ಕೇಂದ್ರ ಲೋಕಸೇವಾ ಆಯೋಗವು (Union Public Service Commission – UPSC) ನಾಗರಿಕ ಸೇವಾ ಪರೀಕ್ಷೆಗಳ ಲಿಖಿತ ಪರೀಕ್ಷೆಯ ಫಲಿತಾಂಶವನ್ನು ಮಂಗಳವಾರ (ಮಾರ್ಚ್ 23) ರಾತ್ರಿ ಪ್ರಕಟಿಸಿದೆ. ಆಯೋಗದ ಅಧಿಕೃತ ಜಾಲತಾಣವಾದ upsc.gov.in ಮೂಲಕ ಫಲಿತಾಂಶವನ್ನು ಅಭ್ಯರ್ಥಿಗಳು ಪರಿಶೀಲಿಸಿಕೊಳ್ಳಬಹುದು. ಕಳೆದ ಜನವರಿ 8ರಿಂದ 17ರವರೆಗೆ ಯುಪಿಎಸ್ಸಿ ಪರೀಕ್ಷೆಗಳು ನಡೆದಿದ್ದವು.
ಲಿಖಿತ ಪರೀಕ್ಷೆ ಎದುರಿಸಿ, ತೇರ್ಗಡೆಯಾದ ಎಲ್ಲ ಅಭ್ಯರ್ಥಿಗಳೂ ವ್ಯಕ್ತಿತ್ವ ಪರೀಕ್ಷೆಗಾಗಿ ಸಂದರ್ಶನಕ್ಕೆ (ಪರ್ಸನಾಲಿಟಿ ಟೆಸ್ಟ್) ಹಾಜರಾಗಬೇಕಿದೆ. ಸಂದರ್ಶನದಲ್ಲಿ ತೇರ್ಗಡೆಯಾದವರನ್ನು ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ವಿದೇಶಾಂಗ ಸೇವೆ (ಐಎಫ್ಎಸ್), ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಮತ್ತು ಕೇಂದ್ರ ಸರ್ಕಾರದ ಇತರ ಎ ಮತ್ತು ಬಿ ವೃಂದದ ಹುದ್ದೆಗಳಿಗೆ ಕೇಂದ್ರ ಸರ್ಕಾರ ಪರಿಗಣಿಸಲಿದೆ. ಫಲಿತಾಂಶ ಪರಿಶೀಲಿಸಲು ಅಭ್ಯರ್ಥಿಗಳು ಹೀಗೆ ಮಾಡಬೇಕು.
ಯುಪಿಎಸ್ಸಿ ನಾಗರಿಕ ಸೇವೆಗಳ ಫಲಿತಾಂಶ ತಿಳಿಯೋದು ಹೇಗೆ?
– ಯುಪಿಎಸ್ಸಿಯ ಅಧಿಕೃತ ವೆಬ್ಸೈಟ್ upsc.gov.in ಗೆ ಭೇಟಿ ನೀಡಿ.
– ಹೋಂ ಪೇಜ್ನಲ್ಲಿರುವ UPSC Civil Services Result 2020 link ಮೇಲೆ ಕ್ಲಿಕ್ ಮಾಡಿ
– ಓಪನ್ ಆಗುವ ಪಿಡಿಎಫ್ ಫೈಲ್ನಲ್ಲಿ ನಿಮ್ಮ ರೋಲ್ ನಂಬರ್ ಇದೆಯೇ ನೋಡಿಕೊಳ್ಳಿ
– ಇದೇ ಪಿಡಿಎಫ್ ಫೈಲ್ ಅನ್ನು ಡೌನ್ಲೋಡ್ ಮಾಡಿಕೊಂಡು, ಪ್ರಿಂಟ್ ತೆಗೆದು ಇರಿಸಿಕೊಳ್ಳಬಹುದು.
ಲಿಖಿತ ಪರೀಕ್ಷೆ ತೇರ್ಗಡೆಯಾಯಿತು ಮುಂದೇನು?
ಲಿಖಿತ ಪರೀಕ್ಷೆ ತೇರ್ಗಡೆಯಾದ ಎಲ್ಲ ಅಭ್ಯರ್ಥಿಗಳೂ ಮುಂದಿನ ದಿನಗಳಲ್ಲಿ ಮತ್ತೊಂದು ವಿವರವಾದ ಅರ್ಜಿಯನ್ನು ಭರ್ತಿ ಮಾಡಬೇಕು. ಮಾರ್ಚ್ 25ರಿಂದ ಏಪ್ರಿಲ್ 5ರವರೆಗೆ ಈ ಅರ್ಜಿ ಯುಪಿಎಸ್ಸಿ ವೆಬ್ಸೈಟ್ನಲ್ಲಿ ಲಭ್ಯವಿರಲಿದೆ. ತೇರ್ಗಡೆಯಾದ ಅಭ್ಯರ್ಥಿಗಳ ಪರ್ಸನಾಲಿಟಿ ಟೆಸ್ಟ್ ದೆಹಲಿಯ ಯುಪಿಎಸ್ಸಿ ಕಚೇರಿಯಲ್ಲಿ ಶೀಘ್ರ ಆರಂಭವಾಗಲಿದೆ. ಪರ್ಸನಾಲಿಟಿ ಟೆಸ್ಟ್ನಲ್ಲಿ ಪಾಲ್ಗೊಳ್ಳಬೇಕಾದ ಅಭ್ಯರ್ಥಿಗಳಿಗೆ ಇ-ಕರೆಯೋಲೆಯನ್ನು (e-Summon) ಯುಪಿಎಸ್ಸಿ ವೆಬ್ಸೈಟ್ನಲ್ಲಿ ಶೀಘ್ರ ಸಿಗುವಂತೆ ಮಾಡಲಾಗುತ್ತದೆ.
