ಮುಂಬೈ: ವಿಮಾನಕ್ಕೆ ಟಿಕೆಟ್ ಬುಕ್ ಮಾಡಿದ್ದ ಮುಂಬೈನ ಯುವತಿಯೊಬ್ಬರು ಏರ್ಪೋರ್ಟ್ಗೆ ಹೋಗಲು ಉಬರ್ ಕ್ಯಾಬ್ (Uber Cab) ಬುಕ್ ಮಾಡಿದ್ದರು. ಆದರೆ, ಉಬರ್ ಕ್ಯಾಬ್ ಚಾಲಕ ಬರುವುದು ತಡವಾಗಿದ್ದರಿಂದ ಆಕೆಯ ವಿಮಾನ ಮಿಸ್ ಆಗಿತ್ತು. ಇದರಿಂದಾಗಿ ತುರ್ತು ಕೆಲಸದ ನಿಮಿತ್ತ ಬೇರೆ ಊರಿಗೆ ಹೊರಟಿದ್ದ ಆಕೆ ಆ ದಿನ ವಿಮಾನದಲ್ಲಿ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಉಬರ್ ಸಂಸ್ಥೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಆಕೆಗೆ ಕೊನೆಗೂ ನ್ಯಾಯ ಸಿಕ್ಕಿದೆ. ತಡವಾಗಿ ಕ್ಯಾಬ್ ಸೇವೆಯನ್ನು ನೀಡಿದ ಕಾರಣದಿಂದ ಆಕೆಯ ವಿಮಾನ ಮಿಸ್ ಆಗಿದ್ದಕ್ಕೆ ಆ ಯುವತಿಗೆ 20,000 ರೂ. ಪರಿಹಾರ ಧನವನ್ನು ನೀಡಲು ಉಬರ್ಗೆ ಗ್ರಾಹಕರ ನ್ಯಾಯಾಲಯ ಆದೇಶಿಸಿದೆ.
ಮುಂಬೈನ ಗ್ರಾಹಕ ನ್ಯಾಯಾಲಯವು ಉಬರ್ ಇಂಡಿಯಾಗೆ ಕ್ಯಾಬ್ ಸೇವೆಯಿಂದ ಉಂಟಾದ ವಿಳಂಬದಿಂದಾಗಿ ತನ್ನ ವಿಮಾನವನ್ನು ಮಿಸ್ ಮಾಡಿಕೊಂಡ ಯುವತಿಗೆ 20,000 ರೂ. ದಂಡವನ್ನು ಪಾವತಿಸುವಂತೆ ಆದೇಶಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ಮೊತ್ತದ ಅರ್ಧದಷ್ಟು ಮೊತ್ತವು ಆ ಯುವತಿಯ ಮಾನಸಿಕ ಒತ್ತಡಕ್ಕೆ, ಉಳಿದ 10,000 ರೂ. ಆಕೆ ಮಾಡಿದ ವ್ಯಾಜ್ಯದ ವೆಚ್ಚಕ್ಕಾಗಿ ನೀಡಲು ಸೂಚಿಸಲಾಗಿದೆ. ಕವಿತಾ ಶರ್ಮ ಎಂಬ ವಕೀಲೆ ತನಗಾದ ಅನ್ಯಾಯಕ್ಕೆ 2018ರಿಂದ ಹೋರಾಡುತ್ತಿದ್ದರು. ಕೊನೆಗೂ ಅವರಿಗೆ ಜಯ ಲಭಿಸಿದೆ.
