬರು ವ್ಯಕ್ತಿಗಳು ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದರು ಮತ್ತು ಇನ್ನೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಕೆ.ಮಾರಾವಿ ತಿಳಿಸಿದ್ದಾರೆ.  ಕೊಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಾಗಿ ಪೊಲೀಸ್ ತಂಡಗಳು ಶೋಧ ನಡೆಸುತ್ತಿವೆ. ಆರೋಪಿಗಳಲ್ಲಿ ಕೆಲವರನ್ನು ಹೆಸರಿಸಲಾಗಿದೆ (ದೂರಿನಲ್ಲಿ) ಮತ್ತು ಇತರರು ಅಪರಿಚಿತರು. ಎರಡು-ಮೂರು ಶಂಕಿತರನ್ನು ವಶಕ್ಕೆ ಪಡೆದಿದ್ದೇವೆ. ಸಂತ್ರಸ್ತರ ಮನೆಯಲ್ಲಿ ಸುಮಾರು 12 ಕೆಜಿ ಮಾಂಸ ಪತ್ತೆಯಾಗಿದೆ ಎಂದು ಮಾರಾವಿ ಹೇಳಿದ್ದಾರೆ.

ಜನರ ಗುಂಪೊಂದು ಬುಡಕಟ್ಟು ಜನಾಂಗದ ಇಬ್ಬರು ವ್ಯಕ್ತಿಗಳಾದ ಸಂಪತ್ ಬಟ್ಟಿ ಮತ್ತು ಧನ್ಸಾ ಅವರನ್ನು ದೊಣ್ಣೆಗಳಿಂದ ಅಮಾನುಷವಾಗಿ ಥಳಿಸಿದೆ. ಅಲ್ಲಿಗೆ ಹೋದಾಗ ನನ್ನ ಮೇಲೂ ಹಲ್ಲೆ ನಡೆದಿದೆ ಎಂದು ದಾಳಿಯಲ್ಲಿ ಗಾಯಗೊಂಡಿರುವ ದೂರುದಾರ ಬ್ರಜೇಶ್ ಬತ್ತಿ ಹೇಳಿದ್ದಾರೆ.

ಉನ್ನತ ಮಟ್ಟದ ತನಿಖೆ ನಡೆಸಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. “ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಯನ್ನು ಘೋಷಿಸುವ ಮೂಲಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾನು ಸರ್ಕಾರದಿಂದ ಒತ್ತಾಯಿಸುತ್ತೇನೆ. ಸಂತ್ರಸ್ತರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಬೇಕು ಮತ್ತು ಗಾಯಗೊಂಡ ವ್ಯಕ್ತಿಗೆ ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು.ಈ ಘಟನೆಯ ಹಿಂದೆ ಬಜರಂಗದಳದ ಕೈವಾಡವಿದೆ ಎಂದು ಕೆಲವು ಸ್ಥಳೀಯರು ಆರೋಪಿಸಿದ್ದಾರೆ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಹೇಳಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಅಂಕಿಅಂಶಗಳ ಪ್ರಕಾರ ಮಧ್ಯಪ್ರದೇಶವು ಬುಡಕಟ್ಟು ಜನಾಂಗದವರ ವಿರುದ್ಧ ಅತಿ ಹೆಚ್ಚು ಅಪರಾಧಗಳನ್ನು ಹೊಂದಿದೆ ಎಂದು ಕಮಲ್ ನಾಥ್ ಹೇಳಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