ದೆಹಲಿ: ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಅತ್ಯಂತ ಮಹತ್ವದ ಎಂಜಿನಿಯರಿಂಗ್ ನಿರ್ಮಾಣ ಎನಿಸಿಕೊಂಡಿರುವ ಲಡಾಖ್ನ ಕಾರ್ಗಿಲ್ ಜಿಲ್ಲೆಯಲ್ಲಿರುವ ಜೋಜಿಲಾ ಸುರಂಗ ಮಾರ್ಗದ ಕೆಲಸದ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ. ಈ ಸುರಂಗ ಲೋಕಾರ್ಪಣೆಗೊಂಡಾಗ ಲಡಾಖ್ ಜನರ 30 ವರ್ಷಗಳ ನಿರೀಕ್ಷೆ ಈಡೇರಿದಂತೆ ಆಗುತ್ತದೆ. ಹೈದರಾಬಾದ್ ಮೂಲದ ಮೇಘಾ ಎಂಜಿನಿಯಿಂಗ್ ಕಂಪನಿಯು (MEIL) ಈ ಸುರಂಗ ನಿರ್ಮಾಣ ಯೋಜನೆ ಅನುಷ್ಠಾನದ ಹೊಣೆ ಹೊತ್ತಿತ್ತು.
ಕೇಂದ್ರ ಕ್ರೀಡೆ ಮತ್ತು ಯುವಜನ ಸೇವಾ ಖಾತೆ ಸಚಿವ ಅನುರಾಗ್ ಠಾಕೂರ್ ಭಾನುವಾರ ಝೊಜಿಲಾ ಸುರಂಗ ಪರಿಶೀಲಿಸಿದರು. 14.15 ಕಿಮೀ ಅಂತರದ ಈ ಸುರಂಗವು ಶ್ರೀನಗರ-ಕಾರ್ಗಿಲ್-ಲೇಹ್ ಸಂಪರ್ಕ ಬೆಸೆಯುವಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ.
ಕಳೆದ ವರ್ಷ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಯೋಜನೆಗೆ ಚಾಲನೆ ನೀಡಿದ್ದರು. ಏಷ್ಯಾದ ಅತ್ಯಂತ ಉದ್ದದ ಈ ಸುರಂಗವು ಶ್ರೀನಗರ ಕಣಿವೆ ಮತ್ತು ಲೇಹ್ ನಡುವೆ ಸರ್ವಋತು ಸಂಪರ್ಕ ಕಾಪಾಡಲು ನೆರವಾಗುತ್ತದೆ. ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆಗಳಲ್ಲಿ ಒಂದು ಎನಿಸಿಕೊಂಡಿರುವ ಈ ರಸ್ತೆಯಲ್ಲಿ ಸಂಚರಿಸುವುದು ಸವಾಲಿನ ವಿಷಯವಾಗಿತ್ತು. ಚೀನಾ ಮತ್ತು ಪಾಕಿಸ್ತಾನದ ಗಡಿಯ ಸನಿಹದಲ್ಲಿರುವ ಈ ಸುರಂಗ ಮಾರ್ಗವು ದೇಶದ ಭದ್ರತೆ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿದೆ.
ರಾಷ್ಟ್ರೀಯ ಹೆದ್ದಾರಿ 1ರ ಮೂಲಕ ಶ್ರೀನಗರ ಕಣಿವೆ ಮತ್ತು ಲೇಹ್ (ಲಡಾಖ್ ಪ್ರಸ್ತಭೂಮಿ) ನಡುವೆ ಸರ್ವಋತು ಸಂಪರ್ಕ ಒದಗಿಸುವ ಈ ರಸ್ತೆಯು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಏಕತೆ ಕಾಪಾಡುವ ದೃಷ್ಟಿಯಿಂದಲೂ ಮಹತ್ವದ ಪಾತ್ರ ನಿರ್ವಹಿಸುತ್ತದೆ.
