ಮತಾಂತರ ಆರೋಪಿಸಿ ರೂರ್ಕಿ ಚರ್ಚ್ ಮೇಲೆ ದಾಳಿ: 200 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ ಉತ್ತರಾಖಂಡ್ ಪೊಲೀಸರು

| Updated By: ರಶ್ಮಿ ಕಲ್ಲಕಟ್ಟ

Updated on: Oct 05, 2021 | 2:15 PM

Uttarakhand Police: ಪೊಲೀಸರ ದೂರಿನ ಪ್ರಕಾರ ರೂರ್ಕಿಯ ಸೋಲಾನಿಪುರಂ ಕಾಲೋನಿಯಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಚರ್ಚ್ ಮಿಷನರಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಗುಂಪೊಂದು ಚರ್ಚ್ ಒಳಗೆ ನುಗ್ಗಿದೆ.

ಮತಾಂತರ ಆರೋಪಿಸಿ ರೂರ್ಕಿ ಚರ್ಚ್ ಮೇಲೆ ದಾಳಿ: 200 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ ಉತ್ತರಾಖಂಡ್ ಪೊಲೀಸರು
ದಾಳಿಗೊಳಗಾಗಿರುವ ಚರ್ಚ್
Follow us on

ರೂರ್ಕಿ: ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದ್ದಾಗ ರೂರ್ಕಿಯಲ್ಲಿನ ಚರ್ಚ್ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 200 ಜನರ ವಿರುದ್ಧ ಉತ್ತರಾಖಂಡ್ ಪೊಲೀಸರು ಪ್ರಕರಣ ದಾಖಲಿದ್ದಾರೆ. ದಾಳಿ ನಡೆಸಿದವರು ಹಿಂದೂ ಬಲಪಂಥೀಯ ಗುಂಪಿಗೆ ಸೇರಿದವರು  ಎಂದು ಇಂಡಿಯಾ ಟೈಮ್ಸ್ ವರದಿ ಮಾಡಿದೆ. ಬಲಪಂಥೀಯ ಗುಂಪು ಕ್ರಿಶ್ಚಿಯನ್ ಮಿಷನರಿಗಳು ಮತಾಂತರ ದಂಧೆಯನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ದೂರಿನ ಪ್ರಕಾರ ರೂರ್ಕಿಯ ಸೋಲಾನಿಪುರಂ ಕಾಲೋನಿಯಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಚರ್ಚ್ ಮಿಷನರಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಗುಂಪೊಂದು ಚರ್ಚ್ ಒಳಗೆ ನುಗ್ಗಿತು. ಅವರು ಚರ್ಚ್ ಧ್ವಂಸಗೊಳಿಸಿದರು ಮತ್ತು ಕೆಲವು ಭಕ್ತರನ್ನು ನಿಂದಿಸಿದರು ಎಂದು ವರದಿಯಲ್ಲಿ ಹೇಳಿದೆ.

ಸ್ಥಳೀಯ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ), ಬಜರಂಗದಳ ಮತ್ತು ಭಾರತೀಯ ಜನತಾ ಪಕ್ಷದ ಯುವ ಘಟಕದ 200 ಕ್ಕೂ ಹೆಚ್ಚು ಪುರುಷರು ಮತ್ತು ಮಹಿಳೆಯರು ಚರ್ಚ್‌ಗೆ ನುಗ್ಗಿ ಅದನ್ನು ಧ್ವಂಸ ಮಾಡಲು ಆರಂಭಿಸಿದರು. ಚರ್ಚಿಗೆ ಹೋಗುವವರನ್ನು ತಡೆದರು ಎಂದು ಚರ್ಚ್ ಪಾದ್ರಿಯ ಪತ್ನಿ ಪ್ರಿಯೊ ಸಾಧನಾ ಲಾನ್ಸ್ ಹೇಳಿರುವುದಾಗಿ ದಿ ವೈರ್ ವರದಿ ಮಾಡಿದೆ.


