ರಘುರಾಮ್ ರಾಜನ್ ಅವರದ್ದು ಅತಿರೇಕದ ಮಾತು; ಟೆಲಿಕಾಂ ಕ್ಷೇತ್ರ ಕುರಿತ ಹೇಳಿಕೆಗೆ ಅಶ್ವಿನಿ ವೈಷ್ಣವ್ ತಿರುಗೇಟು
ಕಾಂಗ್ರೆಸ್ ಸರಕಾರ ಇದ್ದಿದ್ದರೆ ಟೆಲಿಕಾಂ ಕ್ಷೇತ್ರದಲ್ಲಿ ಹಗರಣಗಳು ತಪ್ಪುತ್ತಿರಲಿಲ್ಲ. ಆದರೆ ಬಿಜೆಪಿ ಆಡಳಿತದಲ್ಲಿ ಟೆಲಿಕಾಂ ಕ್ಷೇತ್ರ ಶಕ್ತಿಶಾಲಿಯಾಗಿದೆ. ಅಗ್ಗದ ದರದಲ್ಲಿ ಡೇಟಾ ನೀಡುವ ಏಕೈಕ ದೇಶ ಭಾರತ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ನವದೆಹಲಿ: ಟೆಲಿಕಾಂ ಕ್ಷೇತ್ರದಲ್ಲಿ ಭಾರತ ಅಭಿವೃದ್ಧಿ ಕಾಣುತ್ತಿಲ್ಲ ಎಂಬ ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಟೀಕೆಗೆ ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತೀಕ್ಷ್ಣ ತಿರುಗೇಟು ನೀಡಿದ್ದಾರೆ. ರಘುರಾಂ ರಾಜನ್ (Raghuram Rajan) ಅವರು 2014ರ ಮೊದಲು ಏನಾಗಿದ್ದರು, ಆ ನಂತರ ಏನಾದರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಅವರು ಹೇಳಿದ್ದಾರೆ. ಭಾರತೀಯ ಟೆಲಿಕಾಂ ಕ್ಷೇತ್ರ ಮತ್ತು ಮೊಬೈಲ್ ತಯಾರಿಕಾ ವಲಯದ ಬಗ್ಗೆ ರಘುರಾಮ್ ಮಾಡಿರುವ ಟೀಕೆ ಸಂಪೂರ್ಣ ಸುಳ್ಳಾಗಿದೆ. ಚಿಕಾಗೋ ವಿಶ್ವವಿದ್ಯಾಲಯದಂತಹ ದೊಡ್ಡ ವಿಶ್ವವಿದ್ಯಾಲಯದಲ್ಲಿ ಸುಳ್ಳು ಪ್ರಚಾರ ಮಾಡುತ್ತಿರುವುದು ಅತಿರೇಕದ ಸಂಗತಿ ಎಂದು ಅಶ್ವಿನಿ ವೈಷ್ಣವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರಕಾರ ಇದ್ದಿದ್ದರೆ ಟೆಲಿಕಾಂ ಕ್ಷೇತ್ರದಲ್ಲಿ ಹಗರಣಗಳು ತಪ್ಪುತ್ತಿರಲಿಲ್ಲ. ಆದರೆ ಬಿಜೆಪಿ ಆಡಳಿತದಲ್ಲಿ ಟೆಲಿಕಾಂ ಕ್ಷೇತ್ರ ಶಕ್ತಿಶಾಲಿಯಾಗಿದೆ. ಅಗ್ಗದ ದರದಲ್ಲಿ ಡೇಟಾ ನೀಡುವ ಏಕೈಕ ದೇಶ ಭಾರತ ಎಂದು ಅವರು ಹೇಳಿದ್ದಾರೆ.
ಯುಪಿಎ ಸರ್ಕಾರ ಬಿಎಸ್‌ಎನ್‌ಎಲ್ ಅನ್ನು ಮರಣಶಯ್ಯೆಯಲ್ಲಿ ಇರಿಸಿತ್ತು. ಮೋದಿ ಪ್ರಧಾನಿಯಾದ ನಂತರವೇ ಬಿಎಸ್‌ಎನ್‌ಎಲ್ ಲಾಭ ಗಳಿಸಲು ಪ್ರಾರಂಭಿಸಿತು. 4ಜಿಯಿಂದ 5ಜಿಗೆ ಟೆಲಿಕಾಂ ವಲಯದ ಪರಿವರ್ತನೆಯು ಭಾರತದ ತಾಂತ್ರಿಕ ಆವಿಷ್ಕಾರಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ವೈಷ್ಣವ್ ಹೇಳಿದ್ದಾರೆ. ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಮೂಲಕ 25 ಲಕ್ಷ ಜನರಿಗೆ ಉದ್ಯೋಗ ದೊರೆತಿದೆ. ರಘುರಾಮ್ ರಾಜನ್ ಅವರಿಗೆ ಈ ಕ್ಷೇತ್ರದ ಬೆಳವಣಿಗೆ ಕಾಣುತ್ತಿಲ್ಲವೇ ಎಂದು ಅಶ್ವಿನಿ ವೈಷ್ಣವ್ ಪ್ರಶ್ನಿಸಿದರು.
ಇದನ್ನೂ ಓದಿ: ರಾಹುಲ್ ಗಾಂಧಿ ಹೋರಾಟ ಬಿಜೆಪಿ ವಿರುದ್ಧವೇ ಅಥವಾ ಭಾರತದ ವಿರುದ್ಧವೇ? ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಆಕ್ರೋಶ
2004-14ರ ನಡುವಿನ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತ ಭಾರತ ದೇಶವು ತನ್ನನ್ನು ತಾನು ಕಳೆದುಕೊಂಡ ದಶಕ ಎಂದು ಅಶ್ವಿನ್ ವೈಷ್ಣವ್ ಟೀಕಿಸಿದ್ದಾರೆ. ಈಗ ವಿರೋಧ ಪಕ್ಷಗಳು ದೇಶಕ್ಕೆ ಹಾನಿ ಮಾಡುವ ಶಾರ್ಟ್‌ಕಟ್ ರಾಜಕಾರಣ ಮಾಡುತ್ತಿವೆ ಎಂದು ಕಿಡಿಕಾರಿದ್ದಾರೆ.
ಸರಕು ಸಾಗಣೆಯಲ್ಲಿ ರೈಲ್ವೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದ ಸಚಿವರು, ದೇಶದಲ್ಲಿ ಪ್ರತಿದಿನ ನಿರ್ಮಾಣವಾಗುವ ಹೊಸ ರೈಲು ಹಳಿಗಳ ಸರಾಸರಿ ಉದ್ದ 4 ಕಿ.ಮೀ ನಿಂದ 14 ಕಿ.ಮೀ.ಗೆ ಏರಿಕೆಯಾಗಿದೆ ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