
ಹರ್ದೋಯ್, ಆಗಸ್ಟ್ 28: ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ಆತಂಕಕಾರಿ ಘಟನೆ (Shocking News) ನಡೆದಿದೆ. ಮಹಿಳೆಯೊಬ್ಬರು ಬಾಯ್‌ಫ್ರೆಂಡ್ ಜೊತೆ ನಡೆದ ತೀವ್ರ ವಾಗ್ವಾದದ ನಂತರ ಆತನ ಗುಪ್ತಾಂಗಗಳನ್ನು ಗಾಯಗೊಳಿಸಿದ್ದಾರೆ. ಈ ಘಟನೆ ಮಲ್ಲವಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಲ್ಲೆಯ ನಂತರ ರಾಜಸ್ಥಾನ ನಿವಾಸಿಯಾದ ಆ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಆತನ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ದಾಳಿ ನಡೆಸಿದ ಮಹಿಳೆಯನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆ ವ್ಯಕ್ತಿ ಮತ್ತು ಮಹಿಳೆ ಮೊದಲು ಒಂದೇ ಕಂಪನಿಯಲ್ಲಿ ಕೆಲಸ ಮಾಡುವಾಗ ಭೇಟಿಯಾಗಿದ್ದರು. ಅದಾದ ನಂತರ ಪ್ರೀತಿಯಾಗಿತ್ತು. ಅವರು ಸುಮಾರು 4 ವರ್ಷಗಳಿಂದ ಸಂಬಂಧದಲ್ಲಿದ್ದರು. ಬುಧವಾರ ರಾತ್ರಿ ಆ ಮಹಿಳೆ ತನ್ನ ಪ್ರೇಮಿಯನ್ನು ತನ್ನ ಮನೆಗೆ ಆಹ್ವಾನಿಸಿದಳು. ಆದರೆ, ಮಾತುಕತೆಯ ವೇಳೆ ಸಣ್ಣ ವಿಚಾರಕ್ಕೆ ಜಗಳವಾಗಿದ್ದು, ಕೋಪದಿಂದ ಆ ಮಹಿಳೆ ಅವನ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ಅವನು ಗಂಭೀರವಾಗಿ ಗಾಯಗೊಂಡಿದ್ದಾನೆ.
ಇದನ್ನೂ ಓದಿ: ಪ್ರಿಯಕರನನ್ನು ಮನೆಗೆ ಕರೆಸಿ ಗುಪ್ತಾಂಗ ಕತ್ತರಿಸಿದ ಪ್ರೇಯಸಿ
ಇದೇ ರೀತಿಯ ಘಟನೆಯಲ್ಲಿ, ಆಗಸ್ಟ್ 19ರಂದು ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಅಡುಗೆ ಮಾಡುವ ವೇಳೆ ಜಗಳ ನಡೆದು, ಮಹಿಳೆಯೊಬ್ಬರು ತನ್ನ ಪತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದರು. ಈ ಘಟನೆ ರಾಸ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮಹಾವೀರ್ ಅಖಾರ ಪ್ರದೇಶದಲ್ಲಿ ನಡೆದಿತ್ತು. ಸಂಜಯ್ ಕುಮಾರ್ (28) ತಮ್ಮ ಪತ್ನಿ ಲಾಲ್ಬುಚಿ ದೇವಿ ಅವರೊಂದಿಗೆ ಸಣ್ಣಪುಟ್ಟ ಮನೆಯ ವಿಷಯಕ್ಕೆ ಸಂಬಂಧಿಸಿದಂತೆ ತೀವ್ರ ವಾಗ್ವಾದ ನಡೆಸಿದಾಗ ಈ ಘಟನೆ ಸಂಭವಿಸಿತ್ತು. ಮನೆಯಲ್ಲಿ ಹಿಟ್ಟು ಇರಲಿಲ್ಲ, ಆದ್ದರಿಂದ ಮಹಿಳೆ ತನ್ನ ಪತಿ ಮತ್ತು ಮೂವರು ಮಕ್ಕಳಿಗೆ ‘ಖಿಚಡಿ’ ಮಾಡಿದ್ದರು. ಆದರೆ, ಮನೆಗೆ ಬಂದ ನಂತರ ಹೆಂಡತಿ ಬಳಿ ಸಂಜಯ್ ‘ರೊಟ್ಟಿ’ ಮಾಡುವಂತೆ ಒತ್ತಾಯಿಸಿದ್ದ. ಆಕೆ ಹಿಟ್ಟು ಖಾಲಿಯಾಗಿದೆ ಎಂದಾಗ ಜಗಳವಾಡಿದ್ದ. ಇದೇ ಕೋಪದಲ್ಲಿ ಆಕೆ ಚಾಕುವಿನಿಂದ ಆತನನ್ನು ಇರಿದಿದ್ದಳು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