ಕರ್ನಾಟಕಕ್ಕೆ ಗುಡ್ ನ್ಯೂಸ್; ಬೆಂಗಳೂರು-ಎರ್ನಾಕುಲಂ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರಕ್ಕೆ ಅನುಮೋದನೆ

ಎರ್ನಾಕುಲಂನಿಂದ ಬೆಂಗಳೂರಿಗೆ ವಂದೇ ಭಾರತ್ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರವು ಎರ್ನಾಕುಲಂನಿಂದ ತ್ರಿಶೂರ್ ಮತ್ತು ಪಾಲಕ್ಕಾಡ್ ಮೂಲಕ ಬೆಂಗಳೂರಿಗೆ ಹೊಸ ವಂದೇ ಭಾರತ್ ರೈಲನ್ನು ಮಂಜೂರು ಮಾಡಿದೆ. ಈ ಸೇವೆಯು ಬೆಂಗಳೂರಿಗರಿಗಿಂತ ಹೆಚ್ಚಾಗಿ ಕೇರಳಿಗರಿಗೆ ಅನುಕೂಲ ಕಲ್ಪಿಸಲಿದೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಕೇರಳದ ಜನರು ಹಬ್ಬದ ಋತುಗಳಲ್ಲಿ ಬಸ್, ವಿಮಾನಗಳ ಅತಿಯಾದ ಶುಲ್ಕದಿಂದ ಬೇಸತ್ತಿದ್ದರು. ಇದೀಗ ಈ ವಂದೇ ಭಾರತ್ ರೈಲು ಸಂಚಾರದಿಂದ ಬೆಂಗಳೂರಿಗೆ ಸಂಚರಿಸಲು ಸುಲಭವಾಗುತ್ತದೆ.

ಕರ್ನಾಟಕಕ್ಕೆ ಗುಡ್ ನ್ಯೂಸ್; ಬೆಂಗಳೂರು-ಎರ್ನಾಕುಲಂ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರಕ್ಕೆ ಅನುಮೋದನೆ
Vande Bharat Express

Updated on: Oct 08, 2025 | 10:57 PM

ಬೆಂಗಳೂರು, ಅಕ್ಟೋಬರ್ 8: ಕೇಂದ್ರ ಸರ್ಕಾರವು ಎರ್ನಾಕುಲಂ- ಬೆಂಗಳೂರು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು (Vande Bharat Express) ಸಂಚಾರಕ್ಕೆ ಅನುಮೋದನೆ ನೀಡಿದೆ. ಇದು ಕೇರಳದ ಎರ್ನಾಕುಲಂ ಅನ್ನು ತ್ರಿಶೂರ್ ಮತ್ತು ಪಾಲಕ್ಕಾಡ್ ಮೂಲಕ ಬೆಂಗಳೂರಿಗೆ ಸಂಪರ್ಕಿಸಲಿದೆ. ಬಿಜೆಪಿ ಕೇರಳ ರಾಜ್ಯ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಇಂದು ಈ ವಿಷಯವನ್ನು ಘೋಷಿಸಿದರು. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ರಾಜೀವ್ ಚಂದ್ರಶೇಖರ್ ಕೃತಜ್ಞತೆ ಸಲ್ಲಿಸಿದ್ದಾರೆ.

ನವೆಂಬರ್ ಮಧ್ಯಭಾಗದಲ್ಲಿ ವಂದೇ ಭಾರತ್ ರೈಲು ಸೇವೆ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಹೆಚ್ಚಿನ ಸಂಖ್ಯೆಯ ಕೇರಳಿಗರು ಅದರಲ್ಲೂ ವಿಶೇಷವಾಗಿ ಐಟಿ ವಲಯದಲ್ಲಿರುವವರು ಉದ್ಯೋಗದಲ್ಲಿರುವ ನಗರವಾದ ಬೆಂಗಳೂರನ್ನು ಸುಲಭವಾಗಿ ಸಂಪರ್ಕಿಸಲು ಈ ರೈಲು ಸೇವೆ ಬಹಳ ಸಹಕಾರಿಯಾಗಲಿದೆ. “ಧನ್ಯವಾದಗಳು ಮೋದಿ! ಎರ್ನಾಕುಲಂನಿಂದ ತ್ರಿಶೂರ್ ಮತ್ತು ಪಾಲಕ್ಕಾಡ್ ಮೂಲಕ ಬೆಂಗಳೂರಿಗೆ ವಂದೇ ಭಾರತ್ ರೈಲು ಮಂಜೂರು ಮಾಡಿದ್ದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು” ಎಂದು ರಾಜೀವ್ ಚಂದ್ರಶೇಖರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.


