ಉದ್ಧವ್ ಠಾಕ್ರೆ ರಾಜೀನಾಮೆಯಿಂದ ಸಂತೋಷವಾಗಿಲ್ಲ: ಬಂಡಾಯ ಶಾಸಕ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ವಿಶ್ವಾಸಮತ ಯಾಚನೆಗೂ ಮುನ್ನವೇ ರಾಜೀನಾಮೆ ಘೋಷಿಸಿದಾಗ ಎಲ್ಲರ ಚಿತ್ತ ಬಿಜೆಪಿ ಹಾಗೂ ಬಂಡಾಯ ನಾಯಕರ ಮೇಲಿತ್ತು

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ವಿಶ್ವಾಸಮತ ಯಾಚನೆಗೂ ಮುನ್ನವೇ ರಾಜೀನಾಮೆ ಘೋಷಿಸಿದಾಗ ಎಲ್ಲರ ಚಿತ್ತ ಬಿಜೆಪಿ ಹಾಗೂ ಬಂಡಾಯ ನಾಯಕರ ಮೇಲಿತ್ತು. ಶಿಂಧೆ ಬಣದ ವಕ್ತಾರ ದೀಪಕ್ ಕೇಸರ್ಕರ್ ಮೊದಲ ಬಾರಿಗೆ ತಮ್ಮ ಪ್ರತಿಕ್ರಿಯೆ ನೀಡಿದ್ದು, ಎನ್‌ಡಿಟಿವಿಯೊಂದಿಗೆ ‘ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ರಾಜೀನಾಮೆ ನಮಗೆ ಸಂತೋಷದ ವಿಷಯವಲ್ಲ.
ನಾವು ಯಾವುದೇ ವಿಷಯವನ್ನು ಪ್ರಸ್ತಾಪಿಸಿದರೂ ಠಾಕ್ರೆಯವರು ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಕಾಂಗ್ರೆಸ್ ಹಾಗೂ ಎನ್ಸಿಪಿ ವಿರುದ್ಧ ಹೋರಾಡುವ ಸಂದರ್ಭದಲ್ಲಿ ನಮ್ಮ ನಾಯಕರ ಮೇಲೆಯೇ ಕೋಪಗೊಂಡಿದ್ದೆವು ಅದರಿಂದ ನಮಗೆ ಬೇಸರವಿದೆ ಎಂದರು.
ಎಂದಿಗೂ ಎನ್ಸಿಪಿ ಹಾಗೂ ಸಂಜಯ್ ರಾವತ್ ಕೇಂದ್ರದ ವಿರುದ್ಧ ಕಿಡಿ ಕಾರುತ್ತಾ, ಕೇಂದ್ರ ಹಾಗೂ ರಾಜ್ಯದ ನಡುವೆ ಬೆಂಕಿ ಇಡುವ ಪ್ರಯತ್ನ ಮಾಡುತ್ತಿದ್ದರು.
ಏಕನಾಥ್ ಶಿಂದೆಯವರಿಗೆ 50 ಮಂದಿ ಶಾಸಕರು ಬೆಂಬಲ ನೀಡಿದ್ದು, ಅದರಲ್ಲಿ 40 ಶಾಸಕರು ಶಿವಸೇನೆಯವರಾಗಿದ್ದಾರೆ. 8 ದಿನಗಳ ಹೋರಾಟದ ಬಳಿಕ ಇದೀಗ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮೊದಲು ಏಕನಾಥ್ ಶಿಂಧೆ ನೇತೃತ್ವದಲ್ಲಿ ಸಭೆ ನಡೆಸುತ್ತೇವೆ. ಮುಖ್ಯಮಂತ್ರಿ ಯಾರೆಂದು ಶೀಘ್ರದಲ್ಲೇ ಏಕನಾಥ್ ಶಿಂಧೆ ಘೋಷಿಸಲಿದ್ದಾರೆ. ಉದ್ಧವ್ ಠಾಕ್ರೆ ಅವರೊಂದಿಗೆ ಮಾತನಾಡಬೇಕೆ ಅಥವಾ ಬೇಡವೇ ಎಂಬುದು ಶಿಂಧೆ ಅವರಿಗೆ ಬಿಟ್ಟಿದ್ದು ಎಂದರು.
ಉದ್ಧವ್ ಠಾಕ್ರೆ ರಾಜೀನಾಮೆ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದರ ಜತೆಗೆ ವಿಧಾನ ಪರಿಷತ್ತಿಗೂ ರಾಜೀನಾಮೆ ನೀಡಿದ್ದಾರೆ. ಗವರ್ನರ್ ಭಗತ್ ಸಿಂಗ್ ಕೊಶ್ಯಾರಿ ಅವರು ಬಹುಮತ ಸಾಬೀತು ಪಡಿಸುವ ಆದೇಶ ನೀಡುವಲ್ಲಿ ಆತುರ ತೋರಿಸಿದ್ದಾರೆ ಎಂದು ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (MVA) ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಈ ಬಗ್ಗೆ ಬುಧವಾರ ಸಂಜೆ 5 ಗಂಟೆಗೆ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ರಾತ್ರಿ 9 ಗಂಟೆೆಗೆ ತೀರ್ಪು ಪ್ರಕಟಿಸಿದೆ. ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡುವಂತೆ ರಾಜ್ಯಪಾಲರ ಹೊರಡಿದ್ದ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ಗುರುವಾರ ಬೆಳಗ್ಗೆ 11 ಗಂಟೆಗೆ ಬಹುಮತ ಸಾಬೀತು ಪಡಿಸುವಂತೆ ಠಾಕ್ರೆ ಸರ್ಕಾರಕ್ಕೆ ಹೇಳಿತ್ತು. ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದ ಕೆಲವೇ ಕ್ಷಣಗಳಲ್ಲಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.