ರಾಜಸ್ಥಾನದ ಉದಯ್ಪುರದಲ್ಲಿ ನಡೆದ ಟೈಲರ್ ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿಗಳು ಹೊರಬಿದ್ದಿವೆ. ಹತ್ಯೆಗೀಡಾದ ಕನ್ಹಯ್ಯಾ ಲಾಲ್ ಪ್ರಾಥಮಿಕ ಮರಣೋತ್ತರ ಪರೀಕ್ಷೆ ವರದಿ ಹೊರಬಿದ್ದಿದ್ದು, ವರದಿಯಲ್ಲಿ ಕನ್ಹಯ್ಯಾ ದೇಹದಲ್ಲಿ 26 ಗಾಯದ ಗುರುತುಗಳಿರುವುದು ತಿಳಿದುಬಂದಿದೆ.
ಕನ್ಹಯ್ಯಾ ಲಾಲ್ ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ, ಅನೇಕ ಮಾಹಿತಿಗಳು ಬಹಿರಂಗವಾಗಿವೆ. ದೇಹದ ಮೇಲೆ ಎರಡು ಡಜನ್‌ಗಿಂತಲೂ ಹೆಚ್ಚು ಗಾಯದ ಗುರುತುಗಳು ಕಂಡುಬಂದಿವೆ. ವರದಿ ಪ್ರಕಾರ ಆರೋಪಿಗಳು ಕನ್ಹಯ್ಯಾ ಲಾಲ್ ಕುತ್ತಿಗೆಗೆ ಏಳರಿಂದ ಎಂಟು ಕಡೆ ಇರಿಯಲಾಗಿತ್ತು.
ಆರೋಪಿಗಳು ಕನ್ಹಯ್ಯಾ ಲಾಲ್ ಕುತ್ತಿಗೆ, ತಲೆ, ತೋಳುಗಳು, ಬೆನ್ನು ಮತ್ತು ಎದೆಗೆ ಇರಿದಿದ್ದರು. ಕನ್ಹಯ್ಯಾ ಲಾಲ್ ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ರಿಯಾಜ್ ಅಖ್ತರಿ ಮತ್ತು ಗೌಸ್ ಮೊಹಮ್ಮದ್ ದಾಳಿ ನಡೆಸಿದ್ದರು.
ಚಾಕುವಿನಿಂದ ಇರಿದ ರಿಯಾಜ್ ಅಖ್ತರಿ ಮತ್ತು ಘಟನೆಯ ವಿಡಿಯೋ ಮಾಡಿದ ಗೌಸ್ ಮೊಹಮ್ಮದ್ನನ್ನು ಬಂಧಿಸಲಾಗಿದ್ದು, ದಾಳಿಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಭೀಮ್ ಪಟ್ಟಣದಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಇಬ್ಬರನ್ನೂ ಬಂಧಿಸಲಾಗಿದೆ.
ಘಟನೆ ಹಿನ್ನೆಲೆ ಏನು?
ಪ್ರವಾದಿ ಮುಹಮ್ಮದ್ ಕುರಿತು ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಬೆಂಬಲಿಸಿ ಪೋಸ್ಟ್ ಹಾಕಿದ್ದನ್ನು ವಿರೋಧಿಸಿ ಇಬ್ಬರೂ ಆರೋಪಿಗಳು ಟೈಲರ್ ಕನ್ಹಯ್ಯ ಲಾಲ್ ಅವರನ್ನು ಹತ್ಯೆ ಮಾಡಿದ್ದರು.
ಆರೋಪಿಗಳು ಟೈಲರ್ ಹತ್ಯೆಯ ವಿಡಿಯೋ ಕೂಡ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಅದೇ ಸಮಯದಲ್ಲಿ, ರಾಜಸ್ಥಾನದ ಮುಖ್ಯಮಂತ್ರಿ ಈ ವಿಷಯದ ತನಿಖೆಗಾಗಿ ಎಸ್‌ಐಟಿಯನ್ನು ರಚಿಸಿದ್ದರು.
ಇದಾದ ಬಳಿಕ ಬುಧವಾರ ಗೃಹ ಸಚಿವಾಲಯವು ಪ್ರಕರಣದಲ್ಲಿ ಭಯೋತ್ಪಾದಕರ ಕೋನದಿಂದ ತನಿಖೆ ನಡೆಸುವಂತೆ ಎನ್‌ಐಎಗೆ ಆದೇಶ ನೀಡಿದ್ದು, ಬಳಿಕ ಎನ್‌ಐಎ ಕೂಡ ಪ್ರಕರಣದ ತನಿಖೆ ಆರಂಭಿಸಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.
Published On - 11:17 am, Thu, 30 June 22