₹ 65 ಕೋಟಿ ವಂಚನೆ ಪ್ರಕರಣ: ಸಂಸತ್ ಭವನದಲ್ಲಿ ದೋಷವಿದೆ ಎಂದು ಹೇಳಿದ್ದ ವಾಸ್ತು ತಜ್ಞ ಬಂಧನ

|

Updated on: Feb 07, 2024 | 1:43 PM

Khushdeep Bansal: ಸಂಸತ್ ಭವನದಲ್ಲಿ ದೋಷವಿದೆ ಎಂದು ಹೇಳಿ ಸುದ್ದಿಯಾಗಿದ್ದ ವಾಸ್ತು ತಜ್ಞ ಖುಷ್ದೀಪ್ ಬನ್ಸಾಲ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. 65 ಕೋಟಿ ರೂ ವಂಚನೆ ಪ್ರಕರಣದಲ್ಲಿ ಬನ್ಸಾಲ್ ಹೆಸರು ಕೇಳಿ ಬಂದಿದ್ದು, ಅಸ್ಸಾಂ ಪೊಲೀಸರು ಇವರನ್ನು ಬಂಧಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಈ ಹಗರಣದಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡರೊಬ್ಬರ ಪುತ್ರನೂ ಭಾಗಿಯಾಗಿದ್ದಾನೆ ಎಂದು ಹೇಳಲಾಗಿದೆ.

₹ 65 ಕೋಟಿ ವಂಚನೆ ಪ್ರಕರಣ: ಸಂಸತ್ ಭವನದಲ್ಲಿ ದೋಷವಿದೆ ಎಂದು ಹೇಳಿದ್ದ ವಾಸ್ತು ತಜ್ಞ ಬಂಧನ
ಖುಷ್ದೀಪ್ ಬನ್ಸಾಲ್
Follow us on

ದೆಹಲಿ ಫೆಬ್ರುವರಿ 07: 1997 ರಲ್ಲಿ ಸುಪ್ರಸಿದ್ಧ ವಾಸ್ತು ತಜ್ಞ ಖುಷ್ದೀಪ್ ಬನ್ಸಾಲ್ (Khushdeep Bansal) ಅವರು ಸಂಸತ್ ಭವನದ ಗ್ರಂಥಾಲಯವು (Parliament House library) “ವಾಸ್ತು ದೋಷ” ಗಳನ್ನು ಹೊಂದಿದೆ, ಸರ್ಕಾರಗಳು ಬೀಳಲು ಕಾರಣ ಇದೇ ಕಾರಣ ಎಂದು ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಸುಮಾರು 30 ವರ್ಷಗಳ ನಂತರ, ಬನ್ಸಾಲ್ ಅವರ ಹೆಸರು ಮತ್ತೊಮ್ಮೆ ಕೇಳಿ ಬಂದಿದೆ. ಈ ಬಾರಿ ₹ 65 ಕೋಟಿ ಮೊತ್ತದ ಬೃಹತ್ ವಂಚನೆ ಪ್ರಕರಣದಲ್ಲಿ ಬನ್ಸಾಲ್ ಸುದ್ದಿಯಾಗಿದ್ದಾರೆ. ಅಸ್ಸಾಂ (Assam) ಪೊಲೀಸರು, ದೆಹಲಿ ಪೊಲೀಸರ ವಿಶೇಷ ಘಟಕದ ಸಹಯೋಗದೊಂದಿಗೆ ಬನ್ಸಾಲ್ ಮತ್ತು ಆತನ ಸಹೋದರನನ್ನು ಸೋಮವಾರ ಬಂಧಿಸಿದ್ದಾರೆ. ವಿಶೇಷ ಘಟಕ ಕೌಂಟರ್ ಇಂಟೆಲಿಜೆನ್ಸ್ ಯುನಿಟ್ (CI) ಬರಾಖಂಬಾ ಪ್ರದೇಶದಲ್ಲಿ ಈ ಬಂಧನ ನಡೆಸಿದೆ.