ಬೆಳಿಗ್ಗೆ 10 ರ ಸುಮಾರಿಗೆ ಚರ್ಚೊಳಗೆ ನುಗ್ಗಿದ ಗುಂಪು ಚರ್ಚ್‌ನಲ್ಲಿದ್ದ ಕುರ್ಚಿಗಳು, ಮೇಜುಗಳು, ಸಂಗೀತ ಉಪಕರಣಗಳು ಮತ್ತು ಛಾಯಾಚಿತ್ರಗಳನ್ನು ನಾಶಪಡಿಸಿತು. ದಿ ವೈರ್ ಜೊತೆ ದೂರವಾಣಿಯಲ್ಲಿ ಮಾತನಾಡಿದ ಲಾನ್ಸ್, ದಾಳಿಕೋರರು ರಂಪಾಟ ಮಾಡಿದರು ಮತ್ತು ಅವರ ದಾರಿಯಲ್ಲಿ ಬಂದ ಎಲ್ಲವನ್ನೂ ಒಡೆದು ಹಾಕಿದರು ಎಂದು ಹೇಳಿದ್ದಾರೆ.

“ಉದ್ರಿಕ್ತ ಗುಂಪು ‘ವಂದೇ ಮಾತರಂ’ ಮತ್ತು ‘ಭಾರತ್ ಮಾತಾ ಕೀ ಜೈ’ ಎಂದು ಘೋಷಣೆಗಳನ್ನು ಕೂಗುತ್ತಾ, ಕಟ್ಟಡದ ಮೊದಲ ಮಹಡಿಯಲ್ಲಿರುವ ಚರ್ಚ್‌ಗೆ ನುಗ್ಗಿತು. “ಅವರು ನಮ್ಮ ಸ್ವಯಂಸೇವಕರಿಗೆ ಹೊಡೆದರು ಮತ್ತು ಮಹಿಳಾ ದಾಳಿಕೋರರು ನಮ್ಮ ಮಹಿಳೆಯರಿಗೆ ಹೊಡೆದರು. ವಿಧ್ವಂಸಕ ಕೃತ್ಯವು 40 ನಿಮಿಷಗಳಿಗಿಂತ ಹೆಚ್ಚು ಕಾಲ ನಡೆಯಿತು. ರಜತ್ ಎಂಬ ಚರ್ಚ್ ನ ಸ್ವಯಂಸೇವಕನಿಗೆ ತಲೆಗೆ ಗಂಭೀರ ಗಾಯಗಳಾಗಿವೆ. ಅವರನ್ನು ಡೆಹ್ರಾಡೂನ್ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಲಾನ್ಸ್ ಹೇಳಿದ್ದಾರೆ .


ತನ್ನ ಮಗಳು ಪರ್ಲ್ ಸೇರಿದಂತೆ ಹಾಜರಿದ್ದ ಮಹಿಳೆಯರನ್ನು ದಾಳಿಕೋರರು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಲಾನ್ಸ್ ಆರೋಪಿಸಿದ್ದಾರೆ. ಮತ್ತೊಬ್ಬ ಚರ್ಚ್ ಅನುಯಾಯಿ ಅಕ್ಷಿ ಚೌಹಾಣ್ ಇದನ್ನು ಖಚಿತಪಡಿಸಿದ್ದಾರೆ. “ಒಬ್ಬ ವಯಸ್ಸಾದ ವ್ಯಕ್ತಿ ಪರ್ಲ್ ಅವರನ್ನು ಬಲವಂತವಾಗಿ ಅಪ್ಪಿಕೊಂಡಿದ್ದನ್ನು ನಾನು ನೋಡಿದೆ ಮತ್ತು ಅವಳು ಅವನ ಕೈಯಿಂದ ಬಿಡಿಸಿ ಕೊಳಳಲು ಹೆಣಗಾಡುತ್ತಿದ್ದಳು. ನಾನು ಅವಳನ್ನು (ಪರ್ಲ್ ) ರಕ್ಷಿಸಲು ಹೋದಾಗ, ದಾಳಿಕೋರರು ನಾನು ಒಬ್ಬ ಹಿಂದೂ ಆಗಿರುವುದರಿಂದ ಚರ್ಚ್‌ನಲ್ಲಿ ಏನು ಮಾಡುತ್ತಿದ್ದೇನೆ ಎಂದು ಕೇಳಿದರು ಎಂದು “ಚೌಹಾಣ್ ದಿ ವೈರ್‌ಗೆ ತಿಳಿಸಿದರು. ನಂತರ ದುಷ್ಕರ್ಮಿಗಳು ಚೌಹಾಣ್ ನ್ನು ದೂರ ತಳ್ಳಿ ಆಕೆಯ ಕೂದಲು ಎಳೆದು ಥಳಿಸಿದ್ದಾರೆ.

