ದೆಹಲಿ: ಸಿಬಿಐ ಮಾಜಿ ನಿರ್ದೇಶಕ (CBI) ಅಲೋಕ್ ವರ್ಮಾ (Alok Verma)ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಲೋಕಸೇವಾ ಆಯೋಗ(UPSC)ಕ್ಕೆ ಕೇಂದ್ರ ಸರ್ಕಾರ ಶಿಫಾರಸ್ಸು ಮಾಡಿದೆ. ಅಲೋಕ್ ವರ್ಮಾ ಸಿಬಿಐ ನಿರ್ದೇಶಕ (Former CBI Director) ರಾಗಿದ್ದಾಗ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಮತ್ತು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ಯುಪಿಎಸ್ಸಿಗೆ ಹೇಳಿದೆ.
2018ರಲ್ಲಿ ಅಲೋಕ್ ವರ್ಮಾ ಮತ್ತು ರಾಕೇಶ್ ಅಸ್ತಾನಾ ನಡುವಿನ ಪರಸ್ಪರ ಭ್ರಷ್ಟಾಚಾರ ಆರೋಪದಿಂದ ತುಂಬ ದೊಡ್ಡಮಟ್ಟದ ವಿವಾದ ಎದ್ದಿತ್ತು. ಕೊನೆಗೂ ರಾಕೇಶ್ ಅಸ್ತಾನಾಗೆ ಸಿಬಿಐ ಕ್ಲೀನ್ಚಿಟ್ ಕೊಟ್ಟಿದೆ. ಆದರೆ ಅಂದಿನ ವಿವಾದದ ಕೇಂದ್ರಬಿಂದು ಅಲೋಕ್ ವರ್ಮಾರೇ ಆಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಮತ್ತು ಸಿಬ್ಬಂದಿ ಹಾಗೂ ತರಬೇತಿ ಇಲಾಖೆ, ಯುಪಿಎಸ್ಸಿಗೆ ಶಿಫಾರಸು ಮಾಡಿದೆ. ಅಷ್ಟೇ ಅಲ್ಲ, ಸಿಬಿಐ ನಿರ್ದೇಶಕನಾಗಿದ್ದಾಗ ಅನುಸರಿಸಬೇಕಾದ ನಿಯಮಗಳನ್ನು ಪಾಲಿಸದೆ, ಅಧಿಕಾರ ದುರುಪಯೋಗ ಪಡಿಸಿಕೊಂಡ ಅಲೋಕ್ ವರ್ಮಾಗೆ ದಂಡ ವಿಧಿಸಬೇಕು ಎಂದೂ ಕೇಂದ್ರ ಸರ್ಕಾರ ಹೇಳಿದೆ. ಹಾಗೊಮ್ಮೆ ಇದನ್ನು ಯುಪಿಎಸ್ಸಿ ಪರಿಗಣಿಸಿದರೆ, ಅಲೋಕ್ ವರ್ಮಾರ ಪಿಂಚಣಿ, ನಿವೃತ್ತಿ ನಂತರದ ಅನುಕೂಲತೆಗಳ ಮೇಲೆ ಪರಿಣಾಮ ಬೀರಲಿದೆ.
ಏನಿದು ವಿವಾದ? 2018ರಲ್ಲಿ ರಾಕೇಶ್ ಆಸ್ತಾನಾರನ್ನು ಸಿಬಿಐ ನಿರ್ದೇಶಕರನ್ನಾಗಿ ನೇಮಕ ಮಾಡಿದಾಗ ಅಲೋಕ್ ವರ್ಮಾ ತೀವ್ರ ಅಸಮಾಧಾನಗೊಂಡಿದ್ದರು. ಅದೆಷ್ಟೋ ಹಿರಿಯ ಅಧಿಕಾರಿಗಳನ್ನೆಲ್ಲ ಬದಿಗೊತ್ತಿ, ಇವರನ್ನು ಸಿಬಿಐ ವಿಶೇಷ ನಿರ್ದೇಶಕನ ಸ್ಥಾನಕ್ಕೆ ನೇಮಕ ಮಾಡಿದ್ದು ಅಲೋಕ್ ವರ್ಮಾ ಕೋಪಕ್ಕೆ ಕಾರಣವಾಗಿತ್ತು. ಅವರಿಬ್ಬರ ಕಿತ್ತಾಟ ಪರಸ್ಪರ ಬಹಿರಂಗವಾಗಿ ಭ್ರಷ್ಟಾಚಾರ ಆರೋಪ ಮಾಡಿಕೊಳ್ಳುವಷ್ಟರ ಮಟ್ಟಿಗೆ ಹೋಗಿತ್ತು. ಮಾಂಸರಫ್ತು ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಸತೀಶ್ ಸನಾ ಎಂಬುವರಿಗೆ ಕ್ಲೀನ್ ಚಿಟ್ ನೀಡಲು ಅಲೋಕ್ ವರ್ಮಾ ಲಂಚ ಪಡೆದಿದ್ದಾರೆ ಎಂಬ ಆರೋಪವನ್ನು ರಾಕೇಶ್ ಆಸ್ತಾನಾ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ರಾಕೇಶ್ ಆಸ್ತಾನಾ ವಿರುದ್ಧ ಅಲೋಕ್ ವರ್ಮಾ ಕೂಡ ಭ್ರಷ್ಟಾಚಾರ ಆರೋಪ ಮಾಡಿದ್ದರು. ನಂತರ ಕೇಂದ್ರ ಸರ್ಕಾರ ಇವರಿಬ್ಬರನ್ನೂ ರಾತ್ರೋರಾತ್ರಿ ಕಡ್ಡಾಯ ರಜೆಯ ಮೇಲೆ ಕಳಿಸಿತ್ತು. ಆದಾಗ್ಯೂ ಅಲೋಕ್ ವರ್ಮಾ ಸುಪ್ರೀಂಕೋರ್ಟ್ ಮೆಟ್ಟಿಲೇರಿ, ಮತ್ತೆ ಅಧಿಕಾರಕ್ಕೆ ಮರಳಿದ್ದರು. ಹಾಗೆ ಮರಳಿದ ಅಲೋಕ್ ವರ್ಮಾರನ್ನು ಕೇಂದ್ರ ಸರ್ಕಾರ ಬೇರೆಡೆಗೆ ವರ್ಗಾಯಿಸಿತ್ತು. ಅದಾದ ಬಳಿಕ ರಾಕೇಶ್ ಆಸ್ತಾನಾಗೆ ಎಲ್ಲ ಪ್ರಕರಣಗಳಲ್ಲೂ ಸಿಬಿಐ ಕ್ಲೀನ್ಚಿಟ್ ನೀಡಿದೆ.
ಇದನ್ನೂ ಓದಿ: ಗಡಿ ಸಂಘರ್ಷವನ್ನು ಅಸ್ಸಾಂ ಸಿಎಂ ಪ್ರತಿಷ್ಠೆಯ ವಿಷಯವನ್ನಾಗಿ ಪರಿಗಣಿಸಿದ್ದಾರೆ: ಪ್ರಧಾನಿಗೆ ಪತ್ರ ಬರೆದ ಕಾಂಗ್ರೆಸ್ ಸಂಸದ
Union Home Ministry recommends action against former CBI director Alok Verm