ಮೋದಿ ಜತೆಗಿನ ಒಂದೇ ಒಂದು ಮಾತು: ಪಾಕ್ನ ಮಹತ್ವ ಯೋಜನೆ ಭಾರತಕ್ಕೆ ತಂದ ಯುಎಇ
ಯುಎಇ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿ ಪಾಕಿಸ್ತಾನದ ವಿಮಾನ ನಿಲ್ದಾಣ ಒಪ್ಪಂದದಿಂದ ಹಿಂದೆ ಸರಿದಿದ್ದಾರೆ. ಭಾರತದ ಸ್ಥಿರ ಆರ್ಥಿಕತೆಯ ಮೇಲೆ ನಂಬಿಕೆ ಇಟ್ಟು, $200 ಬಿಲಿಯನ್ ವ್ಯಾಪಾರ ಗುರಿ ಹೊಂದಿರುವ ಯುಎಇ, ರಕ್ಷಣೆ, ಬಾಹ್ಯಾಕಾಶ ಮತ್ತು ತಂತ್ರಜ್ಞಾನದಲ್ಲಿ ಭಾರತದೊಂದಿಗೆ ಮಹತ್ವದ ಒಪ್ಪಂದಗಳನ್ನು ಮಾಡಿಕೊಂಡಿದೆ. ಇದು ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ನೀಡಿದ್ದು, ಭಾರತದ ಭೌಗೋಳಿಕ ರಾಜಕೀಯ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದೆ.

ದೆಹಲಿ, ಜ.26: 77ನೇ ಗಣರಾಜ್ಯೋತ್ಸವದ (2026) ಹೊತ್ತಿನಲ್ಲೇ ದಕ್ಷಿಣ ಏಷ್ಯಾದ ಭೌಗೋಳಿಕ ರಾಜಕೀಯದಲ್ಲಿ ಒಂದು ಮಹತ್ವದ ಬೆಳವಣಿಗೆ ನಡೆದಿದೆ. ಯುಎಇ (UAE) ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಭಾರತಕ್ಕೆ ಅನಿರೀಕ್ಷಿತ ಭೇಟಿ ನೀಡಿದ ಬೆನ್ನಲ್ಲೇ, ಪಾಕಿಸ್ತಾನದ ವಿಮಾನ ನಿಲ್ದಾಣದ ಒಪ್ಪಂದದಿಂದ ಯುಎಇ ಹಿಂದೆ ಸರಿದಿದೆ . ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಯುಎಇಗೆ ಹಸ್ತಾಂತರಿಸಲು ಮಾತುಕತೆ ನಡೆದಿತ್ತು. ಈ ಒಪ್ಪಂದವು ಸುಮಾರು ಆಗಸ್ಟ್ 2025 ರಿಂದ ಚರ್ಚೆಯಲ್ಲಿತ್ತು. ಇತ್ತೀಚಿನ ವರದಿಗಳ ಪ್ರಕಾರ, ಈ ಒಪ್ಪಂದದ ಮಾತುಕತೆಗಳು ವಿಫಲವಾಗಿವೆ. ಯುಎಇ ಈ ಯೋಜನೆಯಿಂದ ಹಿಂದೆ ಸರಿಯಲು ನಿರ್ಧರಿಸಿದೆ, ಇದು ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ನೀಡಿದೆ.
ಜನವರಿ 19, 2026 ರಂದು ಯುಎಇ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿ ಪ್ರಧಾನಿ ಮೋದಿಯವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಈ ಚರ್ಚೆಯ ನಂತರ ಯುಎಇ ಈಗ ಪಾಕಿಸ್ತಾನದಂತಹ ಸಾಲದ ಸುಳಿಯಲ್ಲಿರುವ ದೇಶಗಳಿಗಿಂತ ಭಾರತದಂತಹ ಸ್ಥಿರ ಮತ್ತು ಬೆಳೆಯುತ್ತಿರುವ ಆರ್ಥಿಕತೆಯ ಮೇಲೆ ಹೆಚ್ಚು ನಂಬಿಕೆ ಇಟ್ಟಿದೆ ಎಂದು ಹೇಳಲಾಗಿದೆ. ಭಾರತದೊಂದಿಗೆ $200 ಬಿಲಿಯನ್ (Rs. 16,60,000 Crore) ವ್ಯಾಪಾರದ ಗುರಿಯನ್ನು ಯುಎಇ ಹೊಂದಿದೆ. ಈ ಹಿಂದೆ ಯುಎಇ ಪಾಕಿಸ್ತಾನಕ್ಕೆ ಆಪ್ತ ಮಿತ್ರನಾಗಿತ್ತು. ಆದರೆ ಈಗ ರಕ್ಷಣೆ, ತಂತ್ರಜ್ಞಾನ ಮತ್ತು ಶಕ್ತಿಯ ಕ್ಷೇತ್ರದಲ್ಲಿ ಭಾರತದೊಂದಿಗೆ ಯುಎಇ ಮಾಡಿಕೊಳ್ಳುತ್ತಿರುವ ದೊಡ್ಡ ಒಪ್ಪಂದಗಳು ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಏಕಾಂಗಿ ಮಾಡುತ್ತಿವೆ.