ಸೋಮವಾರ ಬೆಳಗ್ಗೆ ಅಸ್ಸಾಂ ಪೊಲೀಸರು ಆರೋಪಿಗಳನ್ನು ಟ್ರಾನ್ಸಿಟ್ ರಿಮಾಂಡ್‌ನಲ್ಲಿರಿಸಿದ್ದು ಈ ಆರೋಪಿಗಳು ₹ 65 ಕೋಟಿ ಸ್ವಾಯತ್ತ ಮಂಡಳಿ ಹಗರಣದಲ್ಲಿ ಆರೋಪವನ್ನು ಎದುರಿಸುತ್ತಿದ್ದಾರೆ. ಹಗರಣದಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡರೊಬ್ಬರ ಪುತ್ರನೂ ಭಾಗಿಯಾಗಿದ್ದಾನೆ.

ದೆಹಲಿ ಮೂಲದ ಸಬರ್ವಾಲ್ ಟ್ರೇಡಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್ ಮಾಲೀಕ ಕಮಲ್ ಸಬರ್ವಾಲ್ ಬನ್ಸಾಲ್ ವಿರುದ್ಧ ದೂರು ದಾಖಲಿಸಿದ್ದಾರೆ.

ಕಮಲ್ ಸಬರ್ವಾಲ್‌ಗೆ ಒಬ್ಬ ವ್ಯಕ್ತಿಯನ್ನು ಪರಿಚಯಿಸಿರುವುದಾಗಿ ಬನ್ಸಾಲ್ ದೆಹಲಿ ಪೊಲೀಸರಿಗೆ ಹೇಳಿದ್ದಾರೆ ಎಂದು ವರದಿಯಾಗಿದೆ. ಅದೇ ಸಮಯದಲ್ಲಿ, ಎಲ್ಲಾ ಆರೋಪಿಗಳು ಈಗ ಮುಂಚೂಣಿಗೆ ಬಂದಿರುವ  ದೊಡ್ಡ ಹಗರಣವನ್ನು ಸಂಘಟಿಸುವಲ್ಲಿ ಸಹಕರಿಸಿದ್ದಾರೆ ಎಂದು ಅಸ್ಸಾಂ ಪೊಲೀಸರು ಹೇಳುತ್ತಾರೆ.

ಬನ್ಸಾಲ್ ಅವರು ವಿವಿಧ ರಾಜ್ಯ ಸರ್ಕಾರದ ಯೋಜನೆಗಳ ಸಲಹೆಗಾರರಾಗಿದ್ದು ಪ್ರಖ್ಯಾತ ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳಿಗೆ ಕಾರ್ಯತಂತ್ರದ ಸಲಹೆಗಾರರಾಗಿದ್ದಾರೆ.

1997 ರಲ್ಲಿ, ಪಾರ್ಲಿಮೆಂಟ್ ಹೌಸ್ ಲೈಬ್ರರಿಯ ವಾಸ್ತು ದೋಷಗಳು ಸರ್ಕಾರದ ಅಸ್ಥಿರತೆಗೆ ಕಾರಣವಾಗುತ್ತಿವೆ ಎಂಬ ಅವರ ಹೇಳಿಕೆ ಭಾರೀ ಸುದ್ದಿಯಾಗಿತ್ತು. ಅವರ ಪ್ರಕಾರ, ಸಂಸತ್ ಮತ್ತು ಗ್ರಂಥಾಲಯ ಕಟ್ಟಡದ ನಡುವೆ ತಾಮ್ರದ ತಂತಿಗಳನ್ನು ನೆಲದಡಿಯಲ್ಲಿ ಇರಿಸುವುದರ ಮೂಲಕ “ಸಮತೋಲನವನ್ನು ಮರುಸ್ಥಾಪಿಸುವುದಾದರೆ ಅಕಾಲಿಕ ಕುಸಿತವನ್ನು ಎದುರಿಸದೆ ಸರ್ಕಾರಗಳು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿವೆ ಎಂದು ಅವರು ಪರಿಹಾರ ಮಾರ್ಗ ಸೂಚಿಸಿದ್ದರು.

