ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಅಂದರೆ ಮನೀಶ್ ಮಹೇಶ್ವರಿ ಬಂಧನಕ್ಕೆ ಕರ್ನಾಟಕ ಹೈಕೋರ್ಟ್ ನೀಡಿರುವ ತಾತ್ಕಾಲಿಕ ತಡೆ ಆದೇಶವನ್ನು ಪ್ರಶ್ನಿಸಿ, ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಉತ್ತರ ಪ್ರದೇಶ ಘಾಜಿಯಾಬಾದ್ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ನಡೆದ ಹಲ್ಲೆ ಸಂಬಂಧ ಪ್ರಚೋದನಕಾರಿ ಟ್ವೀಟ್ಗಳು ಟ್ವಿಟರ್ನಲ್ಲಿ ವೈರಲ್ ಆದ ಬೆನ್ನಲ್ಲೇ, ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಸೇರಿ ಐದಾರು ಜನರ ವಿರುದ್ಧ ಉತ್ತರಪ್ರದೇಶದಲ್ಲಿ ಎಫ್ಐಆರ್ ದಾಖಲಾಗಿತ್ತು. ಹಾಗೇ, ಉತ್ತರಪ್ರದೇಶ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು. ಆದರೆ ಬೆಂಗಳೂರು ನಿವಾಸಿಯಾಗಿರುವ ಮನೀಶ್ ಮಹೇಶ್ವರಿ, ನಿರೀಕ್ಷಣಾ ಜಾಮೀನು ಕೋರಿ ಕರ್ನಾಟಕ ಹೈಕೋರ್ಟ್ಗೆ ಮನವಿ ಮಾಡಿದ್ದರು. ಅದರಂತೆ ಅವರಿಗೆ ಬಂಧನದಿಂದ ತಾತ್ಕಾಲಿಕ ರಕ್ಷಣೆಯೂ ಸಿಕ್ಕಿತ್ತು.
ಉತ್ತರ ಪ್ರದೇಶ ಪೊಲೀಸರ ಸಮನ್ಸ್ಗೆ ಉತ್ತರಿಸಲು ಮನೀಶ್ ಮಹೇಶ್ವರಿ ತಮ್ಮ ವಿರುದ್ಧ ಪ್ರಕರಣ ದಾಖಲಾದ ಲೋನಿ ಠಾಣೆಗೆ ಹೋಗಿರಲಿಲ್ಲ. ಬದಲಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕವೇ ವಿಚಾರಣೆಗೆ ಎದುರಿಸುವುದಾಗಿ ತಿಳಿಸಿದ್ದರು. ಅಷ್ಟರಲ್ಲಿ ಕರ್ನಾಟಕ ಹೈಕೋರ್ಟ್ನಿಂದ ಮಧ್ಯಂತರ ರಕ್ಷಣೆಯೂ ಸಿಕ್ಕಿತ್ತು. ಆದರೀಗ ಅವರಿಗೆ ಮಧ್ಯಂತರ ರಕ್ಷಣೆ ನೀಡಿದ ಹೈಕೋರ್ಟ್ ಆದೇಶಕ್ಕೆ ಪ್ರತಿಯಾಗಿ ಉತ್ತರ ಪ್ರದೇಶ ಪೊಲೀಸರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಮನೀಶ್ ಮಹೇಶ್ವರಿ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಜಿ.ನರೇಂದರ್ ವಿಚಾರಣೆ ಮಾಡಿದ್ದರು. ಪ್ರಸಕ್ತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರ್ಜಿಯನ್ನು ಇನ್ನಷ್ಟು ಪರಿಶೀಲಿಸಿ, ವಿಚಾರಣೆ ನಡೆಸಬೇಕಿದೆ. ಜೂ.29ಕ್ಕೆ ಅಂತಿಮ ತೀರ್ಪು ನೀಡಲಾಗುವುದು. ಅಲ್ಲಿಯವರೆಗೆ ಮನೀಶ್ ಮಹೇಶ್ವರಿ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವಂತಿಲ್ಲ. ಮನೀಶ್ ಬೆಂಗಳೂರು ನಿವಾಸಿಯಾಗಿದ್ದು, ಸಮನ್ಸ್ಗೆ ಉತ್ತರಿಸಲು ಉತ್ತರ ಪ್ರದೇಶಕ್ಕೆ ಪ್ರಯಾಣಿಸುವ ಅಗತ್ಯವಿಲ್ಲ ಎಂದು ನ್ಯಾ.ಜಿ.ನರೇಂದರ್ ಹೇಳಿದ್ದರು. ಅಲ್ಲದೆ, ಪೊಲೀಸರು ವರ್ಚ್ಯುವಲ್ ಆಗಿಯೇ ಮನೀಶ್ ಮಹೇಶ್ವರಿ ವಿಚಾರಣೆ ನಡೆಸಬಹುದು ಎಂದೂ ಕೋರ್ಟ್ ಹೇಳಿತ್ತು.
ಇದೀನ ಮನೀಶ್ ಮಹೇಶ್ವರಿ ವಿರುದ್ಧ ಇನ್ನೊಂದು ಪ್ರಕರಣದಡಿ ಉತ್ತರ ಪ್ರದೇಶದಲ್ಲೇ ಎಫ್ಐಆರ್ ದಾಖಲಾಗಿದೆ. ಭಾರತ ಭೂಪಟವನ್ನು ತಪ್ಪಾಗಿ ತೋರಿಸಿದ ಟ್ವಿಟರ್ ಇಂಡಿಯಾದ್ದು ದೇಶದ್ರೋಹದ ಮನೋಭಾವ ಎಂದು, ಉತ್ತರ ಪ್ರದೇಶದ ಭಜರಂಗ ದಳದ ಮುಖಂಡ ಪ್ರವೀಣ್ ಭಾಟಿ ದೂರು ನೀಡಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ‘ಬಲವಂತದ ಮತಾಂತರ ಮತ್ತು ವಿವಾಹ’ದ ವಿರುದ್ಧ ಸಿಖ್ ಸಮುದಾಯದ ಪ್ರತಿಭಟನೆ
(Uttar Pradesh Police Approach Supreme Court against Court Relief To Twitter India Chief Manish Maheshwari)
Published On - 12:21 pm, Tue, 29 June 21