ಗುಜರಾತ್‌ನ ಧೋಲೇರಾದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿಪಡಿಸಲು ಯುಎಇ ಆಸಕ್ತಿ ತೋರಿದೆ. ಅಂದರೆ ಪಾಕಿಸ್ತಾನದಲ್ಲಿ ಹೂಡಿಕೆ ಮಾಡಬೇಕಿದ್ದ ಹಣ ಈಗ ಭಾರತದ ಕಡೆಗೆ ಹರಿಯುತ್ತಿದೆ. ಈ ಮೂಲಕ ಯುಎಇ ಅಧ್ಯಕ್ಷರ ಭೇಟಿಯು ಭಾರತದ ಪಾಲಿಗೆ ಅತ್ಯಂತ ಯಶಸ್ವಿಯಾಗಿದೆ. ಅದರಲ್ಲೂ ವಿಶೇಷವಾಗಿ ರಕ್ಷಣೆ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಆಗಿರುವ ಒಪ್ಪಂದಗಳು ಭಾರತವನ್ನು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿವೆ.
ಭಾರತ – ಯುಎಇ ಪ್ರಮುಖ ಒಪ್ಪಂದಗಳ:
ಭಾರತದ ‘ಮೇಕ್ ಇನ್ ಇಂಡಿಯಾ’ ಅಡಿಯಲ್ಲಿ ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನ ಮತ್ತು ಲಘು ಶಸ್ತ್ರಾಸ್ತ್ರಗಳನ್ನು (Small Arms) ಜಂಟಿಯಾಗಿ ತಯಾರಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ. ಇವುಗಳನ್ನು ಭಾರತ ಮತ್ತು ಯುಎಇ ಸೇನೆಗಳು ಬಳಸುವುದಲ್ಲದೆ, ಇತರ ದೇಶಗಳಿಗೂ ರಫ್ತು ಮಾಡುವ ಗುರಿ ಹೊಂದಲಾಗಿದೆ.ಯುಎಇಯ ಗಗನಯಾತ್ರಿಗಳಿಗೆ ಭಾರತದ ಇಸ್ರೋ (ISRO) ತರಬೇತಿ ನೀಡುವ ಬಗ್ಗೆ ಒಪ್ಪಂದವಾಗಿದೆ. ಮುಂದಿನ ದಿನಗಳಲ್ಲಿ ಭಾರತದ ‘ಗಗನ್ಯಾನ್’ ನೌಕೆಯಲ್ಲಿ ಯುಎಇಯ ಗಗನಯಾತ್ರಿಯೊಬ್ಬರು ಪ್ರಯಾಣಿಸುವ ಸಾಧ್ಯತೆಯಿದೆ. ಕೃತಕ ಬುದ್ಧಿಮತ್ತೆ (AI) ಬಳಸಿ ಸೈಬರ್ ದಾಳಿಗಳನ್ನು ತಡೆಯಲು ಮತ್ತು ಸಮುದ್ರ ಮಾರ್ಗದ ಭದ್ರತೆಯನ್ನು (Maritime Security) ಹೆಚ್ಚಿಸಲು ಜಂಟಿ ಕಾರ್ಯಪಡೆ ರಚಿಸಲಾಗಿದೆ.
ಇದನ್ನೂ ಓದಿ: ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾಗೆ ಅಶೋಕ ಚಕ್ರ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಪಾಕಿಸ್ತಾನದ ಇತ್ತೀಚಿನ ಆರ್ಥಿಕ ಸ್ಥಿತಿ:
ಪಾಕಿಸ್ತಾನವು ಚೀನಾ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಗೆ ನೀಡಬೇಕಾದ ಸಾಲದ ಕಂತುಗಳನ್ನು ತೀರಿಸಲು ಹೆಣಗಾಡುತ್ತಿದೆ. ದೇಶದ ಒಟ್ಟು ಆದಾಯದ ಬಹುಪಾಲು ಸಾಲದ ಬಡ್ಡಿಯನ್ನು ಕಟ್ಟಲೇ ವ್ಯಯವಾಗುತ್ತಿದೆ. ಇದೀಗ ಯುಎಇ ಅಧ್ಯಕ್ಷರು ಪಾಕಿಸ್ತಾನಕ್ಕೆ ಭೇಟಿ ನೀಡುವ ಬದಲು ಭಾರತಕ್ಕೆ ಬಂದಿರುವುದು, ಹೂಡಿಕೆದಾರರಿಗೆ ಪಾಕಿಸ್ತಾನವು ಹೂಡಿಕೆಗೆ ಸುರಕ್ಷಿತವಲ್ಲ ಎಂಬ ಸಂದೇಶ ನೀಡಿದೆ.ತನ್ನ ಆರ್ಥಿಕತೆಯನ್ನು ಉಳಿಸಿಕೊಳ್ಳಲು ಪಾಕಿಸ್ತಾನವು ತನ್ನ ಪ್ರಮುಖ ಬಂದರುಗಳು (Ports) ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ವಿದೇಶಿ ಕಂಪನಿಗಳಿಗೆ ಗುತ್ತಿಗೆ ನೀಡಲು ಪ್ರಯತ್ನಿಸುತ್ತಿದೆ, ಆದರೆ ಇದಕ್ಕೆ ಸರಿಯಾದ ಪ್ರತಿಕ್ರಿಯೆ ಸಿಗುತ್ತಿಲ್ಲ.
ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
