ನವದೆಹಲಿ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು (Praveen Nettar) ಹತ್ಯೆಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಖಂಡಿಸಿದ್ದಾರೆ.
ಈ ಬಗ್ಗೆ ನವದೆಹಲಿಯಲ್ಲಿಂದು ಪ್ರತಿಕ್ರಿಯೆ ನೀಡಿರುವ ಪ್ರಲ್ಹಾದ ಜೋಶಿ, ಪ್ರಕರಣದ ಕುರಿತ ಆರಂಭಿಕ ವರದಿಗಳು ಮತ್ತು ಕೆಲವು ಮಾಧ್ಯಮ ವರದಿಗಳು SDPI ಮತ್ತು PFI ಲಿಂಕ್‌ಗಳಿರೋದನ್ನ ಸೂಚಿಸುತ್ತಿದೆ. ಕೇರಳದಲ್ಲಿ ಅವರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ (Karnataka Congress) ಕೂಡಾ ಇಂಥವರನ್ನ ಪ್ರೋತ್ಸಾಹಿಸುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪಿ.ಎಫ್.ಐ ಕಾರ್ಯಕರ್ತರ ಮೇಲಿನ ಕೇಸುಗಳನ್ನೆಲ್ಲ ಹಿಂಪಡೆದರು. ಈ ರೀತಿ ಕಾಂಗ್ರೆಸ್ ಪಿಎಫ್ಐ ಗೆ ಪ್ರೋತ್ಸಾಹ ನೀಡುತ್ತಿದೆ. ಬಿಜೆಪಿ ಯುವಮೋರ್ಚಾ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಕರ್ನಾಟಕ ಸರ್ಕಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಪ್ರತಿಕ್ರಿಯಿಸಿದ್ದಾರೆ.
ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ : ಕೇಂದ್ರ ಸಚಿವ ಜೋಶಿ ವಿಡಿಯೋ ಹೇಳಿಕೆ
ಇದೇ ವೇಳೆ ಪ್ರವೀಣ್ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ದುಷ್ಕರ್ಮಿಗಳು ನಡೆಸಿದ ದಾಳಿಯಿಂದ ನಮ್ಮ ಕಾರ್ಯಕರ್ತನ ಹತ್ಯೆಯಾಗಿದೆ. ಈ ಕೃತ್ಯ ಎಸಗಿದವರನ್ನು ಯಾವುದೇ ಮುಲಾಜಿಲ್ಲದೆ ಬಂಧಿಸಬೇಕು. ಎಲ್ಲರಿಗೂ ಪಾಠವಾಗುವಂತೆ ಶಿಕ್ಷೆ ಆಗಬೇಕು. ಆ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಹಾಗು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುವ ವಿಶ್ವಾಸವನ್ನು ಪ್ರಲ್ಹಾದ್ ಜೋಶಿ ಅವರು ವ್ಯಕ್ತಪಡಿಸಿದರು.
ನಮ್ಮ ಪಕ್ಷದ ಕಾರ್ಯಕರ್ತನ ಹತ್ಯೆಯ ಹಿಂದೆ PFI ಮತ್ತು SDPI ಸಂಘಟನೆ ಕೈವಾಡವಿದೆ ಮತ್ತು ಈ ಸಂಘಟನೆಗಳಿಗೆ ಕೇರಳದಲ್ಲಿ ಅಲ್ಲಿನ ಸರಕಾರ ರಕ್ಷಣೆ ನೀಡುತ್ತಿದೆ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ತಪ್ಪಿತಸ್ಥರನ್ನು ಬಿಡುವ ಮಾತಿಲ್ಲ, ಅಂತವರಿಗೆ ಶಿಕ್ಷೆ ವಿಧಿಸಲಾಗುವುದು. pic.twitter.com/hRiHZEqXbF
— Pralhad Joshi (@JoshiPralhad) July 27, 2022
ಪ್ರವೀಣ್ ನೆಟ್ಟಾರು ಆತ್ಮಕ್ಕೆ ಶಾಂತಿ ಕೋರಿದ ಸಚಿವರು, ಪ್ರವೀಣ್ ಕುಟುಂಬಕ್ಕೆ ದುಃಖ ನೀಗಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
Published On - 1:47 pm, Wed, 27 July 22