ಲಖನೌ: ಅದೇನೋ ರಾಜಕೀಯದಲ್ಲಿ ವಿವಾದಿತ ನಟಿ ರಾಖಿ ಸಾವಂತ್ (Rakhi Sawant) ಹೆಸರು ಪದೇಪದೆ ಕೇಳಿಬರುತ್ತಿದೆ. ಮೊನ್ನೆಯಷ್ಟೇ ಆಮ್ ಆದ್ಮಿ ಪಕ್ಷದ ಶಾಸಕ ರಾಘವ್ ಚಡ್ಡಾ ರಾಖಿ ಸಾವಂತ್ ಹೆಸರನ್ನು ಉಲ್ಲೇಖಿಸಿದ್ದರು. ಪಂಜಾಬ್ನ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ಪಂಜಾಬ್ ರಾಜಕೀಯದ ರಾಖಿ ಸಾವಂತ್ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು. ಈಗ ಅದೇ ಹೆಸರಿನ ಮೂಲಕ ಉತ್ತರ ಪ್ರದೇಶ ವಿಧಾನಸಭೆ ಸ್ಪೀಕರ್ (UP Assembly Speaker)ಹೃದಯ್ ನಾರಾಯಣ ದೀಕ್ಷಿತ್ ವಿವಾದ ಹುಟ್ಟುಹಾಕಿದ್ದಾರೆ. ಮೈಮೇಲೆ ಕಡಿಮೆ ಬಟ್ಟೆ ಧರಿಸಿದಾಕ್ಷಣ ರಾಖಿ ಸಾವಂತ್ ಮಹಾತ್ಮ ಗಾಂಧಿ ಆಗುವುದಿಲ್ಲ ಎಂದು ಅವರು ಹೇಳಿದ ಮಾತು, ಟೀಕೆಗೆ ಗುರಿಯಾಗಿದೆ.
ಉನ್ನಾವೋ ಜಿಲ್ಲೆಯಲ್ಲಿ ಬಿಜೆಪಿಯಿಂದ ಆಯೋಜಿಸಲಾಗಿದ್ದ ಪ್ರಬುದ್ಧ ವರ್ಗ ಸಮ್ಮೇಳನದಲ್ಲಿ ಮಾತನಾಡಿದ ಸ್ಪೀಕರ್ ಹೃದಯ ನಾರಾಯಣ ದೀಕ್ಷಿತ್, ಯಾರೇ ಇರಲಿ, ಯಾವುದೋ ಒಂದು ವಿಷಯದ ಬಗ್ಗೆ ಪುಸ್ತಕ ಬರೆದ ತಕ್ಷಣ ಅವರು ಬುದ್ಧಿ ಜೀವಿಗಳು ಎನ್ನಿಸಿಕೊಳ್ಳುವುದಿಲ್ಲ. ನಾನು ಈ ವರೆಗೆ ಸುಮಾರು 6000 ಪುಸ್ತಕಗಳನ್ನು ಓದಿದ್ದೇನೆ. ನನಗ್ಯಾವತ್ತೂ ಪುಸ್ತಕ ಬರೆದಾಕ್ಷಣ ಪ್ರಬುದ್ಧರು ಎನ್ನಿಸಿಲ್ಲ. ಗಾಂಧೀಜಿ ಮೈಮೇಲೆ ತುಂಬ ಕಡಿಮೆ ಬಟ್ಟೆ ಧರಿಸುತ್ತಿದ್ದರು. ಧೋತಿ ಮೂಲಕ ಮೈಮುಚ್ಚಿಕೊಳ್ಳುತ್ತಿದ್ದರು. ಇಡೀ ದೇಶ ಅವರನ್ನು ಬಾಪು ಎಂದು ಕರೆಯುತ್ತದೆ. ಹಾಗಂತ ಕಡಿಮೆ ಬಟ್ಟೆ ಧರಿಸುವವರೆಲ್ಲ ಶ್ರೇಷ್ಠರು ಎಂದು ಭಾವಿಸುವುದು ತಪ್ಪು. ಹಾಗೆಲ್ಲ ತುಂಡುಡುಗೆ ಹಾಕಿಕೊಂಡವರು ಮಹಾನ್ ವ್ಯಕ್ತಿಗಳಾಗುವಂತಿದ್ದರೆ ರಾಖಿ ಸಾವಂತ್ ಮಹಾತ್ಮ ಗಾಂಧಿಗಿಂತಲೂ ಶ್ರೇಷ್ಠ ಎನ್ನಿಸಿಕೊಳ್ಳುತ್ತಿದ್ದರು ಎಂದು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
ಹೃದಯ್ ನಾರಾಯಣ್ ದೀಕ್ಷಿತ್ರ ಈ ಭಾಷಣದ ತುಣುಕು ವೈರಲ್ ಆಗುತ್ತಿದ್ದಂತೆ ಸಿಕ್ಕಾಪಟೆ ವಿವಾದ, ಟೀಕೆಗಳು ಹರಿದುಬಂದಿವೆ. ನಂತರ ಹೃದಯ್ ನಾರಾಯಣ್ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ. ನಾನು ಹೇಳಿದ ಮಾತು ವಿಡಿಯೋ ಕ್ಲಿಪ್ ವೈರಲ್ ಆಗುತ್ತಿದೆ. ಆ ಮಾತುಗಳನ್ನು ಹಲವರು ಬೇರೆ ಅರ್ಥದಲ್ಲಿ ಭಾವಿಸುತ್ತಿದ್ದಾರೆ. ಆದರೆ ಹಾಗೆ ಭಾವಿಸಬೇಡಿ..ನಾನು ತೀರ ಸರಳ ಅರ್ಥದಲ್ಲಿ ಅದನ್ನು ಹೇಳಿದ್ದೇನೆ. ಹೇಗೆ, ಪುಸ್ತಕ ಬರೆಯುವವರನ್ನೆಲ್ಲ ಬುದ್ಧಿ ಜೀವಿಗಳು ಎಂದು ಹೇಳಲು ಸಾಧ್ಯವಿಲ್ಲವೋ, ಹಾಗೇ, ಕಡಿಮೆ ಬಟ್ಟೆ ಧರಿಸಿದ ಮಾತ್ರಕ್ಕೆ ಮಹಾತ್ಮ ಗಾಂಧಿ ಆಗುವುದಿಲ್ಲ ಎಂದಷ್ಟೇ ನಾನು ಹೇಳಿದ್ದು ಎಂದು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: Virat Kohli: ಎಬಿ ಡಿವಿಲಿಯರ್ಸ್ ಅಲ್ಲ: ವಿರಾಟ್ ಕೊಹ್ಲಿ ಬಳಿಕ ಆರ್ಸಿಬಿ ತಂಡದ ನಾಯಕ ಯಾರು ಗೊತ್ತಾ?
(UP Assembly Speaker stoked a controversy By saying dressing scantily cannot turn a Rakhi Sawant into Mahatma Gandhi)