ಸಂದರ್ಶನದಲ್ಲಿ ಫೇಲ್ ಆದರೂ ಹಲವು ಅನುಕೂಲ
ಭಾರತೀಯ ನಾಗರಿಕ ಸೇವೆ ಪರೀಕ್ಷೆಗಳಿಗೆ (Indian Civil Service Examination) ನೋಂದಣಿ ಮಾಡಿಕೊಂಡವರು ಪ್ರಾಥಮಿಕ (ಪ್ರಿಲಿಮಿನರಿ) ಮತ್ತು ಮುಖ್ಯ ಪರೀಕ್ಷೆಗಳಲ್ಲಿ (ಮೇನ್ಸ್) ಮುನ್ನಡೆ ಸಾಧಿಸಿ, ಸಂದರ್ಶನದ ಹಂತದಲ್ಲಿ ವಿಫಲರಾದರೂ ಕೇಂದ್ರ ಸರ್ಕಾರದ ಆಡಳಿತ ವ್ಯವಸ್ಥೆ, ಸರ್ಕಾರಿ / ಖಾಸಗಿ ಸಂಸ್ಥೆಗಳು, ಉದ್ಯಮಗಳಲ್ಲಿ ಉನ್ನತ ಹುದ್ದೆಗಳು ಸಿಗುವಂತೆ ಅವಕಾಶ ಮಾಡಿಕೊಡುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ.
ಹಲವು ವರ್ಷಗಳಿಂದ ಚರ್ಚೆಯ ಹಂತದಲ್ಲಿಯೇ ಇದ್ದ ಕೇಂದ್ರ ಲೋಕಸೇವಾ ಆಯೋಗದ (Union Public Service Commission – UPSC) ಈ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅದರಂತೆ ಈ ವರ್ಷದಿಂದ ಕೇಂದ್ರ ಲೋಕಸೇವಾ ಆಯೋಗವು ಪ್ರಿಲಿಮಿನರಿ ಮತ್ತು ಮೇನ್ಸ್ನಲ್ಲಿ ತೇರ್ಗಡೆಯಾಗಿ, ಸಂದರ್ಶನದಲ್ಲಿ ವಿಫಲರಾಗುವ ಅಭ್ಯರ್ಥಿಗಳ ಅಂಕಗಳಿಕೆ ಮತ್ತು ಇತರ ವಿವರಗಳನ್ನು ಆಯೋಗವು ಸಾರ್ವಜನಿಕವಾಗಿ ಪ್ರಕಟಿಸುತ್ತದೆ. ಈ ಮಾಹಿತಿಯನ್ನು ಬಳಸಿಕೊಳ್ಳುವ ಇತರ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು ಇಂಥ ಅಭ್ಯರ್ಥಿಗಳಿಗೆ ಉದ್ಯೋಗ ನೀಡುವಾಗ ಆದ್ಯತೆ ನೀಡುವುದು ನಿರೀಕ್ಷಿತ.
2021ರ ಸಾಲಿನ ಪರೀಕ್ಷೆಗಳಿಗೆ ಅರ್ಜಿ ಆಹ್ವಾನ
ಕಳೆದ ವರ್ಷ ಕೊರೊನಾ ಸೋಂಕು ಹರಡುವುದಕ್ಕೆ ತಡೆಯೊಡ್ಡಲೆಂದು ಜಾರಿ ಮಾಡಿದ ಲಾಕ್ಡೌನ್ ಕಾರಣದಿಂದಾಗಿ ಐಎಎಸ್ ಕನಸು ಹೊತ್ತಿದ್ದ ಆಕಾಂಕ್ಷಿಗಳು ತುಸು ಹಿನ್ನಡೆ ಅನುಭವಿಸುವಂತಾಯಿತು. ಈ ವರ್ಷ ಮತ್ತೆ ಐಎಎಸ್ ಪರ್ವ ಆರಂಭವಾಗಿದೆ. ಭಾರತೀಯ ಆಡಳಿತ ಸೇವೆ (Indian Administration Service – IAS) ಮತ್ತು ಭಾರತೀಯ ಅರಣ್ಯ ಸೇವೆ (Indian Forest Service – IFS) ಪರೀಕ್ಷೆಗಳಿಗೆ ಯುಪಿಎಸ್ಸಿ ಮಾರ್ಚ್ 4ರಂದೇ ಅಧಿಸೂಚನೆ ಹೊರಡಿಸಿದೆ. ಎರಡೂ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 24 ಕೊನೆಯ ದಿನ. ಈ ವರ್ಷದ ಐಎಎಸ್ / ಐಎಫ್ಎಸ್ ಪರೀಕ್ಷೆಗಳ ಬಗ್ಗೆ ನೀವು ತಿಳಿದಿರಬೇಕಾದ ಮಾಹಿತಿ ಇಲ್ಲಿದೆ..
ಇದನ್ನೂ ಓದಿ: UPSC Exam 2021: ಐಎಎಸ್ ಪರೀಕ್ಷೆ ಕಟ್ಟಿದವರು ಸಂದರ್ಶನದಲ್ಲಿ ಫೇಲ್ ಆದರೂ ಹಲವು ಅನುಕೂಲ
ಇದನ್ನೂ ಓದಿ: UPSC Calendar: ಐಎಎಸ್, ಐಎಫ್ಎಸ್ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 24 ಕೊನೆಯ ದಿನ
Published On - 8:27 pm, Tue, 23 March 21