ಝೊಜಿಲಾ ಸುರಂಗವು ಸೇವೆಗೆ ಸಮರ್ಪಣೆಗೊಂಡ ನಂತರ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿ 1ರ ಸಂಚಾರವು ಭೂ ಕುಸಿತದ ಆತಂಕದಿಂದ ಮುಕ್ತವಾಗುತ್ತದೆ. ಸಂಚಾರ ಸುರಕ್ಷೆ ಸುಧಾರಿಸುವ ಜೊತೆಗೆ ಸಂಚಾರದ ಅವಧಿಯನ್ನು 3.15 ತಾಸು ಕಡಿಮೆ ಮಾಡುತ್ತದೆ. ₹6800 ಕೋಟಿ ವೆಚ್ಚದ ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಮೇ 2018ರಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸುವ ಆತ್ಮನಿರ್ಭರ್ ಭಾರತ ಪರಿಕಲ್ಪನೆಗೂ ಈ ಸುರಂಗ ಪೂರಕವಾಗಿದೆ. ಸುರಂಗ ನಿರ್ಮಾಣದ ನಂತರ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆಗೆ ಹೊಸ ಬಲ ಸಿಗಲಿದೆ.
ಗಡಿ ಪ್ರದೇಶದಲ್ಲಿರುವ ಈ ಸುರಂಗ ಮಾರ್ಗವು ತುರ್ತು ಪರಿಸ್ಥಿತಿಯಲ್ಲಿ ಸೇನಾಪಡೆ, ಯುದ್ಧೋಪಕರಣಗಳು ಮತ್ತು ಯುದ್ಧ ಟ್ಯಾಂಕ್ಗಳನ್ನು ಗಡಿಯಲ್ಲಿ ನಿಯೋಜಿಸಲು ಅನುಕೂಲ ಕಲ್ಪಿಸಲಿದೆ.
ಜೋಜಿಲಾ ಯೋಜನೆಯ ಪ್ರಾಮುಖ್ಯತೆ
– ಶ್ರೀನಗರ, ದ್ರಾಸ್, ಕಾರ್ಗಿಲ್ ಮತ್ತು ಲೇಹ್ ಪ್ರದೇಶದಳಿಗೆ ಝೊಜಿಲಾ ಸುರಂಗವು ಸರ್ವಋತು ಸಂಪರ್ಕ ಕಲ್ಪಿಸುತ್ತದೆ.
– ಚಳಿಗಾಲದಲ್ಲಿ ಭಾರೀ ಹಿಮಪಾತದ ಕಾರಣದಿಂದ ದೇಶದ ಇತರ ಪ್ರದೇಶಗಳ ಸಂಪರ್ಕ ಕಡಿದುಕೊಳ್ಳುವ ಈ ಪ್ರದೇಶಗಳಲ್ಲಿ ನಿರಂತರ ರಸ್ತೆ ಸಂಪರ್ಕದ ಸಾಧ್ಯತೆಯನ್ನು ಮುಕ್ತವಾಗಿರಿಸುತ್ತದೆ.
– ಆರಂಭಿಕ ಕಾರ್ಯಗಳು ಮುಗಿದ ನಂತರ ಈ ರಸ್ತೆಯ ಮಹತ್ವದ ಹಂತಕ್ಕೆ ಅಕ್ಟೋಬರ್ 2020ರಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಿದ್ದರು.
– ಸಮುದ್ರಮಟ್ಟದಿಂದ 11,578 ಅಡಿ ಎತ್ತರದಲ್ಲಿ ಈ ರಸ್ತೆಯನ್ನು ನಿರ್ಮಿಸುವುದು ದೊಡ್ಡ ಸವಾಲಾಗಿತ್ತು. ಮೇಘಾ ಎಂಜಿನಿಯರಿಂಗ್ ಸಂಸ್ಥೆಯು ಈ ರಸ್ತೆ ನಿರ್ಮಾಣದ ಯೋಜನೆಯನ್ನು ಅನುಷ್ಠಾನಗೊಳಿಸಿದೆ.
– ಕಾರ್ಗಿಲ್ ಮತ್ತು ಲಡಾಖ್ ಪ್ರದೇಶದ ಜನರು ಕಳೆದ 30 ವರ್ಷಗಳಿಂದಲೂ ಈ ರಸ್ತೆ ನಿರ್ಮಾಣವಾಗಬೇಕು ಎಂದು ಬೇಡಿಕೆಯಿಟ್ಟಿದ್ದರು.
