2 ವರ್ಷಗಳಲ್ಲಿ 3.5 ಕೋಟಿ ಉದ್ಯೋಗ ಸೃಷ್ಟಿಗೆ ಕೇಂದ್ರ ಸಂಪುಟದಿಂದ 1 ಲಕ್ಷ ಕೋಟಿ ರೂ. ಅನುಮೋದನೆ

ಉದ್ಯೋಗ, ನಾವೀನ್ಯತೆ, ಕ್ರೀಡೆ ಮತ್ತು ಮೂಲಸೌಕರ್ಯಕ್ಕಾಗಿ 3 ಲಕ್ಷ ಕೋಟಿ ರೂ.ಗಳ ಉತ್ತೇಜನವನ್ನು ನೀಡಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಕೇಂದ್ರ ಸರ್ಕಾರದಿಂದ ಉದ್ಯೋಗ ಸಂಬಂಧಿತ ಪ್ರೋತ್ಸಾಹಕ ಯೋಜನೆಗೆ 1 ಲಕ್ಷ ಕೋಟಿ ರೂ.ಗಳ ಅನುಮೋದನೆ ನೀಡಲಾಗಿದೆ. ಎರಡು ವರ್ಷಗಳಲ್ಲಿ 3.5 ಕೋಟಿಗೂ ಹೆಚ್ಚು ಉದ್ಯೋಗಗಳ ಸೃಷ್ಟಿಗೆ ಬೆಂಬಲ ನೀಡುವ ಯೋಜನೆ ಇದಾಗಿದೆ. ಉದ್ಯೋಗ ಸೃಷ್ಟಿಯನ್ನು ಬೆಂಬಲಿಸುವುದು, ಉದ್ಯೋಗಾವಕಾಶವನ್ನು ಸುಧಾರಿಸುವುದು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಮಾಜಿಕ ಭದ್ರತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಉದ್ಯೋಗ ಸಂಬಂಧಿತ ಪ್ರೋತ್ಸಾಹಕ (ಇಎಲ್‌ಐ) ಯೋಜನೆಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.

2 ವರ್ಷಗಳಲ್ಲಿ 3.5 ಕೋಟಿ ಉದ್ಯೋಗ ಸೃಷ್ಟಿಗೆ ಕೇಂದ್ರ ಸಂಪುಟದಿಂದ 1 ಲಕ್ಷ ಕೋಟಿ ರೂ. ಅನುಮೋದನೆ
Ashwini Vaishnaw

Updated on: Jul 01, 2025 | 10:03 PM

ನವದೆಹಲಿ, ಜುಲೈ 1: ಭಾರತದಾದ್ಯಂತ ಉದ್ಯೋಗ, ನಾವೀನ್ಯತೆ, ಕ್ರೀಡಾ ಅಭಿವೃದ್ಧಿ ಮತ್ತು ಮೂಲಸೌಕರ್ಯವನ್ನು ಹೆಚ್ಚಿಸಲು 3 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಮೌಲ್ಯದ ಪ್ರಮುಖ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ (Union Cabinet) ಇಂದು ಅನುಮೋದನೆ ನೀಡಿದೆ. ಈ ಬಗ್ಗೆ ಮಹತ್ವದ ಘೋಷಣೆಯನ್ನು ಮಾಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್  (Ashwini Vaishnaw), ಕೇಂದ್ರ ಸಚಿವ ಸಂಪುಟವು ಒಟ್ಟು 3 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಮೌಲ್ಯದ ಯೋಜನೆಗಳನ್ನು ಅನುಮೋದಿಸಿದೆ ಎಂದಿದ್ದಾರೆ. ಈ ಅನುಮೋದನೆಗಳಲ್ಲಿ ಉದ್ಯೋಗ ಸಂಬಂಧಿತ ಪ್ರೋತ್ಸಾಹಕ (ಇಎಲ್‌ಐ) ಯೋಜನೆ, ಸಂಶೋಧನಾ ಅಭಿವೃದ್ಧಿ ಮತ್ತು ನಾವೀನ್ಯತೆ (ಆರ್‌ಡಿಐ) ಯೋಜನೆ, ರಾಷ್ಟ್ರೀಯ ಕ್ರೀಡಾ ನೀತಿ 2025 ಮತ್ತು ತಮಿಳುನಾಡಿನಲ್ಲಿ ಪ್ರಮುಖ ಮೂಲಸೌಕರ್ಯ ಯೋಜನೆ ಸೇರಿವೆ.