ಇದನ್ನೂ ಓದಿ: ಓಲಾ, ಉಬರ್ಗೆ ಮೂಗುದಾರ: 2 ಕಿಮೀಗೆ 30 ರೂಪಾಯಿ ನಿಗದಿ, ಶೀಘ್ರ ಹೊಸ ದರಪಟ್ಟಿ
2018ರ ಜೂನ್‌ನಲ್ಲಿ ಮುಂಬೈನಿಂದ ಚೆನ್ನೈಗೆ ಹೋಗಲು ಅವರು ವಿಮಾನದ ಟಿಕೆಟ್ ಬುಕ್ ಮಾಡಿದ್ದರು. ಆದರೆ ಕ್ಯಾಬ್ ಬರುವುದು ತಡವಾಗಿದ್ದರಿಂದ ಸಮಯಕ್ಕೆ ವಿಮಾನ ನಿಲ್ದಾಣವನ್ನು ತಲುಪಲು ಅವರಿಗೆ ಸಾಧ್ಯವಾಗಲಿಲ್ಲ. 2018ರ ಜೂನ್ 12ರಂದು ಸಂಜೆ 5.50ಕ್ಕೆ ವಿಮಾನವು ಹೊರಡಬೇಕಿತ್ತು. ತನ್ನ ಮನೆಯಿಂದ 36 ಕಿಮೀ ದೂರದಲ್ಲಿರುವ ವಿಮಾನ ನಿಲ್ದಾಣಕ್ಕೆ ಆಕೆ ಮಧ್ಯಾಹ್ನ 3.29ಕ್ಕೆ ಕ್ಯಾಬ್ ಅನ್ನು ಬುಕ್ ಮಾಡಿದ್ದರು. ಆದರೆ ಆ ಚಾಲಕ 14 ನಿಮಿಷಗಳ ನಂತರ ಅವರಿದ್ದ ಜಾಗಕ್ಕೆ ಬಂದನು. ಅದಕ್ಕೂ ಮೊದಲು ಎಷ್ಟೇ ಬಾರಿ ಕರೆ ಮಾಡಿದರೂ ಆತ ಸ್ವೀಕರಿಸಿರಲಿಲ್ಲ.
ಇದನ್ನೂ ಓದಿ: ಕುಡಿದ ಅಮಲಿನಲ್ಲಿ ವಿಮಾನ ಸಿಬ್ಬಂದಿಯ ಬೆರಳು ಕಚ್ಚಿದ ಪ್ರಯಾಣಿಕನ ವಿಡಿಯೋ ವೈರಲ್
ಫೋನ್ ಕರೆಯಲ್ಲಿದ್ದ ಕಾರಣ ಚಾಲಕ ಟ್ರಿಪ್ ಆರಂಭಿಸಲು ತಡಮಾಡಿದ್ದಾನೆ ಎಂದು ಕವಿತಾ ಶರ್ಮ ದೂರಿನಲ್ಲಿ ತಿಳಿಸಿದ್ದಾರೆ. ತಡವಾಗಿ ಬಂದಿದ್ದು ಮಾತ್ರವಲ್ಲದೆ ವಿಮಾನ ನಿಲ್ದಾಣಕ್ಕೆ ಹೋಗುವಾಗ ಆತ ಯಾವುದೋ ತಪ್ಪು ಮಾರ್ಗದಲ್ಲಿ ಹೋಗಿ ಇನ್ನೂ 15-20 ನಿಮಿಷ ತಡವಾಗಿ ಏರ್ಪೋರ್ಟ್ ತಲುಪಿದನು. ಕವಿತಾ ಶರ್ಮಾ ವಿಮಾನ ನಿಲ್ದಾಣವನ್ನು ತಲುಪುವ ಹೊತ್ತಿಗೆ, ಆಗಲೇ ಸಂಜೆ 5.23 ಆಗಿತ್ತು. ಅಷ್ಟರಲ್ಲಾಗಲೇ ಚೆಕ್ ಇನ್ ಮುಗಿದಿದ್ದರಿಂದ ಅವರಿಗೆ ಆ ವಿಮಾನದಲ್ಲಿ ಹೋಗಲು ಸಾಧ್ಯವಾಗಲಿಲ್ಲ.
ಆ ಕ್ಯಾಬ್ ಬುಕ್ ಮಾಡುವಾಗ ವಿಮಾನ ನಿಲ್ದಾಣಕ್ಕೆ 563 ರೂ. ಎಂದು ತೋರಿಸಿತ್ತು. ಆದರೆ, ಆ ಕ್ಯಾಬ್ ಚಾಲಕ ತಪ್ಪು ದಾರಿಯಲ್ಲಿ ಕರೆದುಕೊಂಡು ಬಂದಿದ್ದರಿಂದ ವಿಮಾನವನ್ನು ಮಿಸ್ ಮಾಡಿಕೊಂಡಿದ್ದಷ್ಟೇ ಅಲ್ಲದೆ ಕವಿತಾ ಶರ್ಮ ಅವರಿಗೆ 703 ರೂ. ಬಿಲ್ ಮಾಡಿತು. ಇದರಿಂದ ಕವಿತಾ ಶರ್ಮ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು.
Published On - 11:52 am, Thu, 27 October 22