ಅಕ್ಟೋಬರ್ 1ರಿಂದ ಕೇಂದ್ರ ಲೋಕಸೇವಾ ಆಯೋಗದ ಶತಮಾನೋತ್ಸವ ಆಚರಣೆ ಆರಂಭ
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ತನ್ನ ಸಾರ್ವಜನಿಕ ಸೇವೆಯ 100 ವರ್ಷಗಳನ್ನು ಆಚರಿಸಿಕೊಳ್ಳುತ್ತಿದೆ. ಅಕ್ಟೋಬರ್ 1ರಿಂದ ಲೋಕಸೇವಾ ಆಯೋಗದ ಶತಮಾನೋತ್ಸವ ದಿನಾಚರಣೆ ಶುರುವಾಗಲಿದೆ. ಈ ಆಚರಣೆಯ ಭಾಗವಾಗಿ, ಯುಪಿಎಸ್ಸಿ ರಾಷ್ಟ್ರಕ್ಕೆ ಆಯೋಗದ ಸೇವೆಯನ್ನು ಸಂಕೇತಿಸುವ ಲೋಗೋ ಮತ್ತು ಟ್ಯಾಗ್‌ಲೈನ್ ಅನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ.

ನವದೆಹಲಿ, ಸೆಪ್ಟೆಂಬರ್ 29: ಭಾರತದ ಸಾಂವಿಧಾನಿಕ ಪ್ರಾಧಿಕಾರವಾದ ಯೂನಿಯನ್ ಲೋಕಸೇವಾ ಆಯೋಗ (UPSC) 100 ವರ್ಷಗಳನ್ನು ಆಚರಿಸಿಕೊಳ್ಳುತ್ತಿದೆ. ಯುಪಿಎಸ್ಸಿ ಶತಮಾನೋತ್ಸವದ ಹಿನ್ನೆಲೆಯಲ್ಲಿ ವರ್ಷಪೂರ್ತಿ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸಲಾಗುವುದು. ಈ ಶತಮಾನೋತ್ಸವ ವರ್ಷಾಚರಣೆಯು ಈ ವರ್ಷ ಅಕ್ಟೋಬರ್ 1ರಂದು ಪ್ರಾರಂಭವಾಗಿ ಅಕ್ಟೋಬರ್ 1, 2026ರವರೆಗೆ ನಡೆಯಲಿದೆ. ಈ ಬಗ್ಗೆ ಯುಪಿಎಸ್‌ಸಿ ಅಧ್ಯಕ್ಷ ಅಜಯ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯೋಗದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
1919ರ ಭಾರತ ಸರ್ಕಾರದ ಕಾಯ್ದೆಯ ನಿಬಂಧನೆಗಳು ಮತ್ತು ಲೀ ಆಯೋಗದ (1924) ಶಿಫಾರಸುಗಳ ನಂತರ, ಸಾರ್ವಜನಿಕ ಸೇವಾ ಆಯೋಗವನ್ನು ಅಕ್ಟೋಬರ್ 1, 1926ರಂದು ಭಾರತದಲ್ಲಿ ಸ್ಥಾಪಿಸಲಾಯಿತು. ನಂತರ ಫೆಡರಲ್ ಪಬ್ಲಿಕ್ ಸರ್ವಿಸ್ ಕಮಿಷನ್ (1937) ಎಂದು ಹೆಸರಿಸಲಾಯಿತು. ಇದನ್ನು ಜನವರಿ 26, 1950ರಂದು ಭಾರತದ ಸಂವಿಧಾನವನ್ನು ಅಂಗೀಕರಿಸುವುದರೊಂದಿಗೆ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಎಂದು ಮರುನಾಮಕರಣ ಮಾಡಲಾಯಿತು.
“ಪ್ರಾರಂಭದಿಂದಲೂ, ಯುಪಿಎಸ್ಸಿ ಪಾರದರ್ಶಕತೆ, ನ್ಯಾಯಸಮ್ಮತತೆ ಮತ್ತು ಅರ್ಹತೆಯ ಸಂಕೇತವಾಗಿದೆ. ಸರ್ಕಾರಿ ಸೇವೆಗಳಲ್ಲಿ ಹಿರಿಯ ಮಟ್ಟದ ಹುದ್ದೆಗಳಿಗೆ ಕಠಿಣ ಮತ್ತು ನಿಷ್ಪಕ್ಷಪಾತ ಪ್ರಕ್ರಿಯೆಯ ಮೂಲಕ ಅತ್ಯಂತ ಅರ್ಹ ಅಭ್ಯರ್ಥಿಗಳ ಆಯ್ಕೆಯನ್ನು ಮಾಡಲಾಗುತ್ತಿದೆ” ಎಂದು ಯುಪಿಎಸ್ಸಿ ಅಧ್ಯಕ್ಷ ಅಜಯ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: Viral: ಹೆರಿಗೆಯಾದ 17 ದಿನಕ್ಕೆ ಯುಪಿಎಸ್‌ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾದ ಕೇರಳದ ಮಹಿಳೆ
ಈ ಆಚರಣೆಯ ಭಾಗವಾಗಿ, ಯುಪಿಎಸ್ಸಿ ರಾಷ್ಟ್ರಕ್ಕೆ ಆಯೋಗದ ಸೇವೆಯನ್ನು ಸಂಕೇತಿಸುವ ಲೋಗೋ ಮತ್ತು ಟ್ಯಾಗ್‌ಲೈನ್ ಅನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಈ ಕುರಿತಾದ ಸಿದ್ಧತೆಗಳ ಕುರಿತು ಮಾತನಾಡಿದ ಅಜಯ್ ಕುಮಾರ್, ನಾವು ಕಾರ್ಯಕ್ರಮಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದಂತೆ, ನಮ್ಮ ಉದ್ಯೋಗಿಗಳಿಂದ ಸಲಹೆಗಳನ್ನು ಸಹ ಪಡೆದುಕೊಂಡಿದ್ದೇವೆ. ಶತಮಾನೋತ್ಸವ ವರ್ಷಾಚರಣೆಯು ನಮ್ಮ ಪರಂಪರೆಯನ್ನು ಹೆಮ್ಮೆಯಿಂದ ಹಿಂತಿರುಗಿ ನೋಡಲು, ಸುಧಾರಣೆಗಾಗಿ ಆತ್ಮಾವಲೋಕನ ಮಾಡಿಕೊಳ್ಳಲು ನಮಗೆ ಅವಕಾಶವನ್ನು ನೀಡುತ್ತದೆ. ಮುಂದಿನ 100 ವರ್ಷಗಳ ಯುಪಿಎಸ್‌ಸಿ ವೈಭವಕ್ಕಾಗಿ ಮಾರ್ಗಸೂಚಿಯನ್ನು ಯೋಜಿಸಲು ಇದು ಒಂದು ಸಂದರ್ಭವಾಗಿದೆ ಎಂದು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