2024-25ರ ಕೇಂದ್ರ ಬಜೆಟ್‌ನ ಭಾಗವಾಗಿ ಘೋಷಿಸಲಾದ ಈ ಯೋಜನೆಯು ಆಗಸ್ಟ್ 2025ರಿಂದ ಜುಲೈ 2027ರ ನಡುವೆ 99,446 ಕೋಟಿ ರೂ. ವೆಚ್ಚದೊಂದಿಗೆ 35 ಮಿಲಿಯನ್‌ಗಿಂತಲೂ ಹೆಚ್ಚು ಉದ್ಯೋಗಗಳ ಸೃಷ್ಟಿಯನ್ನು ಉತ್ತೇಜಿಸುವ ಗುರಿಯನ್ನು ಇದು ಹೊಂದಿದೆ. ಒಟ್ಟು ಫಲಾನುಭವಿಗಳಲ್ಲಿ, ಸುಮಾರು 19 ಮಿಲಿಯನ್ ಉದ್ಯೋಗಿಗಳು ಔಪಚಾರಿಕ ಕಾರ್ಯಪಡೆಗೆ ಪ್ರವೇಶಿಸುವ ಮೊದಲ ಬಾರಿಗೆ ಉದ್ಯೋಗಿಗಳಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಸಚಿವ ಸಂಪುಟ ಹೇಳಿಕೆ ತಿಳಿಸಿದೆ.


ಈ ಯೋಜನೆಯಡಿಯಲ್ಲಿ, ಮೊದಲ ಬಾರಿಗೆ ಉದ್ಯೋಗಿಗಳು ಒಂದು ತಿಂಗಳ ವೇತನವನ್ನು (ರೂ.15,000 ವರೆಗೆ) ಪಡೆಯುತ್ತಾರೆ. ಹೆಚ್ಚುವರಿ ಉದ್ಯೋಗವನ್ನು ಸೃಷ್ಟಿಸಲು ಉದ್ಯೋಗದಾತರಿಗೆ ಎರಡು ವರ್ಷಗಳ ಅವಧಿಗೆ ಪ್ರೋತ್ಸಾಹ ಧನ ನೀಡಲಾಗುವುದು. ಉತ್ಪಾದನಾ ವಲಯಕ್ಕೆ ಇನ್ನೂ ಎರಡು ವರ್ಷಗಳವರೆಗೆ ವಿಸ್ತೃತ ಪ್ರಯೋಜನಗಳನ್ನು ನೀಡಲಾಗುವುದು. 2024-25ರ ಕೇಂದ್ರ ಬಜೆಟ್‌ನಲ್ಲಿ 4.1 ಕೋಟಿ ಯುವಕರಿಗೆ ಉದ್ಯೋಗ, ಕೌಶಲ್ಯ ಮತ್ತು ಇತರ ಅವಕಾಶಗಳನ್ನು ಸುಗಮಗೊಳಿಸುವ 5 ಯೋಜನೆಗಳ ಪ್ಯಾಕೇಜ್‌ನ ಭಾಗವಾಗಿ ELI ಯೋಜನೆಯನ್ನು ಘೋಷಿಸಲಾಯಿತು. ಇದರ ಒಟ್ಟು ಬಜೆಟ್ 2 ಲಕ್ಷ ಕೋಟಿ ರೂ.

ಇದನ್ನೂ ಓದಿ: ಪ್ರಧಾನಿ ಮೋದಿ ಪ್ರಶಂಸೆಗೆ ಪಾತ್ರವಾದ ಕಲಬುರಗಿ ರೊಟ್ಟಿಯ ವಿಶೇಷತೆ ಏನು?

“ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ತೆಗೆದುಕೊಳ್ಳಲಾದ ಈ 4 ಪ್ರಮುಖ ನಿರ್ಧಾರಗಳು ಯುವಕರನ್ನು ಸಬಲೀಕರಣಗೊಳಿಸಲು, ಕ್ರೀಡೆಗಳನ್ನು ಹೆಚ್ಚಿಸಲು ಮತ್ತು ವಿಶ್ವ ದರ್ಜೆಯ ಮೂಲಸೌಕರ್ಯವನ್ನು ನಿರ್ಮಿಸಲು ಸಹಾಯ ಮಾಡುತ್ತವೆ” ಎಂದು ದೆಹಲಿಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.


