ಕೊವಿಡ್ 19 ಲಸಿಕೆ ಪಡೆಯುವವರೇ ಗಮನಿಸಿ; ಕೇಂದ್ರ ಸರ್ಕಾರದಿಂದ ಬಂದಿದೆ ಹೊಸ ಮಾರ್ಗಸೂಚಿ
ಆರೋಗ್ಯ ಕಾರ್ಯಕರ್ತರು, ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರಿಗೆ, 60 ವರ್ಷ ಮೇಲ್ಪಟ್ಟು ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಜನವರಿ 10ರಿಂದ ಕೊರೊನಾ ಲಸಿಕೆ ಕೊಡಲಾಗುತ್ತಿದೆ.
ದೆಹಲಿ: ಬೂಸ್ಟರ್ ಡೋಸ್ ಸೇರಿ ಕೊವಿಡ್ 19 ಎಲ್ಲ ಲಸಿಕೆಯ (Covid 19 Vaccine) ಎಲ್ಲ ರೀತಿಯ ಡೋಸ್ ತೆಗೆದುಕೊಳ್ಳುವವರೇ ಇರಲಿ..ಇಲ್ಲಿ ಗಮನಿಸಿ. ಕೇಂದ್ರ ಆರೋಗ್ಯ ಸಚಿವಾಲಯ ಒಂದು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕೇಂದ್ರ ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಮಿಷನ್ (NHM)ಬಿಡುಗಡೆ ಮಾಡಿರುವ ಹೊಸ ನಿರ್ದೇಶನದ ಅನ್ವಯ, ಯಾವುದೇ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಇರುವುದು ಪ್ರಯೋಗಾಲಯದ ಟೆಸ್ಟ್ನಲ್ಲಿ ದೃಢಪಟ್ಟಿದ್ದರೆ, ಅಂಥವರು ಕೊರೊನಾದಿಂದ ಚೇತರಿಸಿಕೊಂಡ ಮೂರು ತಿಂಗಳ ಬಳಿಕ ಕೊರೊನಾ ಲಸಿಕೆ ಪಡೆಯಬೇಕು. ಅದಕ್ಕೂ ಮೊದಲು ಲಸಿಕೆ ಪಡೆಯುವಂತಿಲ್ಲ. ಇದು ಒಂದನೇ ಡೋಸ್, ಎರಡನೇ ಡೋಸ್ ಮತ್ತು ಇದೀಗ ಆಯ್ದ ವರ್ಗಗಳಿಗೆ ನೀಡಲಾಗುವ ಮೂರನೇ ಡೋಸ್ ಪಡೆಯುವ ಎಲ್ಲರಿಗೂ ಅನ್ವಯ ಆಗಲಿದೆ.
ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ವಿಕಾಸ್ ಶೀಲ್ ಅವರು ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೂ ಪತ್ರ ಬರೆದಿದ್ದಾರೆ. ಇದೀಗ ಕೊವಿಡ್ 19 ಲಸಿಕೆ ಮುನ್ನೆಚ್ಚರಿಕೆ ಡೋಸ್ ನೀಡುವ ಅಭಿಯಾನವೂ ಶುರುವಾಗಿದೆ. ಕೆಲವರು ಎರಡೂ ಡೋಸ್ ಪಡೆದಿದ್ದರೂ ಸೌಮ್ಯ ಲಕ್ಷಣವುಳ್ಳ ಕೊರೊನಾಕ್ಕೆ ಒಳಗಾಗಿದ್ದಾರೆ. ಇಂಥವರಿಗೆ ಮೂರನೇ ಡೋಸ್ ಪಡೆಯುವ ಅವಧಿಯಾಗಿದ್ದು, ಅವರಿಗೆ ಲಸಿಕೆ ನೀಡಬೇಕಾ? ಬೇಡವಾ ಎಂದು ಸ್ಪಷ್ಟಪಡಿಸಿ ಎಂದು ಹಲವು ಕಡೆಗಳಿಂದ ನಮಗೆ ಮನವಿಗಳು ಬಂದಿದ್ದವು. ಹೀಗಾಗಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡುತ್ತಿದ್ದೇವೆ. ಯಾವುದೇ ಕೊವಿಡ್ 19 ಲಸಿಕೆ ಇರಲಿ, ಅದು ಎಷ್ಟನೇ ಡೋಸ್ ಬೇಕಾದರೂ ಆಗಿರಲಿ..ಕೊರೊನಾ ಸೋಂಕು ದೃಢಪಟ್ಟ ವ್ಯಕ್ತಿಗಳು ಅದರಿಂದ ಚೇತರಿಸಿಕೊಂಡ ಮೂರು ತಿಂಗಳ ಬಳಿಕವೇ ಲಸಿಕೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ದೇಶದಲ್ಲಿ ಒಂದೆಡೆ ವಯಸ್ಕರಿಗೆ ಕೊರೊನಾ ಲಸಿಕೆ ನೀಡಿಕೆ ನಡೆಯುತ್ತಿದ್ದರೆ, 15-18 ವರ್ಷದರಿಗೆ ಜನವರಿ 3ರಿಂದ ಕೊವಿಡ್ 19 ಲಸಿಕೆ ನೀಡಲಾಗುತ್ತಿದೆ. ಹಾಗೇ, ಆರೋಗ್ಯ ಕಾರ್ಯಕರ್ತರು, ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರಿಗೆ, 60 ವರ್ಷ ಮೇಲ್ಪಟ್ಟು ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಜನವರಿ 10ರಿಂದ ಕೊರೊನಾ ಲಸಿಕೆ ಕೊಡಲಾಗುತ್ತಿದೆ. ಅದರಲ್ಲಿ ಹೀಗೆ ಮೂರನೇ ಡೋಸ್ ಪಡೆಯುವವರು, ಎರಡನೇ ಡೋಸ್ ಪಡೆದು 39 ವಾರಗಳು (9 ತಿಂಗಳು) ಕಳೆದಿರಬೇಕು. ಆದರೆ ಹೀಗೆ 9 ತಿಂಗಳು ಕಳೆದಿದ್ದರೂ, ಒಂದೊಮ್ಮೆ ಕೊರೊನಾ ಸೋಂಕು ತಗುಲಿದೆ ಎಂದಾದರೆ ಅವರು ಕೊವಿಡ್ 19 ಲಸಿಕೆ ಸದ್ಯಕ್ಕೆ ಪಡೆಯುವಂತಿಲ್ಲ. ಸಂಪೂರ್ಣ ಗುಣಮುಖರಾಗಿ 3ತಿಂಗಳ ನಂತರ ತಮ್ಮ ಮುನ್ನೆಚ್ಚರಿಕಾ ಡೋಸ್ ಪಡೆಯಬಹುದಾಗಿದೆ. ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಮಾಡಿದ್ದ ಶಿಫಾರಸ್ಸಿನ ಅನ್ವಯ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದೂ ವಿಕಾಸ್ ಶೀಲ್ ತಿಳಿಸಿದ್ದಾರೆ.
The Additional Secretary & Mission Director NHM writes a letter to states and UT’s that if a beneficiary tests positive then all vaccination including precaution dose to be deferred by 3 months after recovery. pic.twitter.com/bQvW9scGpn
— ANI (@ANI) January 22, 2022
ಇದನ್ನೂ ಓದಿ: ಹೇಗೆ ಸಾಗ್ತಿದೆ ಮೇಘನಾ ರಾಜ್ ಕಮ್ಬ್ಯಾಕ್ ಜರ್ನಿ? ವಿಡಿಯೋ ಮೂಲಕ ಖುಷಿ ಹಂಚಿಕೊಂಡ ನಟಿ