ಆಕ್ಸಿಜನ್​, ವ್ಯಾಕ್ಸಿನ್ ಕೊರತೆಗೆ ಕೇಂದ್ರ ಸರ್ಕಾರದ ಕೆಟ್ಟ ಯೋಜನೆಯೇ ಕಾರಣ: ಪ್ರಿಯಾಂಕಾ ಗಾಂಧಿ

  • TV9 Web Team
  • Published On - 11:18 AM, 21 Apr 2021
ಆಕ್ಸಿಜನ್​, ವ್ಯಾಕ್ಸಿನ್ ಕೊರತೆಗೆ ಕೇಂದ್ರ ಸರ್ಕಾರದ ಕೆಟ್ಟ ಯೋಜನೆಯೇ ಕಾರಣ: ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ

ದೆಹಲಿ: ಕೊವಿಡ್​ 19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ದೇಶದೆಲ್ಲೆಡೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದೆ. ಆಕ್ಸಿಜನ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದರೂ, ಕಾಂಗ್ರೆಸ್ ಸೇರಿ ಹಲವು ಪ್ರತಿಪಕ್ಷಗಳು ಕೇಂದ್ರದ ಆಡಳಿತದ ಬಗ್ಗೆ ಟೀಕೆ ಮಾಡುತ್ತಿವೆ. ಮಂಗಳವಾರ (ನಿನ್ನೆ) ರಾತ್ರಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಆಕ್ಸಿಜನ್​ ಅಭಾವ ಆಗುತ್ತಿರುವುದುನ್ನು ಒಪ್ಪಿಕೊಂಡಿದ್ದು, ಉತ್ಪಾದನೆ ಮತ್ತು ಪೂರೈಕೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಇದೇ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ಉಂಟಾಗಿರುವ ವೈದ್ಯಕೀಯ ಆಕ್ಸಿಜನ್ ಕೊರತೆ ಬಗ್ಗೆ ಎಎನ್ಐ ಗೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕಾ ಗಾಂಧಿ, ಜಗತ್ತಿನಲ್ಲೇ ವೈದ್ಯಕೀಯ ಆಕ್ಸಿಜನ್​ ಅತಿದೊಡ್ಡ ಪ್ರಮಾಣದಲ್ಲಿ ಉತ್ಪತ್ತಿ ಆಗುವುದು ಭಾರತದಲ್ಲಿ. ಹೀಗಿದ್ದಾಗ್ಯೂ ಯಾಕೆ ಆಕ್ಸಿಜನ್ ಕೊರತೆ ಆಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ಆಕ್ಸಿಜನ್ ಸಾಕಷ್ಟು ಇದೆ. ಆದರೆ ಅದರ ಅಗತ್ಯ ಎಲ್ಲಿದೆಯೂ ಅಲ್ಲಿಗೆ ಸರಿಯಾದ ಸಮಯದಲ್ಲಿ ತಲುಪುತ್ತಿಲ್ಲ. ಸದ್ಯ ಭಾರತದಲ್ಲಿ ಕೇವಲ 2000 ಟ್ರಕ್​ಗಳನ್ನು ಮಾತ್ರ ವೈದ್ಯಕೀಯ ಆಮ್ಲಜನಕ ಸಾಗಣೆಗೆ ಬಳಸಿಕೊಳ್ಳಲಾಗುತ್ತಿದೆ. ಆಕ್ಸಿಜನ್ ಉತ್ಪತ್ತಿಯಾಗುತ್ತಿದ್ದರೂ ಅದು ಸೇರಬೇಕಾದಲ್ಲಿ ಸೇರದೆ ಇರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಇದರೊಂದಿಗೆ ಕೇಂದ್ರ ಸರ್ಕಾರದ ವಿರುದ್ಧವೂ ಹರಿಹಾಯ್ದ ಪ್ರಿಯಾಂಕಾಗಾಂಧಿ, ದೇಶದಲ್ಲಿ ರೆಮ್​ಡಿಸಿವರ್​ ಇಂಜೆಕ್ಷನ್​ ಕೊರತೆ ಎನ್ನುತ್ತಿದ್ದಾರೆ. ಆದರೆ ಕಳೆದ ಆರು ತಿಂಗಳಲ್ಲಿ ಕೇಂದ್ರ ಸರ್ಕಾರ 1.1 ಮಿಲಿಯನ್ ಇಂಜಕ್ಷನ್​​ನ್ನು ರಫ್ತು ಮಾಡಿದೆ. ಹೀಗಾದರೆ ನಮ್ಮ ದೇಶದಲ್ಲಿ ಅಭಾವ ಆಗದೆ ಮತ್ತಿನ್ನೇನು ಎಂದು ಪ್ರಶ್ನಿಸಿದ್ದಾರೆ.
ದೇಶದಲ್ಲಿ ಆಕ್ಸಿಜನ್ ಕೊರತೆ ಆಗಿರುವುದು ಕೇಂದ್ರ ಸರ್ಕಾರದ ಕೆಟ್ಟ ಯೋಜನೆಗಳಿಂದ, ರೆಮ್​ಡೆಸಿವಿರ್​ ಅಭಾವ ಆಗಿದ್ದು ಯೋಜನೆಯೇ ಇಲ್ಲದೆ ಇರುವುದರಿಂದ ಮತ್ತು ಆಕ್ಸಿಜನ್​ ಕೊರತೆ ಎದುರಾಗಿದ್ದು ಕೇಂದ್ರ ಸರಿಯಾಗಿ ಯೋಜನೆ ರೂಪಿಸದೆ ಇರುವುದರಿಂದ ಎಂದು ಹೇಳಿದ ಪ್ರಿಯಾಂಕಾ ಗಾಂಧಿ, ಇದು ಸಂಪೂರ್ಣವಾಗಿ ಕೇಂದ್ರ ಸರ್ಕಾರ ವಿಫಲತೆಯಾಗಿದೆ ಎಂದಿದ್ದಾರೆ.

ಪಶ್ಚಿಮಬಂಗಾಳದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ನಡೆಸುತ್ತಿರುವ ಬಗ್ಗೆ ಟೀಕಿಸಿದ ಪ್ರಿಯಾಂಕಾ ಗಾಂಧಿ, ಬಿಜೆಪಿ ಚುನಾವಣಾ ಪ್ರಚಾರದ ವೇದಿಕೆಗಳಿಂದ ದೊಡ್ಡದಾಗಿ ನಗುತ್ತಿದೆ. ಜನರು ಆಕ್ಸಿಜನ್​, ಬೆಡ್​, ಲಸಿಕೆ ಸಿಗದೆ ಅಳುತ್ತಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್​ ಮುಖಂಡ ರಣದೀಪ್ ಸುರ್ಜೇವಾಲಾ ಅವರೂ ದೇಶದಲ್ಲಿ ಆಕ್ಸಿಜನ್ ಕೊರತೆ ಆಗುತ್ತಿರುವ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಇಳಕಲ್ ಪಟ್ಟಣದ ಹಾಸ್ಟೆಲ್‌ಗಳಲ್ಲಿದ್ದ 11 ವಿದ್ಯಾರ್ಥಿಗಳಿಗೆ ಕೊರೊನಾ

ಕಲಬುರಗಿಯಲ್ಲಿ ಬರ್ಬರ ಹತ್ಯೆ; ಚಿಕಿತ್ಸೆ ಫಲಿಸದೆ ಆಟೋ ಚಾಲಕ ಸಾವು