ಉತ್ಪಾದನಾ ವಲಯದಲ್ಲಿ ಉದ್ಯೋಗವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಉದ್ಯೋಗ ಸಂಬಂಧಿತ ಪ್ರೋತ್ಸಾಹಕ ಯೋಜನೆಯನ್ನು ಒಟ್ಟು 1.07 ಲಕ್ಷ ಕೋಟಿ ರೂ.ಗಳ ವೆಚ್ಚದೊಂದಿಗೆ ಜಾರಿಗೆ ತರಲಾಗುವುದು. “ಇದು ಕಳೆದ ಕೇಂದ್ರ ಬಜೆಟ್‌ನಲ್ಲಿ ಮಾಡಿದ ಉದ್ಯೋಗ ಘೋಷಣೆಗಳ ಜೊತೆ ಲಿಂಕ್ ಆದ ಸಮಗ್ರ ಪ್ಯಾಕೇಜ್ ಆಗಿದೆ. ಇದು ಭಾರತದ ಉತ್ಪಾದನೆ-ಚಾಲಿತ ಆರ್ಥಿಕತೆಗೆ ಪ್ರಮುಖ ಬೆಳವಣಿಗೆಯ ಎಂಜಿನ್ ಆಗಿ ಕಾರ್ಯನಿರ್ವಹಿಸುತ್ತದೆ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Digital India: ಭಾರತದಲ್ಲಿ ಡಿಜಿಟಲ್ ಇಂಡಿಯಾ ಕ್ರಾಂತಿ ಶುರುವಾಗಿ ಬರೋಬ್ಬರಿ 10 ವರ್ಷ, ಪ್ರಧಾನಿ ಮೋದಿ ಹೇಳಿದ್ದೇನು?

“1 ಲಕ್ಷ ಕೋಟಿ ರೂ. ಹಂಚಿಕೆಯೊಂದಿಗೆ ಸಂಶೋಧನಾ ಅಭಿವೃದ್ಧಿ ಮತ್ತು ನಾವೀನ್ಯತೆ (ಆರ್‌ಡಿಐ) ಯೋಜನೆಯು ದೃಢವಾದ ನಿರ್ಮಾಣವನ್ನು ಉದ್ದೇಶಿಸಲಾಗಿದೆ. ಇಸ್ರೇಲ್, ಯುಎಸ್, ಸಿಂಗಾಪುರ ಮತ್ತು ಜರ್ಮನಿಯಂತಹ ದೇಶಗಳಲ್ಲಿ ಯಶಸ್ವಿ ಜಾಗತಿಕ ಮಾದರಿಗಳನ್ನು ಅಧ್ಯಯನ ಮಾಡಿದ ನಂತರ ಅನುಸಂಧಾನ್ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ (ANRF) ರಚಿಸಿದ ಅಂತಾರಾಷ್ಟ್ರೀಯ ಮಾರ್ಗಸೂಚಿಯನ್ನು ಇದು ಆಧರಿಸಿದೆ” ಎಂದು ಸಚಿವರು ಹೇಳಿದ್ದಾರೆ.

4 ಪಥಗಳ ರಸ್ತೆ ನಿರ್ಮಾಣಕ್ಕಾಗಿ 1,853 ಕೋಟಿ ರೂ. ವೆಚ್ಚದಲ್ಲಿ ಪರಮಕುಡಿ–ರಾಮನಾಥಪುರಂ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗಿದೆ. ದಕ್ಷಿಣ ಭಾರತದಲ್ಲಿ ಮೂಲಸೌಕರ್ಯಕ್ಕೆ ಪ್ರಮುಖ ಉತ್ತೇಜನ ನೀಡುವ ನಿಟ್ಟಿನಲ್ಲಿ ತಮಿಳುನಾಡಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಪರಮಕುಡಿ–ರಾಮನಾಥಪುರಂ ವಿಭಾಗದ ಚತುಷ್ಪಥಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. 46.7 ಕಿ.ಮೀ. ಉದ್ದದ ಈ ಹೆದ್ದಾರಿಯನ್ನು 1,853 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗುವುದು. “ಪಂಬನ್ ಸೇತುವೆಯ ಬಳಿ ಈಗಾಗಲೇ ದ್ವಿಪಥ ರಸ್ತೆ ಇದೆ. ಧನುಷ್ಕೋಡಿಯವರೆಗಿನ ಸಮುದ್ರ ಮಾರ್ಗದ ಡಿಪಿಆರ್ ಕೂಡ ನಡೆಯುತ್ತಿದೆ” ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಈ ಯೋಜನೆಯು ಪ್ರಾದೇಶಿಕ ಸಂಪರ್ಕವನ್ನು ಸುಧಾರಿಸುತ್ತದೆ, ಪ್ರಯಾಣದ ಸಮಯವನ್ನು ಕಡಿತಗೊಳಿಸುತ್ತದೆ ಮತ್ತು ರಾಮನಾಥಪುರಂ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಯನ್ನು ಬೆಂಬಲಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