ಖುಷ್ದೀಪ್ ಬನ್ಸಾಲ್ ಯಾರು?

ಮಾರ್ಚ್ 12, 1972 ರಂದು ಪಂಜಾಬ್‌ನಲ್ಲಿ ಜನನ. 51ರ ಹರೆಯದ ಖುಷ್ದೀಪ್ ಬನ್ಸಾಲ್ ನಾಗ್ಪುರ ವಿಶ್ವವಿದ್ಯಾಲಯದ ಎಂಐಇಟಿಯಿಂದ ಎಂಜಿನಿಯರಿಂಗ್ ಪದವೀಧರ ಎಂದು ಹೇಳಿಕೊಳ್ಳುತ್ತಾರೆ. ಅವರ ವೆಬ್‌ಸೈಟ್ ಪ್ರಕಾರ, ಬನ್ಸಾಲ್ ನಿಯಮಿತವಾಗಿ ವಾಸ್ತು ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಾರೆ ಇದುವರೆಗೆ 1,500 ಕ್ಕೂ ಹೆಚ್ಚು ವ್ಯಕ್ತಿಗಳಿಗೆ ಯಶಸ್ವಿಯಾಗಿ ತರಬೇತಿ ನೀಡಿದ್ದಾರೆ.

ವಾಸ್ತು ಶಾಸ್ತ್ರದ ಬಗ್ಗೆ ಎಂಟು ಪುಸ್ತಕಗಳನ್ನು ಬರೆದಿರುವ ಬನ್ಸಾಲ್ ಅವರು ಅನೇಕ ರಾಜ್ಯ ಸರ್ಕಾರದ ಯೋಜನೆಗಳಲ್ಲಿ ಸಲಹೆಗಾರರಾಗಿ ಮತ್ತು ಪ್ರಮುಖ ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳಿಗೆ ಕಾರ್ಯತಂತ್ರದ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿಜೆಪಿ ನಡ್ಡಾ, ಅಣ್ಣಾಮಲೈ ಸಮ್ಮುಖದಲ್ಲಿ ಎಐಎಡಿಎಂಕೆ ಮಾಜಿ ನಾಯಕರು ಬಿಜೆಪಿಗೆ ಸೇರ್ಪಡೆ

ಅವರ ವೆಬ್‌ಸೈಟ್ ಪ್ರಕಾರ, ಬನ್ಸಾಲ್ ಅವರು 1997 ರಲ್ಲಿ ಸಂಸತ್ ಭವನದಲ್ಲಿ ಲೈಬ್ರರಿ ನಿರ್ಮಾಣವನ್ನು ಆಡಳಿತ ಸರ್ಕಾರದ ಅಸ್ಥಿರತೆಗೆ ಮೂಲ ಕಾರಣವೆಂದು ಗುರುತಿಸಿದರು ಮತ್ತು ಅದನ್ನು ತಮ್ಮ ಪರಿಣತಿಯಿಂದ ಸರಿಪಡಿಸಿದರು. ಸರ್ಕಾರದ ಅಕಾಲಿಕ ಪತನಕ್ಕೆ ಪರಿಹಾರವಾಗಿ, ಸಂಸತ್ತು ಮತ್ತು ಗ್ರಂಥಾಲಯ ಕಟ್ಟಡದ ಕೆಳಗೆ ತಾಮ್ರದ ತಂತಿಗಳನ್ನು ಹಾಕಲು ಬನ್ಸಾಲ್ ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ. ಇದು ಸಮತೋಲನವನ್ನು ಪುನಃಸ್ಥಾಪಿಸುತ್ತದೆ ಮತ್ತು ಸರ್ಕಾರಗಳು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲು ಮತ್ತು ಆರಂಭಿಕ ಕುಸಿತವನ್ನು ತಡೆಯಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