ಪ್ರತ್ಯಕ್ಷದರ್ಶಿಯಾಗಿರುವ ಸುಮಿತ್ ಕುಮಾರ್ ದಾಳಿಗೆ ದಾಳಿಕೋರರು ಚರ್ಚ್ ಆವರಣದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳನ್ನು ಹಾನಿಗೊಳಿಸಿದ್ದಾರೆ ಎಂದು ದಿ ವೈರ್​​ಗೆ ತಿಳಿಸಿದರು.

“ಮಹಿಳಾ ದುಷ್ಕರ್ಮಿಗಳು ಚರ್ಚ್‌ನ ಮಹಿಳೆಯರ ಮೇಲೆ ದಾಳಿ ಮಾಡಿದರು ಮತ್ತು ಪುರುಷರು ಎಲ್ಲವನ್ನೂ ಮುರಿದರು. ಮೇಜುಲ್, ಕುರ್ಚಿಗಳು, ಇನ್ವರ್ಟರ್‌ಗಳು ಮತ್ತು ಫೋಟೋಗಳನ್ನು ಎಲ್ಲವನ್ನೂ ಹಾಳು ಮಾಡಿದರು” ಎಂದು ಕುಮಾರ್ ಹೇಳಿದರು.

ಎಫ್‌ಐಆರ್ ಪ್ರತಿ ದಿ ವೈರ್ ಗೆ ಲಭ್ಯವಾಗಿದ್ದು ಐಪಿಸಿ ಸೆಕ್ಷನ್ 295, 296, 395, 323, 504, 506 ಮತ್ತು 427 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರಜನಿ ಗೋಯೆಲ್, ರಾಖಿ ಪ್ರಧಾನ್, ಬನಿತಾ ಚೌಹಾಣ್, ಸೀಮಾ ಗೋಯೆಲ್ ಮತ್ತು ಇಬ್ಬರು ಪುರುಷರು – ಧೀರ್ ಸಿಂಗ್ ಮತ್ತು ಶಿವ ಪ್ರಸಾದ್ ತ್ಯಾಗಿ ಹೆಸರು ಎಫ್‌ಐಆರ್‌ನಲ್ಲಿದೆ. ಈ ವ್ಯಕ್ತಿಗಳು ರೂರ್ಕಿಯ ನಿವಾಸಿಗಳು ಎಂದು ತಿಳಿದುಬಂದಿದೆ ಮತ್ತು ಅವರು ಚರ್ಚ್ ಅನ್ನು ಧ್ವಂಸ ಮಾಡುವಾಗ ಇದ್ದರು ಎಂದು ಲಾನ್ಸ್ ಗುರುತಿಸಿದ್ದಾರೆ.

ಇದನ್ನೂ ಓದಿ: Pandora Papers ಗಣ್ಯ ವ್ಯಕ್ತಿಗಳ ಹಣಕಾಸು ವ್ಯವಹಾರದ ರಹಸ್ಯ ದಾಖಲೆ ಸೋರಿಕೆ; ಏನಿದು ಪಂಡೋರಾ ಪೇಪರ್ಸ್?

Published On - 3:54 pm, Mon, 4 October 21