ಇದನ್ನೂ ಓದಿ: ಮೋದಿ ಚಾಲನೆ ನೀಡಿದ ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲಿನ ಟಿಕೆಟ್ ಎಷ್ಟು? ಇಲ್ಲಿದೆ ವೇಳಾಪಟ್ಟಿ

ಇನ್ನು, ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ನವೆಂಬರ್ ಮಧ್ಯದ ವೇಳೆಗೆ ಎರ್ನಾಕುಲಂ ಮತ್ತು ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಆರಂಭವಾಗಲಿದೆ. ಬಿಜೆಪಿಯ ಕೇರಳ ತಂಡದ ನಡುವೆ ನಡೆದ ವರ್ಚುವಲ್ ಸಭೆಯಲ್ಲಿ ಎರ್ನಾಕುಲಂ ಮತ್ತು ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪ್ರಾರಂಭಿಸುವ ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರ ಪ್ರಸ್ತಾಪವನ್ನು ಪರಿಗಣಿಸಲಾಯಿತು. ನವೆಂಬರ್ ಮಧ್ಯದ ವೇಳೆಗೆ ಈ ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಹಂಚಿಕೊಳ್ಳಲು ಸಂತೋಷವಾಗುತ್ತಿದೆ” ಎಂದು ಹೇಳಿದ್ದಾರೆ.


ಈ ಮಾರ್ಗದಲ್ಲಿ ಹೆಚ್ಚಿನ ರೈಲುಗಳ ಬೇಡಿಕೆ ಬಹಳ ಹಿಂದಿನಿಂದಲೂ ಇದೆ. ಒಂದು ತಿಂಗಳ ಹಿಂದೆಯೇ ರೈಲ್ವೆ ಸಚಿವರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದ್ದಾಗಿ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ. “ಇಷ್ಟು ಬೇಗ ಅನುಮೋದನೆಯ ನಿರ್ಧಾರ ತೆಗೆದುಕೊಂಡಿದ್ದಕ್ಕಾಗಿ ನಾವು ಅವರಿಗೆ ನಮ್ಮ ಧನ್ಯವಾದಗಳನ್ನು ಅರ್ಪಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಇಟಾನಗರದಲ್ಲಿ ಪ್ರಧಾನಿ ಮೋದಿ ರೋಡ್ ಶೋ; ವಂದೇ ಭಾರತ್ ಘೋಷಣೆ ಮೂಲಕ ಜನರಿಂದ ಭರ್ಜರಿ ಸ್ವಾಗತ

ಹಬ್ಬಗಳ ಸಮಯದಲ್ಲಿ ಬೆಂಗಳೂರಿಗೆ ಪ್ರಯಾಣಿಸುವ ಕೇರಳಿಗರು ಖಾಸಗಿ ಬಸ್ ನಿರ್ವಾಹಕರು ವಿಧಿಸುವ ಹೆಚ್ಚಿನ ದರಗಳನ್ನು ಎದುರಿಸುತ್ತಿದ್ದಾರೆ. ಇದರಿಂದಾಗಿ ಅನೇಕರು ತಮ್ಮ ಪ್ರಯಾಣವನ್ನೇ ರದ್ದುಪಡಿಸಲಬೇಕಾದ ಸಂದರ್ಭಗಳೂ ಸೃಷ್ಟಿಯಾಗುತ್ತಿವೆ. ಹೊಸ ವಂದೇ ಭಾರತ್ ರೈಲಿನ ಆರಂಭವು ಈ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ವೇಗವಾದ, ಹೆಚ್ಚು ಕೈಗೆಟುಕುವ ಸಂಚಾರದ ಆಯ್ಕೆಯನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಕೇರಳಕ್ಕೆ ಕಾರ್ಯನಿರ್ವಹಿಸುವ ಮೂರನೇ ವಂದೇ ಭಾರತ್ ರೈಲು ಆಗಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