ದೆಹಲಿ ಜುಲೈ 19: ವಿವಾದಿತ ತರಬೇತಿ ಪಡೆದ ಭಾರತೀಯ ಆಡಳಿತ ಸೇವೆಗಳ (IAS) ಅಧಿಕಾರಿ ಪೂಜಾ ಖೇಡ್ಕರ್ (Puja Khedkar), ಕಾನೂನು ನೋಡಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ಕೇಂದ್ರ ಸಾರ್ವಜನಿಕ ಸೇವಾ ಆಯೋಗ (UPSC) ತನ್ನ ವಿರುದ್ಧ ಪ್ರಕರಣ ದಾಖಲಿಸಿದ ನಂತರ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಕಾನೂನು ನೋಡಿಕೊಳ್ಳುತ್ತದೆ ಅದು ಏನೇ ಇರಲಿ, ನಾನು ಅದಕ್ಕೆ ಉತ್ತರಿಸುತ್ತೇನೆ ಎಂದು ಪೂಜಾ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಪೂಜಾ ಅವರ ನಾಗರಿಕ ಸೇವಾ ಪರೀಕ್ಷೆ-2022 ರ ಉಮೇದುವಾರಿಕೆಯನ್ನು ರದ್ದುಗೊಳಿಸಲು ಮತ್ತು ಭವಿಷ್ಯದ ಪರೀಕ್ಷೆಗಳು ಮತ್ತು ಆಯ್ಕೆಗಳಿಂದ ಡಿಬಾರ್‌ಮೆಂಟ್ ಮಾಡಲು ಯುಪಿಎಸ್ಸಿ ಶೋಕಾಸ್ ನೋಟಿಸ್ ನೀಡಿದೆ.
“2022 ರ ನಾಗರಿಕ ಸೇವಾ ಪರೀಕ್ಷೆಯ ತಾತ್ಕಾಲಿಕವಾಗಿ ಶಿಫಾರಸು ಮಾಡಲಾದ ಶ್ರೀಮತಿ ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ಅವರ ದುಷ್ಕೃತ್ಯದ ಬಗ್ಗೆ ಯುಪಿಎಸ್ಸಿ ವಿವರವಾದ ಮತ್ತು ಸಂಪೂರ್ಣ ತನಿಖೆ ನಡೆಸಿದೆ. ಈ ತನಿಖೆಯಿಂದ ಅವರು ಪರೀಕ್ಷಾ ನಿಯಮಗಳ ಅಡಿಯಲ್ಲಿ ಅನುಮತಿಸುವ ಮಿತಿಯನ್ನು ಮೀರಿ ಪ್ರಯತ್ನಗಳನ್ನು ಮೋಸದಿಂದ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಆಕೆಯ ಹೆಸರು, ಆಕೆಯ ತಂದೆ ಮತ್ತು ತಾಯಿಯ ಹೆಸರು, ಆಕೆಯ ಭಾವಚಿತ್ರ/ಸಹಿ, ಆಕೆಯ ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಮತ್ತು ವಿಳಾಸವನ್ನು ಬದಲಾಯಿಸುವ ಮೂಲಕ ಆಕೆಯ ಗುರುತನ್ನು ನಕಲಿ ಮಾಡಿದ್ದಾರೆ” ಎಂದು ಆಯೋಗವು ಹೇಳಿಕೆಯಲ್ಲಿ ತಿಳಿಸಿದೆ.
ಮಹಾರಾಷ್ಟ್ರ ಕೇಡರ್‌ನ 2022 ರ ಬ್ಯಾಚ್‌ನ ಐಎಎಸ್ ಅಧಿಕಾರಿ ಖೇಡ್ಕರ್, ಮಹಾರಾಷ್ಟ್ರದ ಪುಣೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ತನ್ನ ತರಬೇತಿಯ ಸಮಯದಲ್ಲಿ ತನಗೆ ಅರ್ಹವಲ್ಲದ ಸವಲತ್ತುಗಳು ಮತ್ತು ಸೌಲಭ್ಯಗಳನ್ನು ಬೇಡಿಕೆಯಿಡುವ ಮೂಲಕ ತನ್ನ ಅಧಿಕಾರ ಮತ್ತು ಸವಲತ್ತುಗಳನ್ನು ದುರುಪಯೋಗಪಡಿಸಿಕೊಂಡ ಆರೋಪ ಹೊತ್ತಿದ್ದಾರೆ.