– ಗಿರಿ ಶಿಖರಗಳ ಮಾರ್ಗದಲ್ಲಿ ಸರಕು ಸಾಗಣೆಗೆ ಕೆಟ್ಟ ಹವಾಮಾನವು ದೊಡ್ಡ ಸವಾಲಾಗಿತ್ತು. ಹೀಗಾಗಿ ಸುರಂಗ ಮಾರ್ಗ ನಿರ್ಮಾಣವಾಗಬೇಕು ಎಂದು ಜನರು ಕೋರುತ್ತಿದ್ದರು.
– 2013ರ ಯುಪಿಎ ಆಡಳಿತದಲ್ಲಿಯೇ ಈ ರಸ್ತೆ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ನಾಲ್ಕು ಬಾರಿ ಟೆಂಡರ್ ಕರೆಯಲಾಗಿತ್ತು. ಕೊನೆಗೆ ಮೋದಿ ಅಧಿಕಾರ ಅವಧಿಯಲ್ಲಿ ಈ ಯೋಜನೆ ಅನುಷ್ಠಾನಗೊಂಡಿತು.
– ಭೂಮಿಪೂಜೆ ಸಮಾರಂಭದಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಮೇಘಾ ಎಂಜಿನಿಯರಿಂಗ್ ಸಂಸ್ಥೆಯು ಸಕಾಲದಲ್ಲಿ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ಖ್ಯಾತಿ ಪಡೆದಿದೆ. ಕೇವಲ ನಾಲ್ಕು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಿದ ಹೊಸ ದಾಖಲೆ ಬರೆಯಲಿದೆ ಎಂದು ಹೇಳಿದ್ದರು.
– ಸುರಂಗಕ್ಕಾಗಿ ಆರಂಭದಲ್ಲಿ ₹ 10,643 ಕೋಟಿ ವೆಚ್ಚವನ್ನು ಅಂದಾಜು ಮಾಡಲಾಗಿತ್ತು. ರಸ್ತೆ ಮತ್ತು ಸುರಂಗವನ್ನು ಪ್ರತ್ಯೇಕವಾಗಿ ನಿರ್ಮಿಸುವ ಮೂಲಕ ₹ 3,835 ಕೋಟಿ ಉಳಿತಾಯವಾಗಲಿದೆ ಎಂದು ಸರ್ಕಾರ ಅಂದಾಜಿಸಿದೆ.
– ಈ ಅತ್ಯಾಧುನಿಕ ಸುರಂಗದಲ್ಲಿ ಸಿಸಿಟಿವಿ ಕ್ಯಾಮೆರಾ, ಅತಿಭಾರದ ವಾಹನಗಳನ್ನು ಗುರುತಿಸುವ ವ್ಯವಸ್ಥೆ, ಸ್ವಯಂಚಾಲಿತ ಬೆಂಕಿ ಗುರುತಿಸುವ ವ್ಯವಸ್ಥೆ, ಬೆಂಕಿಯ ಕರೆಗಂಟೆ ಸೇರಿದಂತೆ ಹಲವು ಸೌಕರ್ಯಗಳು ಈ ಸುರಂಗದಲ್ಲಿದೆ. ಈ ಸುರಂಗದಲ್ಲಿ ಸಂಚಾರಕ್ಕೆ ಗಂಟೆಗೆ 80 ಕಿಮೀ ವೇಗಮಿತಿ ವಿಧಿಸಲಾಗಿದೆ.
(Union minister Nitin Gadkari to visit the Jozilla tunnel on September 28)
ಇದನ್ನೂ ಓದಿ: ಮಂಗಳೂರು-ಬೆಂಗಳೂರು ಶಿರಾಡಿ ಸುರಂಗ ಮಾರ್ಗಕ್ಕೆ ಯೋಜನೆ ಸಿದ್ಧ: ನಿತಿನ್ ಗಡ್ಕರಿ
ಇದನ್ನೂ ಓದಿ: 24 ಗಂಟೆಯಲ್ಲಿ 2.5 ಕಿ.ಮೀ. ಉದ್ದದ ಚತುಷ್ಪಥ ರಸ್ತೆ ನಿರ್ಮಾಣ; ಭಾರತದ ವಿಶ್ವದಾಖಲೆ ಇದು ಎಂದ ಸಚಿವ ನಿತಿನ್ ಗಡ್ಕರಿ
Published On - 12:50 am, Tue, 28 September 21