ಖೇಡ್ಕರ್ ಅವರು ಸುತ್ತಮುತ್ತಲಿನ ಎಲ್ಲರನ್ನು ಬೆದರಿಸುತ್ತಿದ್ದಾರೆ. ಅವರು ಬಳಸುತ್ತಿದ್ದ ಖಾಸಗಿ ಆಡಿ (ಐಷಾರಾಮಿ ಸೆಡಾನ್) ಕಾರಿನ ಮೇಲೆ ಕೆಂಪು-ನೀಲಿ ದೀಪವನ್ನು (ಉನ್ನತ ಶ್ರೇಣಿಯ ಅಧಿಕಾರಿಯನ್ನು ಸೂಚಿಸುವ) ಇರಿಸಿದರು. ಅದರ ಮೇಲೆ ‘ಮಹಾರಾಷ್ಟ್ರ ಸರ್ಕಾರ’ ಎಂದು ಬರೆದಿದ್ದಾರೆ ಎಂದು ಆರೋಪಿಸಲಾಗಿದೆ.
ಪುಣೆ ಜಿಲ್ಲಾಧಿಕಾರಿಗಳು ಈ ವಿಷಯವನ್ನು ಗಮನಕ್ಕೆ ತಂದ ನಂತರ, ಖೇಡ್ಕರ್ ಅವರನ್ನು ವಿದರ್ಭ ಪ್ರದೇಶದ ವಾಶಿಮ್ ಜಿಲ್ಲಾಧಿಕಾರಿ ಕಚೇರಿಗೆ ವರ್ಗಾಯಿಸಲಾಯಿತು. ಯುಪಿಎಸ್ ಸಿ ದಾಖಲೆಗಳ ಪ್ರಕಾರ, ಅವರು ಅಂಗವೈಕಲ್ಯವಿರು ವ್ಯಕ್ತಿಯಾಗಿ OBC ವರ್ಗದ ಅಡಿಯಲ್ಲಿ 2022 ರ ನಾಗರಿಕ ಸೇವಾ ಪರೀಕ್ಷೆಯಲ್ಲಿ 821 ನೇ ರ್‍ಯಾಂಕ್ ಗಳಿಸಿದ್ದಾರೆ.
ಇದನ್ನೂ ಓದಿ: ಸಿಎ ಪರೀಕ್ಷೆಯಲ್ಲಿ ಮಗ ಪಾಸಾದ ಸುದ್ದಿ ಕೇಳಿ ಖುಷಿಯಿಂದ ಕಣ್ಣೀರಿಟ್ಟ ತರಕಾರಿ ವ್ಯಾಪಾರಿ; ಭಾವುಕರಾದ ನೆಟ್ಟಿಗರು
ಅಂಗವೈಕಲ್ಯ ಮತ್ತು ಇತರೆ ಹಿಂದುಳಿದ ವರ್ಗ ಅಥವಾ ಒಬಿಸಿ (ನಾನ್-ಕ್ರೀಮಿ ಲೇಯರ್) ದುರುಪಯೋಗಕ್ಕೆ ಸಂಬಂಧಿಸಿದ ಖೇಡ್ಕರ್ ಪ್ರಕರಣದ ತನಿಖೆಗಾಗಿ ಜುಲೈ 11 ರಂದು ಕೇಂದ್ರವು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮನೋಜ್ ಕುಮಾರ್ ದ್ವಿವೇದಿ ಅವರ ಏಕ-ಸದಸ್ಯ ತನಿಖಾ ಸಮಿತಿಯನ್ನು ರಚಿಸಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